ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಸುಮ್ಮನೆ ಬಂದಿದ್ದಲ್ಲ...

Last Updated 14 ಆಗಸ್ಟ್ 2019, 12:42 IST
ಅಕ್ಷರ ಗಾತ್ರ

ಮಕ್ಕಳೇ, ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ತಯಾರಾಗುತ್ತಿದ್ದೀರಿ ಅಲ್ವಾ? ಶಾಲೆಯಲ್ಲಿ ಭಾಷಣ, ದೇಶಭಕ್ತಿ ಗೀತೆ, ನೃತ್ಯ, ಕವಾಯತು ಎಲ್ಲದರ ತಯಾರಿ ಜೋರಾಗಿ ನಡೆದಿರಬೇಕು. ಅಂದು ಹಾಕಿಕೊಳ್ಳುವ ಸಮವಸ್ತ್ರ, ವೇಷಭೂಷಣ ಎಲ್ಲವೂ ಶುಭ್ರವಾಗಿರಬೇಕು; ಗೊತ್ತು ತಾನೆ? ಅದನ್ನು ಅಮ್ಮ, ಅಪ್ಪ ರೆಡಿ ಮಾಡ್ತಾರೆ ಬಿಡಿ ಅಂತಾ ಸುಮ್ಮನಿರಬೇಡಿ. ನೀವೂ ಅವರ ಜೊತೆ ಸಹಕರಿಸುತ್ತ ಸಂತಸ, ಹುರುಪಿನಿಂದ ಪಾಲ್ಗೊಳ್ಳಿ.

ನಿಮ್ಮ ಕರ್ತವ್ಯವೇನು ಎಂದು ಯೋಚಿಸಿದ್ದೀರಾ? ನೀವು ಓದುವ ಭಾಷಣವನ್ನು, ಹಾಡುವ ಗೀತೆ ಸುಮ್ಮನೆ ಕಂಠಪಾಠ ಮಾಡದೆ ಅದರ ಅರ್ಥವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಕೇಳುವವರಾದರೆ ಗಮನವಿಟ್ಟು ಆಲಿಸಿ, ಅಲಸ್ಯದಿಂದಲ್ಲ. ನಮ್ಮ ಬಾವುಟದ ಬಣ್ಣಗಳು, ನಡುವೆ ಇರುವ ಅಶೋಕ ಚಕ್ರ, ರಾಷ್ಟ್ರಗೀತೆಯ ಮಹತ್ವ ಹಾಗೂ ಅದರ ಒಳಾರ್ಥ ತಪ್ಪದೆ ಅರ್ಥೈಸಿಕೊಳ್ಳಿ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದುದರ ಹಿಂದೆ ಅನೇಕಾನೇಕ ಮಹಾನುಭಾವರ ತ್ಯಾಗ, ಬಲಿದಾನವಿದೆ. ಸ್ವಾತಂತ್ರ್ಯ ಎಂದರೆ ನಿಮಗೆ ಹೇಗೆ ಹೇಳುವುದು?, ಎಂದಾದರೂ ದಾಸ್ಯ ಹಾಗೂ ಬಂಧನದ ಅರ್ಥ ಗೊತ್ತಿದ್ದರೆ ಅದು ಸುಲಭವಾಗಿ ಅರ್ಥವಾಗುತ್ತದೆ. ಗುರು-ಹಿರಿಯರನ್ನು ಮರೆಯದೆ ಕೇಳಿ ತಿಳಿದುಕೊಳ್ಳಿ. ಸಾಧ್ಯವಾದರೆ ಅದರ ಬಗ್ಗೆ ನಿಮ್ಮ ಶಾಲೆಯ ಗ್ರಂಥಾಲಯದಲ್ಲಿ ಸಿಗುವ ಪುಸ್ತಕಗಳನ್ನು ಓದಿ ಜ್ಞಾನ ಹೆಚ್ಚಿಸಿಕೊಳ್ಳಿ. ಸ್ಮಾರ್ಟ್‌ಫೋನಿನ ಗೂಗಲ್ಲಂತೂ ಸಹಾಯಕ್ಕೆ ಇದ್ದೇ ಇದೆ. ತಿಳಿದುಕೊಳ್ಳುವ ಉತ್ಸುಕತೆ, ಮನಸ್ಸಿರಬೇಕಷ್ಟೇ.

ಸ್ವಾಮಿ ವಿವೇಕಾನಂದರು ಹೇಳಿದಂತೆ ನಿಮ್ಮ ದೇಶ ನಿಮಗೇನು ಮಾಡಿತೆಂದು ಕೇಳಬೇಡಿ. ನೀವು ನಿಮ್ಮ ದೇಶಕ್ಕಾಗಿ ಏನು ಮಾಡಬೇಕೆಂದು ಕೇಳಿಕೊಳ್ಳಿ ಎನ್ನುವ ಮಾತನ್ನು ಸದಾ ನೆನಪಿಡಿ. ಸದ್ಯಕ್ಕೆ ದೊಡ್ಡ ದೊಡ್ಡ ಕೆಲಸಗಳೇನೂ ನೀವು ಮಾಡಬೇಕಾಗಿಲ್ಲ. ಎಲ್ಲೆಂದರಲ್ಲಿ ಕಸ ಬಿಸಾಡದಿರುವುದು, ಟ್ರಾಫಿಕ್ ನಿಯಮಗಳನ್ನು ಪಾಲಿಸುವುದು, ನೀರು, ವಿದ್ಯುತ್ ಮುಂತಾದವುಗಳ ಹಿತಮಿತ ಬಳಕೆ ಬಹುಮುಖ್ಯ ಎಂದು ಮನಗಾಣಿ. ಪ್ರಕೃತಿಯನ್ನು ಉಳಿಸಿ, ಬೆಳೆಸಿ. ಪಶು, ಪಕ್ಷಗಳಿಗೆ ಆಹಾರ ಕೊಟ್ಟು ಸಲಹಿ. ಮಾಲಿನ್ಯ ತಡೆಗಟ್ಟಲು ನಿಮ್ಮ ಕೈಲಾದಷ್ಟು ಪ್ರಯತ್ನಿಸಿ.

ಇನ್ನು ಜೀವನದಲ್ಲಿ ಸ್ವಲ್ಪ ಶಿಸ್ತು, ಓದಿನ ಕಡೆ ಲಕ್ಷ್ಯ, ಗುರು, ಹಿರಿಯರಿಗೆ ಗೌರವ ಕೊಡುವುದು, ಓದಿನಷ್ಟೇ ಪ್ರಾಮುಖ್ಯತೆಯಿಂದ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು, ಇವುಗಳೇ ನಿಮ್ಮನ್ನು ಮುಂದೆ ದೇಶಕ್ಕಾಗಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬಲ್ಲವು. ಜಾತಿ, ಮತ, ಭೇದಗಳಿಂದ ದೂರವಿದ್ದು ಎಲ್ಲರೊಡನೆ ಉತ್ತಮ ಬಾಂಧವ್ಯ ಸ್ನೇಹ ಬೆಸೆಯುವಂತೆ ನೋಡಿಕೊಳ್ಳಿ. ನಿಮ್ಮಿಂದ ನಮ್ಮ ಭಾರತಮಾತೆ ಇದನ್ನೇ ತಾನೆ ಆಶಿಸುವುದು? ಹಾಗಾದರೆ ಎಲ್ಲರೂ ಒಕ್ಕೊರಲಿನಿಂದ ಭಾರತ ಮಾತೆಗೆ ಜೈ ಎನ್ನಿ.

ನಳಿನಿ ಟಿ. ಭೀಮಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT