ಜೋಶಿಯನ್ನೂ ಒಳಗೊಂಡು 23 ಸಂಸದರ ಆಯ್ಕೆ

ಶುಕ್ರವಾರ, ಏಪ್ರಿಲ್ 26, 2019
35 °C
ವಿಜಯ ಸಂಕಲ್ಪ ಸಮಾವೇಶದಲ್ಲಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ

ಜೋಶಿಯನ್ನೂ ಒಳಗೊಂಡು 23 ಸಂಸದರ ಆಯ್ಕೆ

Published:
Updated:
Prajavani

ಧಾರವಾಡ: ‘ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ ಜೋಶಿ ಸೇರಿದಂತೆ 23 ಬಿಜೆಪಿ ಸಂಸದರನ್ನು ದೆಹಲಿಗೆ ಕರೆದುಕೊಂಡು ಹೋಗುತ್ತೇವೆ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಅಮ್ಮಿನಭಾವಿಯಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನರೇಂದ್ರ ಮೋದಿ ಅವರೇ ಪ್ರಧಾನಿಯಾಗಬೇಕು ಎಂದು ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿ ಅವರೇ ಹೇಳುತ್ತಿದ್ದಾರೆ. ಇಡೀ ಜಗತ್ತೇ ಅಚ್ಚರಿ ಪಡುವ ರೀತಿಯಲ್ಲಿ ಮೋದಿ ಕೆಲಸ ಮಾಡಿದ್ದಾರೆ. ಹೀಗಾಗಿ ನಾವು ಅವರ ಹೆಸರಿನಲ್ಲೇ ಮತ ಕೇಳುತ್ತಿದ್ದೇವೆ’ ಎಂದರು.

‘ಆದಾಯ ತೆರಿಗೆ ದಾಳಿ ಮೂಲಕ ಲೂಟಿಕೋರರನ್ನು ಬಗ್ಗುಬಡಿಯಲಾಗುತ್ತಿದೆ. ಆದರೆ ಲೂಟಿಕೋರರನ್ನು ರಕ್ಷಿಸುವ ಕೆಲಸವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡುತ್ತಿದ್ದಾರೆ. ಸಾಲ ಮನ್ನಾ ಮಾಡುತ್ತೇನೆ ಎಂದ ಜೋಕರ್‌ ಸಿಎಂ ಇವರು. 37 ಸ್ಥಾನ ಗೆದ್ದವರು ಮುಖ್ಯಮಂತ್ರಿ ಆಗುತ್ತಾರೆ. 104 ಸ್ಥಾನ ಗೆದ್ದ ನಾವು ವಿರೋಧಪಕ್ಷದಲ್ಲಿ ಕೂರುವ ಸ್ಥಿತಿ ರಾಜ್ಯದಲ್ಲಿದೆ’ ಎಂದರು.

‘ದೇಶದಲ್ಲಿ ಕಮಲದ ಅಲೆ ಹೇಗೆದೆ ಎಂದರೆ ತುಮಕೂರಿನಲ್ಲಿ ದೇವೇಗೌಡರು ಸೋತರು ಆಶ್ಚರ್ಯಪಡಬೇಕಾಗಿಲ್ಲ. ಲೋಕಸಭಾ ಚುಣಾವಣೆ ನಂತರ ಸಮ್ಮಿಶ್ರ ಸರ್ಕಾರ ತನ್ನಿಂದ ತಾನೇ ಉರಳಲಿದೆ. ನಾವೇನೂ ಸರ್ಕಾರ ಕೆಡವಲು ಅವಸರಪಡುವುದಿಲ್ಲ. ತಾವಾಗಿಯೇ ಬಡಿದಾಡಿಕೊಂಡು ಸ್ಥಾನ ಬಿಟ್ಟುಕೊಡುತ್ತಾರೆ’ ಎಂದು ಯಡಿಯೂರಪ್ಪ ಹೇಳಿದರು.

‘ರೈತರ ಬೆಳೆಗೆ ವೈಜ್ಞಾನಿಕ ಬೆಲೆ, ಪಿಂಚಣಿ, ರಾಜಕೀಯದಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ, ನದಿಗಳ ಜೋಡಣೆಯಂತ ಕ್ರಾಂತಿಕಾರಿ ನಿರ್ಧಾರಗಳನ್ನು ಮೋದಿ ಅವರು ತೆಗೆದುಕೊಳ್ಳಲಿದ್ದಾರೆ. ಹೀಗಾಗಿ ಬೂತ್ ಮಟ್ಟದ ಕಾರ್ಯಕರ್ತರು ಪ್ರಚಾರ ಕಾರ್ಯ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲುವಂತೆ ಮಾಡಬೇಕು’ ಎಂದರು.

ಶಾಸಕ ಜಗದೀಶ ಶೆಟ್ಟರ್‌ ಮಾತನಾಡಿ, ‘ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡಾ ನರೇಂದ್ರ ಮೋದಿ ಪ್ರಧಾನಿಯಾಗಲಿ ಎಂದು ಆಶಿಸಿದ್ದಾರೆ. ಚುನಾವಣೆ ನಂತರ ಮೋದಿ ವಿರುದ್ಧ ಸೇರಿರುವ ಮಹಾಘಟಕಬಂಧನವನ್ನು ದುರ್ಬಿನ್ ಹಾಕಿ ಹುಡುಕಬೇಕು. ಪುಟ್ಟ ಮಗು ಪ್ರಧಾನಿ ಅಭ್ಯರ್ಥಿ, ಮತ್ತೊಂದು ‍ಪಕ್ಷ ಕುಟುಂಬ ರಾಜಕಾರಣದಲ್ಲಿ ಕಾಲ ಕಳೆಯುತ್ತಿದೆ. ಇಬ್ಬರು ಮೊಮ್ಮಕ್ಕಳನ್ನು ಚುನಾವಣೆಗೆ ನಿಲ್ಲಿಸಿರುವ ಜೆಡಿಎಸ್‌, ದೇವೇಗೌಡರ ಪತ್ನಿ ಚೆನ್ನಮ್ಮ ಅವರನ್ನು ಕಣಕ್ಕಿಳಿಸಿದರೂ ಆಶ್ಚರ್ಯಪಡಬೇಕಾಗಿಲ್ಲ’ ಎಂದು ಲೇವಡಿ ಮಾಡಿದರು.

ಶಾಸಕ ಅವರಿಂದ ಬೆಲ್ಲದ ಮಾತನಾಡಿ, ‘ಹಿಂದಿನ ಜಿಲ್ಲಾ ಮಂತ್ರಿಗೆ ಅಭಿವೃದ್ಧಿ ಎಂಬುದನ್ನು ತೋರಿಸಿದವರೇ ಪ್ರಹ್ಲಾದ ಜೋಶಿ. ಐಐಟಿ, ಐಐಐಟಿ ಸೇರಿದಂತೆ ವಿವಿಧ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ. ತೋಳು ತೋರಿಸುವವರಿಗೆ, ದೊಡ್ಡ ಬಾಯಿ ಮಾಡುವವರ ಬಾಯಿ ಮುಚ್ಚಿಸಿದ ಮತದಾರರು ಗ್ರಾಮೀಣ ಭಾಗದವರು. ಇದು ಜೋಶಿ ಅವರ ಚುನಾವಣೆ ಅಲ್ಲ, ದೇಶದ ಚುನಾವಣೆ ಎಂದು ಎಲ್ಲರೂ ಪರಿಗಣಿಸಬೇಕು’ ಎಂದರು.

ಅಭ್ಯರ್ಥಿ ಪ್ರಹ್ಲಾದ ಜೋಶಿ ಮಾತನಾಡಿ, ‘ನರೇಂದ್ರ ಮೋದಿ ಅವರು ಕಾಯಕಯೋಗಿಯಾಗಿ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಪಾಕಿಸ್ತಾನವನ್ನು ಜಾಗತಿಮಟ್ಟದಲ್ಲಿ ಒಂಟಿಯನ್ನಾಗಿಸಿದ್ದಾರೆ. ಇನ್ನೂ ಐದು ವರ್ಷ ಮೋದಿ ಪ್ರಧಾನಿಯಾಗಿ ಮುಂದುವರಿದರೆ ಭಯೋತ್ಪಾದನೆ ಎನ್ನುವುದೇ ಇರುವುದಿಲ್ಲ. ರೈತರಿಗೆ ₹5ಸಾವಿರ ಪಿಂಚಣಿ ನೀಡುವುದನ್ನು ಪ್ರಣಾಳಿಕೆಯಲ್ಲಿ ಸೇರಿಸಿರುವ ಕಾಂಗ್ರೆಸ್ ಜನರಿಗೆ ಟೋಪಿ ಹಾಕುತ್ತಿದೆ. ಸೈನಿಕರ ಸ್ವಾತಂತ್ರ್ಯ ಕಸಿದುಕೊಳ್ಳುವ ಹೇಡಿತನದ ಪ್ರಣಾಳಿಕೆಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ’ ಎಂದು ಜರಿದ ಅವರು ತಮ್ಮ ಸಾಧನೆಗಳನ್ನು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !