ಗುರುವಾರ , ಆಗಸ್ಟ್ 5, 2021
21 °C

ಹುಡಾದಿಂದ ಅನಧಿಕೃತ ಬಡಾವಣೆ ನೆಲಸಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರ ಹೊರವಲಯದಲ್ಲಿ ತಲೆ ಎತ್ತಿರುವ ಅನಧಿಕೃತ ಬಡಾವಣೆಗಳ ತೆರವಿಗೆ ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ(ಹುಡಾ) ಮುಂದಾಗಿದೆ.

ಹಳೇ ಹುಬ್ಬಳ್ಳಿಯ ಆನಂದನಗರದಿಂದ ರಾಯನಾಳ ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಮಕ್ಕಳಗೇರಿ ಎಂಬುವವರು ನಿರ್ಮಿಸಿದ್ದ ಹೊಸ ಅನಧಿಕೃತ ಬಡಾವಣೆಯನ್ನು ಬುಧವಾರ ತೆರವು ಮಾಡಲಾಯಿತು. ಬೆಳಿಗ್ಗೆ ಜೆಸಿಬಿ ಯಂತ್ರಗಳೊಂದಿಗೆ ತೆರಳಿದ ಹುಡಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಲ್ಲಿನ ಚರಂಡಿ, ರಸ್ತೆ ಹಾಗೂ ನೀರಿನ ಸಂಪರ್ಕ ಮಾರ್ಗ ತೆರವು ಮಾಡಿದರು.

ಕಾರ್ಯಾಚರಣೆಯ ವಿಷಯ ತಿಳಿದು ಸ್ಥಳಕ್ಕೆ ಬಂದ ಮಾಲೀಕರು, ಬಡಾವಣೆ ಅಭಿವೃದ್ಧಿಗೆ ಸಾಕಷ್ಟು ವೆಚ್ಚ ಮಾಡಿದ್ದೇವೆ. ತೆರವು ಮಾಡಿದರೆ ನಷ್ಟಕ್ಕೆ ಒಳಗಾಗುತ್ತೇವೆ. ಬಡಾವಣೆಯ ವಿನ್ಯಾಸವನ್ನು ಕಾನೂನುಬದ್ಧವಾಗಿ ಮಾರ್ಪಡಿಸಿ ಅನುಮೋದನೆ ಪಡೆಯಲು ಆರು ತಿಂಗಳ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರು, ಕಾರ್ಯಾಚರಣೆ ನಿಲ್ಲಿಸಲು ಸೂಚಿಸಿದರು.

ಕೃಷಿಯೇತರ ಭೂಮಿಯಲ್ಲಿ ಬಡಾವಣೆ ನಿರ್ಮಿಸಲು ನಿಗದಿಯಂತೆ ರಸ್ತೆ, ಚರಂಡಿ, ಉದ್ಯಾನಕ್ಕೆ ಜಾಗ ಮೀಸಲಿಡಬೇಕು. ಆದರೆ, ಬಹುತೇಕ ಬಡಾವಣೆ ಮಾಲೀಕರು ನಿಯಮ ಉಲ್ಲಂಘಿಸಿದ್ದಾರೆ. ಹುಬ್ಬಳ್ಳಿಯಲ್ಲಿ 30, ಧಾರವಾಡದಲ್ಲಿ 27 ಅನಧಿಕೃತ ಬಡಾವಣೆಗಳಿವೆ. ಅವುಗಳ ಮಾಲೀಕರಿಗೆ ಈಗಾಗಲೇ ನೋಟಿಸ್‌ ನೀಡಲಾಗಿತ್ತು. ಮಂಗಳವಾರದಿಂದ ತೆರವು ಕಾರ್ಯಾಚರಣೆ ಆರಂಭಿಸಿದ್ದೇವೆ ಎಂದು ನಾಗೇಶ ಕಲಬುರ್ಗಿ ಪ್ರಜಾವಾಣಿಗೆ ತಿಳಿಸಿದರು.

ಮಂಗಳವಾರ ಗಬ್ಬೂರು ರಸ್ತೆಯಲ್ಲಿ ನಾಲ್ಕು ಅನಧಿಕೃ ಬಡಾವಣೆಗಳನ್ನು ತೆರವು ಮಾಡಲಾಗಿದೆ. ನಿವೇಶನಗಳಲ್ಲಿ ಹಾಕಿದ್ದ ಕಲ್ಲು, ನಾಮಫಲಕ ಹಾಗೂ ರಸ್ತೆಗಳನ್ನು ಧ್ವಂಸ ಮಾಡಲಾಗಿದೆ. ಪೊಲೀಸ್‌ ಭದ್ರತೆಯಲ್ಲಿ ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ ನಿವೇಶನ ಮಾಲೀಕರು ಅಲ್ಲಿಂದ ಪರಾರಿಯಾಗಿದ್ದಾರೆ. ಅವರಿಗೂ ಎಚ್ಚರಿಕೆ ಸಂದೇಶ ನೀಡಿದ್ದೇವೆ ಎಂದು ತಿಳಿಸಿದರು.

ಮಂಟೂರು ರಸ್ತೆಯಲ್ಲಿ 25ಕ್ಕೂ ಹೆಚ್ಚು ಅನಧಿಕೃತ ಬಡಾವಣೆಗಳು ತಲೆಎತ್ತಿದ್ದು, ಗುರುವಾರ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು