ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ರಕ್ತದಾನಿಗಳ ಸಂಖ್ಯೆ ಹೆಚ್ಚಳ

ಕೋವಿಡ್‌ ಬಳಿಕ ಸಹಜ ಸ್ಥಿತಿಯತ್ತ ರಕ್ತ ಸಂಗ್ರಹ ಪ್ರಮಾಣ
Last Updated 5 ಮಾರ್ಚ್ 2022, 9:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಸೋಂಕು ಭೀತಿಯ ನಡುವೆಯೂ ಜಗತ್ತು ಸಹಜ ಸ್ಥಿತಿಗೆ ಬರುತ್ತಿರುವಂತೆಯೇ ಜಿಲ್ಲೆಯಲ್ಲಿ ರಕ್ತ ಸಂಗ್ರಹ ಪ್ರಮಾಣವೂ ಸಹಜ ಸ್ಥಿತಿಗೆ ತಲುಪುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 12 ಪ್ರಮುಖ ರಕ್ತನಿಧಿ ಕೇಂದ್ರಗಳಿವೆ. ಅಲ್ಲದೆ, ಸ್ವಯಂ ಸೇವಾ ಸಂಸ್ಥೆಗಳು, ಜನಪ್ರತಿನಿಧಿಗಳು, ಗಣ್ಯರು ಹಾಗೂ ಸಂಘಟನೆಗಳು ಸಹ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿವೆ. ಹೀಗಾಗಿ, ಎರಡು ವರ್ಷಕ್ಕೆ ಹೋಲಿಕೆ ಮಾಡಿದರೆ 2021ರಿಂದ 2022ರ ಜನವರಿ ಅಂತ್ಯದವರೆಗೆ ರಕ್ತದಾನ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು, ಜನವರಿ ಅಂತ್ಯಕ್ಕೆ 28,637 ಜನರು ರಕ್ತದಾನ ಮಾಡಿದ್ದಾರೆ.

‘ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ತುರ್ತು ಅವಶ್ಯಕತೆ ಇಲ್ಲದ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿತ್ತು. ಆಗ ಅಪಘಾತದಲ್ಲಿ ಗಾಯಗೊಂಡವರು ಹಾಗೂ ಗರ್ಭಿಣಿಯರಿಗೆ ಮಾತ್ರ ರಕ್ತದ ಅವಶ್ಯಕತೆ ಇತ್ತು. ಹೀಗಾಗಿ, ಸಮಸ್ಯೆ ಆಗಿರಲಿಲ್ಲ. ಎರಡನೇ ಅಲೆಯಲ್ಲಿ ಶಸ್ತ್ರಚಿಕಿತ್ಸೆಗಳು ಪ್ರಾರಂಭವಾದವು. ಆದರೆ, ರಕ್ತದಾನ ಮಾಡುವವರ ಸಂಖ್ಯೆ ಇಳಿಕೆಯಾಗಿದ್ದರಿಂದ ಕೆಲವು ತಿಂಗಳು ಸಮಸ್ಯೆಯಾಗಿತ್ತು. ಸದ್ಯ ರಕ್ತ ಸಂಗ್ರಹ ಪ್ರಮಾಣ ಸಹಜ ಸ್ಥಿತಿಗೆ ತಲುಪಿದೆ’ ಎನ್ನುತ್ತಾರೆ ಕಿಮ್ಸ್‌ ರಕ್ತನಿಧಿಭಂಡಾರದ ಸಹಪ್ರಾಧ್ಯಾಪಕಿ ಡಾ.ಕವಿತಾ ಎವೂರ.

ಈ ಹಿಂದೆ ಕೋವಿಡ್‌ನಿಂದ ಗುಣಮುಖರಾದವರು ಮೂರು ತಿಂಗಳ ನಂತರ ರಕ್ತದಾನ ಮಾಡಬಹುದಾಗಿತ್ತು. ಆರೋಗ್ಯ ಇಲಾಖೆ ಈ ನಿಯಮ ಸಡಿಲಿಕೆ ಮಾಡಿದ್ದು, ಕೋವಿಡ್‌ನಿಂದ ಗುಣಮುಖರಾದವರು 28 ದಿನಗಳ ನಂತರ ರಕ್ತದಾನ ಮಾಡಬಹುದಾಗಿದೆ.

ಹಿಮೋಗ್ಲೊಬಿನ್‌ ಪ್ರಮಾಣ ಇಳಿಕೆ: ರಕ್ತದಾನ ಮಾಡಲು ಹಲವರು ಮುಂದೆ ಬರುತ್ತಿದ್ದಾರೆ. ಆದರೆ, ಅವರರಕ್ತಕಣದಲ್ಲಿ ಹಿಮೋಗ್ಲೊಬಿನ್‌ ಕೊರತೆಯಿಂದಾಗಿ ರಕ್ತ ಸಂಗ್ರಹ ಮಾಡಲಾಗದ ಪರಿಸ್ಥಿತಿ ಇದೆ. ರಕ್ತದಾನ ಮಾಡಲು ಹಿಮೋಗ್ಲೊಬಿನ್‌ ಪ್ರಮಾಣ 12.5 ಗ್ರಾಂ ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು.

‘ಕಾಲೇಜು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಆಯೋಜಿಸುವ ರಕ್ತದಾನ ಶಿಬಿರಗಳಲ್ಲಿ ವಿದ್ಯಾರ್ಥಿಗಳು ರಕ್ತದಾನ ಮಾಡುವ ಉತ್ಸಾಹ ತೋರುತ್ತಾರೆ. ಆದರೆ, ಹಲವರಲ್ಲಿ ಹಿಮೋಗ್ಲೊಬಿನ್‌ ಕೊರತೆಯಿಂದ ರಕ್ತ ಸಂಗ್ರಹ ಮಾಡಲು ಸಾಧ್ಯವಾಗುವುದಿಲ್ಲ. ಇದೇ ಕಾರಣಕ್ಕೆ ರಕ್ತದಾನ ಮಾಡಲು ಬರುವ ಅಂದಾಜು ಶೇ40ರಷ್ಟು ಯುವತಿಯರ ರಕ್ತ ಸಂಗ್ರಹ ಮಾಡಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ಡಾ.ಕವಿತಾ ಎವೂರ.

ಕಿಮ್ಸ್‌ನಲ್ಲಿ ತುಸು ಇಳಿಕೆ: ಕಿಮ್ಸ್‌ನ ರಕ್ತನಿಧಿ ಭಂಡಾರವು ಜಿಲ್ಲೆಯ ಪ್ರಮುಖ ರಕ್ತನಿಧಿ ಸಂಗ್ರಹ ಕೇಂದ್ರಗಳಲ್ಲಿ ಒಂದಾಗಿದೆ. ಈ ಕೇಂದ್ರದಿಂದ ನಿತ್ಯ ಐದರಿಂದ ಆರು ಜನ ಥಲಸ್ಸೇಮಿಯಾ ಪೀಡಿತ ಮಕ್ಕಳಿಗೆ ಹಾಗೂ 12ರಿಂದ 20 ಜನ ಗರ್ಭಿಣಿಯರಿಗೆ (ಹೆರಿಗೆ ಸಂದರ್ಭದಲ್ಲಿ) ರಕ್ತ ನೀಡಲಾಗುತ್ತಿದೆ.

ಸಾಮಾನ್ಯವಾಗಿ ಇಲ್ಲಿ ಏಳರಿಂದ ಹತ್ತು ಸಾವಿರದವರೆಗೆ ಜನರು ರಕ್ತದಾನ ಮಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ನಾನಾ ಕಾರಣಕ್ಕೆ ಇಲ್ಲಿ ರಕ್ತದಾನ ಮಾಡುವವರ ಸಂಖ್ಯೆ ಇಳಿಕೆ ಆಗಿದೆ. 2019, 2020 ಹಾಗೂ 2021ರಲ್ಲಿ ಕ್ರಮವಾಗಿ ಇಲ್ಲಿ 7,634, 2,315 ಹಾಗೂ 3,970 ಜನ ರಕ್ತದಾನ ಮಾಡಿದ್ದಾರೆ. ಈ ವರ್ಷ ಜನವರಿ ಅಂತ್ಯಕ್ಕೆ 748 ಜನ ರಕ್ತದಾನ ಮಾಡಿದ್ದಾರೆ ಎಂದು ಕಿಮ್ಸ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ರಕ್ತನಿಧಿ ಕೇಂದ್ರಗಳು

ಡಾ. ಜೀವಣ್ಣನವರ್ಸ್‌ ರಕ್ತನಿಧಿ, ಲೈಫ್‌ಲೈನ್‌ 24x7 ರಕ್ತನಿಧಿ,ಎಂ.ಆರ್‌. ಡಯಾಗ್ನೋಸ್ಟಿಕ್ ಸಂಶೋಧನಾ ಕೇಂದ್ರ ಮತ್ತು ರಕ್ತನಿಧಿ, ಕಿಮ್ಸ್‌ ರಕ್ತನಿಧಿ ಕೇಂದ್ರ, ಜಿಲ್ಲಾ ಕೇಂದ್ರ ಆಸ್ಪತ್ರೆ ರಕ್ತನಿಧಿ, ಹುಬ್ಬಳ್ಳಿ ಲಯನ್ಸ್‌ ರಕ್ತನಿಧಿ, ಕರ್ನಾಟಕ ಕ್ಯಾನ್ಸರ್‌ ಟಿ ಮತ್ತು ಆರ್‌. ರಕ್ತನಿಧಿ, ಪ್ರೇಮಬಿಂದು ರಕ್ತನಿಧಿ ಕೇಂದ್ರ, ಎಸ್‌ಡಿಎಂ ಕಾಲೇಜ್‌ ಆಫ್‌ ಮೆಡಿಕಲ್‌ ಸೈನ್ಸ್‌ ಆಸ್ಪತ್ರೆ ರಾಷ್ಟ್ರೋತ್ಥಾನ ರಕ್ತನಿಧಿ,ಸುಚುರಾಯು ಹೆಲ್ತ್‌ಕೇರ್,
ದಿ.ರೋಟರಿ ರಕ್ತನಿಧಿ ಕೇಂದ್ರ

ಜಿಲ್ಲೆಯಲ್ಲಿ ರಕ್ತದಾನ ಮಾಡುವವರ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಹಲವು ಸ್ವಯಂ ಸೇವಾ ಸಂಸ್ಥೆಗಳು ಸಹ ಈ ಕಾರ್ಯಕ್ಕೆ ಕೈಜೋಡಿಸಿವೆ
-ಅಯ್ಯನಗೌಡ ಪಾಟೀಲ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT