ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಾಡಿ ದನಗಳ ಕಾಟಕ್ಕೆ ಬೀಳದ ಕಡಿವಾಣ

ಪ್ರಭಾವಿಗಳ ಒತ್ತಡದಿಂದ ಹೆಚ್ಚಾಗುತ್ತಿದೆ ಓಡಾಟ, ನಾಲ್ಕು ದಿನದಿಂದ ಕಾರ್ಯಾಚರಣೆ ಸ್ಥಗಿತ
Last Updated 2 ಆಗಸ್ಟ್ 2019, 19:55 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಡಾಡಿ ದನ ಹಾಗೂ ಕರುಗಳ ಕಾಟಕ್ಕೆ ವಾಹನ ಸವಾರರು, ಪಾದಚಾರಿಗಳು ಪರದಾಡುವಂತಾಗಿದೆ. ಅವುಗಳು ಪ್ರಮುಖ ರಸ್ತೆಗಳಲ್ಲಿ ರಾಜಾರೋಷವಾಗಿ ಓಡಾಡುವ ಪರಿಣಾಮ ಜನ ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.

ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ನಗರದ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಅದರಲ್ಲಿ ಬಿಡಾಡಿ ದನ ಹಾಗೂ ಕರುಗಳ ಕಾಟವೂ ಹೆಚ್ಚಾಗಿರುವ ಕಾರಣ ಸವಾರರು ಭೀತಿಯಿಂದಲೇ ವಾಹನ ಚಾಲನೆ ಮಾಡಬೇಕಾಗಿದೆ. ನಿತ್ಯ ಸಾವಿರಾರು ಜನ ಓಡಾಡುವ ಗೋಕುಲ ರಸ್ತೆ, ಸರಾಫ್‌ ಗಟ್ಟಿ, ದುರ್ಗದ ಬೈಲ್‌, ಜನತಾ ಬಜಾರ್‌, ತೊರವಿಹಕ್ಕಲ, ರೈಲ್ವೆ ನಿಲ್ದಾಣ ರಸ್ತೆ, ಬಂಕಾಪುರ ಚೌಕ್, ಶಿರೂರ ಪಾರ್ಕ್‌, ಅಕ್ಷಯ ಪಾರ್ಕ್‌ ಕಾಲೊನಿಯಲ್ಲಿ ಹಾವಳಿ ಹೆಚ್ಚಾಗಿದೆ. ಹೊಸೂರು ಕ್ರಾಸ್‌, ವಿದ್ಯಾನಗರದ ಬಳಿ ಬಿಆರ್‌ಟಿಎಸ್‌ ರಸ್ತೆಗಳ ಮೇಲೂ ಓಡಾಡುತ್ತಿವೆ.

ಪಾಲಿಕೆ ವಿಲೇವಾರಿ ಮಾಡದೇ ಬಿಟ್ಟ ಕಸ ತಿಂದು ಬಿಡಾಡಿ ದಿನಗಳು ಕಸವೆನ್ನೆಲ್ಲ ಚೆಲ್ಲಾಪಿಲ್ಲಿ ಮಾಡಿ ಕೊಳೆ ಹೆಚ್ಚಿಸುತ್ತಿವೆ. ಪಾದಚಾರಿ ಮಾರ್ಗದಲ್ಲಿ ಮಲಗುತ್ತಿವೆ. ಬಿಡಾಡಿ ದನಗಳನ್ನು ಹಿಡಿಯಲು ಪಾಲಿಕೆಯಿಂದ ಅನುಮತಿ ಪಡೆದಿರುವ ಕಾಶಪ್ಪ ಮತ್ತು ಕುಶಾಲ್‌ ಬಿಜವಾಡ ಎಂಬುವರು ಹಿಡಿದುಕೊಂಡು ಹೋಗುತ್ತಿದ್ದರೂ, ಪ್ರಭಾವಿಗಳ ಒತ್ತಡದಿಂದ ಮತ್ತೆ ಬಿಡುವಂತಾಗಿದೆ. ಇದರಿಂದ ರಸ್ತೆಗಳಲ್ಲಿ ದನಗಳ ಹಾವಳಿ ನಿಯಂತ್ರಣಕ್ಕೆ ಬರುತ್ತಿಲ್ಲ.

‘ಬಿಡಾಡಿ ದನಗಳ ನಿಯಂತ್ರಣಕ್ಕೆ ಅನುದಾನ ಮೀಸಲಿಟ್ಟಿಲ್ಲ. ಅವುಗಳನ್ನು ಹಿಡಿದುಕೊಂಡು ಹೋಗಲು ಕಾಶಪ್ಪ ಬಿಜವಾಡ ಎನ್ನುವರಿಗೆ ಅನುಮತಿ ನೀಡಲಾಗಿದೆ’ ಎಂದು ಪಾಲಿಕೆ ಪಶು ವೈದ್ಯಾಧಿಕಾರಿ ರವಿ ಸಾಲಿಗೌಡರ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ದಿನಕ್ಕೆ ₹ 6,000 ಖರ್ಚು:

ಕಾಶಪ್ಪ ಹಾಗೂ ಅವರ ತಂಡ ಒಂದು ದಿನಕ್ಕೆ ವಾಹನದಲ್ಲಿ ಹತ್ತು ದನಗಳನ್ನು ಸೆರೆಹಿಡಿದು ಅದರಗುಂಚಿಯಲ್ಲಿ ನಿರ್ಮಿಸಿರುವ ಗೋಶಾಲೆಯಲ್ಲಿ ಮಾಲೀಕರು ಬರುವ ತನಕ ಸಾಕುತ್ತಾರೆ.

ಕಾಶಪ್ಪ ಹಾಗೂ ಕುಶಾಲ್‌ ಜೊತೆ ನಾಲ್ಕು ಜನ ಸಿಬ್ಬಂದಿ ಇದ್ದಾರೆ. ಸೆರೆ ಹಿಡಿಯುವ ಇಬ್ಬರು ಸಿಬ್ಬಂದಿಗೆ ಪ್ರತಿದಿನಕ್ಕೆ ತಲಾ ₹ 1,500, ಸೆರೆ ಹಿಡಿದ ದನಗಳನ್ನು ವಾಹನದಲ್ಲಿ ಎತ್ತಿ ಹಾಕುವ ಇನ್ನಿಬ್ಬರು ಸಿಬ್ಬಂದಿಗೆ ತಲಾ ₹ 500 ನೀಡುತ್ತಾರೆ. ಒಂದು ಸಲ ನಗರದಿಂದ ಅದರಗುಂಚಿಗೆ ಐದು ದನಗಳನ್ನು ತೆಗೆದುಕೊಂಡು ಹೋಗುತ್ತಾರೆ. ವಾಹನ ಬಾಡಿಗೆ, ನಿರ್ವಹಣೆ ಎಲ್ಲವೂ ಸೇರಿ ಒಂದು ದಿನಕ್ಕೆ ₹ 6,000 ವೆಚ್ಚವಾಗುತ್ತದೆ.

‘ಮೊದಲು ಬೇರೆಯವರ ಗೋಶಾಲೆಗೆ ದನ, ಕರುಗಳನ್ನು ಕಳುಹಿಸುತ್ತಿದ್ದೆವು. ಒಂದು ವರ್ಷದ ಹಿಂದೆ ಸ್ವಂತ ಗೋಶಾಲೆ ಆರಂಭಿಸಿದ್ದೇವೆ. ಪ್ರತಿ ದನ, ಕರುವಿಗೆ ಮಾಲೀಕರಿಂದ ₹ 4,000 ದಂಡ ಪಡೆಯುತ್ತೇವೆ’ ಎಂದು ಕಾಶಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT