ಸಹಾಯಧನದ ನಿರೀಕ್ಷೆ ಬಿಡಿ; ನವೋದ್ಯಮಿಗಳಿಗೆ ಸಲಹೆ

7
ದೇಶಪಾಂಡೆ ಫೌಂಡೇಶನ್‌ನ ಸ್ಯಾಂಡ್‌ಬಾಕ್ಸ್‌ ಸ್ಟಾಟ್‌ಅಫ್‌ ಇನ್‌ಕ್ಯುಬೇಷನ್‌ ಕೇಂದ್ರ ಉದ್ಘಾಟಿಸಿದ ಅಮಿತಾಬ್‌ ಕಾಂತ್‌

ಸಹಾಯಧನದ ನಿರೀಕ್ಷೆ ಬಿಡಿ; ನವೋದ್ಯಮಿಗಳಿಗೆ ಸಲಹೆ

Published:
Updated:
ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್‌ ವತಿಯಿಂದ ನಿರ್ಮಾಣಗೊಂಡಿರುವ ಸ್ಯಾಂಡ್‌ಬಾಕ್ಸ್‌ ಸ್ಟಾರ್ಟ್‌ಅಪ್‌ ಇನ್‌ಕ್ಯುಬೇಷನ್‌ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಬ್‌ ಕಾಂತ್‌ ಮಾತನಾಡಿದರು

ಹುಬ್ಬಳ್ಳಿ: ಸರ್ಕಾರ ನೀಡುವ ಸಹಾಯಧನದ ಆಸೆ, ನಿರೀಕ್ಷೆ ಬಿಟ್ಟು ಉದ್ಯಮವನ್ನು ಆರಂಭಿಸಿದರೆ ಮಾತ್ರ ನವೋದ್ಯಮಿಗಳು ಯಶಸ್ವಿಯಾಗಲು ಸಾಧ್ಯ ಎಂದು ಕೇಂದ್ರ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಬ್‌ ಕಾಂತ್‌ ಸಲಹೆ ನೀಡಿದರು.

ಇಲ್ಲಿನ ವಿಮಾನನಿಲ್ದಾಣ ಸಮೀಪ ದೇಶಪಾಂಡೆ ಫೌಂಡೇಶನ್‌ ವತಿಯಿಂದ ನಿರ್ಮಾಣಗೊಂಡಿರುವ ಸ್ಯಾಂಡ್‌ಬಾಕ್ಸ್‌ ಸ್ಟಾರ್ಟ್‌ಅಪ್‌ ಇನ್‌ಕ್ಯುಬೇಷನ್‌ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಇನ್‌ಕ್ಯುಬೇಷನ್‌ ಕೇಂದ್ರಗಳಿಗೆ ಮತ್ತು ನವೋದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಕಾನೂನು ಸರಳಗೊಳಿಸಿದೆ ಎಂದರು ಹೇಳಿದರು.

ನಿಜವಾದ ನವೋದ್ಯಮಿಗಳು ಹುಬ್ಬಳ್ಳಿಯಂತಹ ದ್ವಿತೀಯ ದರ್ಜೆ(ಟು ಟಯರ್‌ ಸಿಟಿ) ನಗರಗಳಿಂದ ಹೊರಬರುತ್ತಿದ್ದಾರೆಯೇ ಹೊರತು ದೊಡ್ಡ, ದೊಡ್ಡ ನಗರಗಳಿಂದಲ್ಲ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಮಾರುಕಟ್ಟೆ, ಕೃಷಿ, ನೀರಾವರಿ, ಆರೋಗ್ಯ ಮತ್ತಿತರರ ಕ್ಷೇತ್ರಗಳಲ್ಲಿ ಅವಕಾಶಗಳು ಹೇರಳವಾಗಿದ್ದು, ಇವುಗಳಲ್ಲಿ ನವೋದ್ಯಮಿಗಳಿಗೆ ತೊಡಗಿಸಿಕೊಳ್ಳಬೇಕಿದೆ ಎಂದು ಹೇಳಿದರು.

ದೇಶದ ತಾಂತ್ರಿಕ ಕ್ಷೇತ್ರದಲ್ಲಿ ಅದರಲ್ಲೂ ಡಿಜಿಟಲಿಕರಣದಲ್ಲಿ ಭಾರೀ ಬದಲಾವಣೆಯಾಗಿದೆ. ಮುಂದಿನ ನಾಲ್ಕೈದು ವರ್ಷದಲ್ಲಿ ಆನ್‌ಲೈನ್‌ ವ್ಯವಹಾರಗಳು ಶೇ 99ರಷ್ಟು ಆಗಲಿದ್ದು, ಇಡೀ ಜಗತ್ತೇ ಭಾರತದತ್ತ ನೋಡುವಷ್ಟು ಡಿಜಿಟಲಿಕರಣದಲ್ಲಿ ಬೆಳವಣಿಗೆಯಾಗಲಿದೆ ಎಂದು ಅವರು ಹೇಳಿದರು.

ಪ್ರಸ್ತುತ ಇರುವ ದೇಶದ ಜಿಡಿಪಿ ದರವು 9ರಿಂದ 10ಕ್ಕೆ ಏರಿಕೆಯಾಗಬೇಕಿದೆ. ಈ ನಿಟ್ಟಿನಲ್ಲಿ ಅಭಿವೃದ್ಧಿಯ ವೇಗ ಇನ್ನಷ್ಟು ಹೆಚ್ಚಳವಾಗಬೇಕಿದೆ ಎಂದರು.

ಹಳೇ ಶಿಕ್ಷಣ ಪದ್ಧತಿಯಿಂದ ಹೊರಬಂದು ಸಂಶೋಧನಾತ್ಮಕ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ನೀತಿ ಆಯೋಗವು ದೇಶದ ವಿವಿಧ ಶಾಲಾ, ಕಾಲೇಜುಗಳಲ್ಲಿ ಮೂರು ಸಾವಿರ ಪ್ರಯೋಗಾಲಯ(ಟಿಂಕರಿಂಗ್‌ ಲ್ಯಾಬ್‌)ಗಳನ್ನು ಆರಂಭಿಸಿದೆ ಎಂದರು.

ದೇಶದ ಅತ್ಯಂತ ಹಿಂದುಳಿದ 150 ಜಿಲ್ಲೆಗಳ ಅಭಿವೃದ್ಧಿಗೆ ನೀತಿ ಆಯೋಗವು ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಹೇಳಿದರು.

ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಗುರುರಾಜ ದೇಶಪಾಂಡೆ, 6.09 ಎಕರೆ ಪ್ರದೇಶದಲ್ಲಿ ನೂತನ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿರುವ ಇನ್‌ಕ್ಯುಬೇಷನ್‌ ಕೇಂದ್ರವು ತಯಾರಕರ ಪ್ರಯೋಗಶಾಲೆಯಾಗಿದೆ. ಇಎಸ್‌ಡಿಎಂ ಕ್ಲಸ್ಟರ್‌ ಸೇರಿದಂತೆ ಪೂರ್ಣ ಪ್ರಮಾಣದ ಸೌಲಭ್ಯಗಳನ್ನು ಹೊಂದಿರುವ ದೇಶದ ಏಕೈಕ ಇನ್‌ಕ್ಯುಬೇಷನ್‌ ಕೇಂದ್ರ ಇದಾಗಿದೆ. ನವೋದ್ಯಮಿಗಳಿಗೆ ಈ ಕೇಂದ್ರದಲ್ಲಿ ವಿವಿಧ ಸೌಲಭ್ಯಗಳು ಲಭ್ಯವಿವೆ ಎಂದು ಹೇಳಿದರು.

ಭಾರತದಲ್ಲಿ ಸುಮಾರು 110 ಕೋಟಿ ಜನರು ಗ್ರಾಮೀಣ ಮತ್ತು ಅರೆನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಬೃಹತ್‌ ಮತ್ತು ಮೆಟ್ರೊ ನಗರಗಳಲ್ಲಿ ವಾಸಿಸುತ್ತಿರುವ ಜನರಿಗಿಂತ ಗ್ರಾಮೀಣ ಮತ್ತು ನಗರ ಪ್ರದೇಶದ ಜನರು ಎದುರಿಸುತ್ತಿರುವ ಸಮಸ್ಯೆಗಳು ತೀರಾ ಭಿನ್ನವಾಗಿವೆ. ಹಾಗೆಯೇ ಆ ಸಮಸ್ಯೆಗಳಿಗೆ ವಿಭಿನ್ನ ರೀತಿಯ ಪರಿಹಾರ ಕಂಡುಕೊಳ್ಳಲು ಸ್ಯಾಂಡ್‌ ಬಾಕ್ಸ್‌ ಸ್ಟಾರ್ಟ್‌ಅಪ್‌ ಕೇಂದ್ರವು ಶ್ರಮಿಸುತ್ತಿದೆ ಎಂದರು.

ಟಾಟಾ ಕಂಪನಿಯ ಟ್ರಸ್ಟಿ ಮನೋಜ್‌ಕುಮಾರ್‌ ಮಾತನಾಡಿದರು.

ಅತ್ಯಾಧುನಿಕ ವ್ಯವಸ್ಥೆ ಹೊಂದಿರುವ ಸ್ಯಾಂಡ್‌ಬಾಕ್ಸ್‌ ಸ್ಟಾರ್ಟ್‌ಅಪ್‌ ಇನ್‌ಕ್ಯುಬೇಷನ್‌ ಕೇಂದ್ರವು ಉತ್ಸಾಹಿ ಉದ್ಯಮಿಗಳಿಗೆ ಶಕ್ತಿ ಮತ್ತು ಸ್ಪೂರ್ತಿ ತುಂಬುವಂತಿದೆ
- ಅಮಿತಾಬ್‌ ಕಾಂತ್‌ಸಿಇಒ, ಕೇಂದ್ರ ನೀತಿ ಆಯೋಗ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !