ಗುರುವಾರ , ಆಗಸ್ಟ್ 18, 2022
26 °C
ಮಕ್ಕಳ ಹಕ್ಕುಗಳ ರಕ್ಷಣಾ ಅಯೋಗ ಸದಸ್ಯರಿಂದ ಪರಿಶೀಲನೆ

ಅನಧಿಕೃತ ಕೋಚಿಂಗ್ ಸೆಂಟರ್‌ಗೆ ಬೀಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಘಟಗಿ: ಪಟ್ಟಣದ ಅನಧಿಕೃತ ಕೋಚಿಂಗ್ ಸೆಂಟರ್‌ಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಅಶೋಕ ಯರಗಟ್ಟಿ, ಜಿಲ್ಲಾ ಘಟಕದ ಅಧ್ಯಕ್ಷೆ ಡಾ. ಕಮಲಾ ಬೈಲೂರ್ ಅವರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಅನುಮತಿ ಪಡೆಯದ ಅನಧಿಕೃತ ಆರು ಕೋಚಿಂಗ್ ಸೆಂಟರ್‌ಗಳಿಗೆ ಸ್ಥಳೀಯ ಆಡಳಿತ ಬೀಗಹಾಕಿತು.

ತಾಲ್ಲೂಕಿನ ಮುಕ್ಕಲ ಗ್ರಾಮದ ನೀಲಕಂಠಗೌಡ ಪಾಟೀಲ ಎಂಬುವರು ಪಟ್ಟಣದ ಅನಧಿಕೃತ ಕೋಚಿಂಗ್ ಸೆಂಟರ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಆಯೋಗದ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ಅವರು ಪಟ್ಟಣದ ಮಲೆನಾಡು ಹಾಗೂ ಆರ್ಯಭಟ ಕೋಚಿಂಗ್ ಸೆಂಟರ್ ಗಳಿಗೆ ಈ ಹಿಂದೆ ಭೇಟಿ ನೀಡಿದಾಗ ಶಿಕ್ಷಣ ಇಲಾಖೆ ಹಾಗೂ ಅಥವಾ ಸಂಬಂಧಿಸಿದ ಪ್ರಾಧಿಕಾರದಿಂದ ಅನುಮತಿ ಪಡೆಯದಿರುವುದು ಬೆಳಕಿಗೆ ಬಂದಿತ್ತು.

ಮಕ್ಕಳಿಗೆ ತರಬೇತಿ ನೀಡುತ್ತಿರುವ ಜಾಗ ಆರೋಗ್ಯದ ಹಿತದೃಷ್ಟಿಯಿಂದ ಯೋಗ್ಯವಾಗಿಲ್ಲ. ಶಾಲೆಗಳು ಪ್ರಾರಂಭವಾದರೂ ಅನಧಿಕೃತವಾಗಿ ತರಬೇತಿ ನೀಡಲಾಗುತ್ತಿದೆ ಎಂದು ಎಲ್ಲ ಕೋಚಿಂಗ್ ಸೆಂಟರ್‌ಗಳಿಗೆ ಜೂನ್ 14ರಂದು ನೋಟಿಸ್ ಜಾರಿ ಮಾಡಿದ್ದರು. ಅನಧಿಕೃತ ಸೆಂಟರ್‌ಗಳನ್ನು ತೆರವು ಮಾಡಿ ಈ ಬಗ್ಗೆ ಮಾಹಿತಿ ನೀಡಬೇಕು, ಇಲ್ಲವಾದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಶಿಕ್ಷಣ ಸಂಯೋಜಕ ಪುಟ್ಟಪ್ಪ ಭಜಂತ್ರಿ, ಕ್ಷೇತ್ರ ಸಮನ್ವಯಾಧಿಕಾರಿ ಕುಮಾರ್ ಕೆ. ಎಫ್, ಸಿಪಿಐ ಶ್ರೀಶೈಲ ಕೌಜಲಗಿ, ತಾಲ್ಲೂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಎಂ, ಬಿ.ವೈ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.