ಮಂಗಳವಾರ, ನವೆಂಬರ್ 24, 2020
22 °C
ಹುಬ್ಬಳ್ಳಿಯಲ್ಲಿ 1,400 ಮೀಟರ್‌ ಬದಲು 1,505 ಮೀಟರ್‌ಗೆ ಹೆಚ್ಚಿಸಲು ನಿರ್ಧಾರ

ಹುಬ್ಬಳ್ಳಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ ಉದ್ದ ಹೆಚ್ಚಳ

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ರೈಲು ನಿಲ್ದಾಣದಲ್ಲಿ ಈಗಿರುವ ಪ್ಲಾಟ್‌ ಫಾರ್ಮ್‌ ಉದ್ದವನ್ನು ಹೆಚ್ಚಿಸಲಾಗುತ್ತಿದ್ದು, 2021ರ ಜನವರಿ ಅಂತ್ಯದ ವೇಳೆಗೆ ಹುಬ್ಬಳ್ಳಿಯಲ್ಲಿ ವಿಶ್ವದಲ್ಲೇ ಉದ್ದನೆಯ ರೈಲ್ವೆ ಪ್ಲಾಟ್‌ ಫಾರ್ಮ್‌ ಸಿದ್ಧಗೊಳ್ಳಲಿದೆ. 

ಈಗಿರುವ ಒಂದನೇ ಪ್ಲಾಟ್‌ಫಾರ್ಮ್‌ 550 ಮೀಟರ್‌ ಉದ್ದವಿದ್ದು, ಇದನ್ನು ಮೊದಲು 1,400 ಮೀಟರ್‌ಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿತ್ತು. ನೈರುತ್ಯ ರೈಲ್ವೆಯು ಈಗ ಇದರ ಉದ್ದವನ್ನು 1,505 ಮೀಟರ್‌ಗೆ ಹೆಚ್ಚಿಸಲು ಮುಂದಾಗಿದೆ.

ಈಶಾನ್ಯ ರೈಲ್ವೆಯ ಪ್ರಧಾನ ಕಚೇರಿ ಹೊಂದಿರುವ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 1,366 ಮೀಟರ್‌ ಉದ್ದದ ಪ್ಲಾಟ್‌ಫಾರ್ಮ್‌ ಇದ್ದು, ಇದು ಸದ್ಯಕ್ಕೆ ವಿಶ್ವದ ಅತಿ ಉದ್ದದ ಪ್ಲಾಟ್‌ಫಾರ್ಮ್‌ ಎನ್ನುವ ಹೆಗ್ಗಳಿಕೆ ಹೊಂದಿದೆ. 2013ರಲ್ಲಿ ನವೀಕರಣ ಮಾಡಿದ್ದಾಗ ಉದ್ದದ ಪ್ಲಾಟ್ ಫಾರ್ಮ್‌ ಎಂದು ಘೋಷಣೆಯಾಗಿತ್ತು. ಹುಬ್ಬಳ್ಳಿಯಲ್ಲಿನ ಕಾಮಗಾರಿ ಪೂರ್ಣಗೊಂಡರೆ ಈ ಗೌರವ ವಾಣಿಜ್ಯ ನಗರಿ ಪಾಲಾಗಲಿದೆ.

ಇಲ್ಲಿನ ಕಾಮಗಾರಿ 2019ರ ನವೆಂಬರ್‌ನಲ್ಲಿ ಆರಂಭವಾದ ಕೆಲ ತಿಂಗಳಲ್ಲಿ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ಕೆಲಸ ಸ್ಥಗಿತಗೊಂಡಿತ್ತು. ಈಗ ಪಶ್ಚಿಮ ಬಂಗಾಳ, ಆಂಧ್ರ ಮತ್ತು ತಮಿಳುನಾಡು ರಾಜ್ಯಗಳಿಂದ ಕಾರ್ಮಿಕರು ಮರಳಿದ್ದು, ಕಾಮಗಾರಿ ವೇಗವಾಗಿ ಸಾಗುತ್ತಿದೆ. ಸ್ಥಳೀಯ ಕಾರ್ಮಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಬರುತ್ತಿದ್ದಾರೆ. ಅಂದಾಜು ₹90 ಕೋಟಿ ವೆಚ್ಚದಲ್ಲಿ ಪ್ಲಾಟ್‌ ಫಾರ್ಮ್‌ ನಿರ್ಮಾಣವಾಗುತ್ತಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ‘ಕೋವಿಡ್ ಕಾರಣಕ್ಕೆ ಹೊರರಾಜ್ಯಗಳ ಕಾರ್ಮಿಕರ ಕೊರತೆ ತೀವ್ರವಾಗಿ ಕಾಡಿತ್ತು. ಈಗ ಕಾರ್ಮಿಕರು ಮರಳಿದ್ದು, ನಿಗದಿತ ಅವಧಿಯ ಒಳಗೆ ಪ್ಲಾಟ್ ಫಾರ್ಮ್ ಸಿದ್ಧಗೊಳ್ಳಲಿದೆ. ಮೊದಲಿನ ಯೋಜನೆ ಪ್ರಕಾರ ಮುಂದಿನ ವರ್ಷ ಜೂನ್ ವೇಳೆಗೆ ಮುಗಿಯಬೇಕಿತ್ತು. ಈಗ 250ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಜನವರಿಯಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ’ ಎಂದರು.

ವಿಶ್ವದ ಅತಿ ಉದ್ದನೆಯ ಪ್ಲಾಟ್‌ ಫಾರ್ಮ್‌ ನಿರ್ಮಾಣ ಹುಬ್ಬಳ್ಳಿ ಮತ್ತು ಬೆಂಗಳೂರು ನಡುವಿನ ಜೋಡಿ ಮಾರ್ಗದ ಭಾಗವಾಗಿದೆ. ನಿಗದಿತ ಸಮಯಕ್ಕೆ ಮೊದಲೇ ಕೆಲಸ ಮುಗಿಯಲಿದೆ ಎಂದು ಮುಖ್ಯಸಾರ್ವಜನಿಕ ಸಂಪರ್ಕಾಧಿಕಾರಿ, ನೈರುತ್ಯ ರೈಲ್ವೆ ಇ. ವಿಜಯಾ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು