ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ಕಿದ ದೇಶ ಪ್ರೇಮ; ಮೊಳಗಿದ ಜಯ ಘೋಷ

ಹುಧಾ ಮಹಾನಗರ ಪಾಲಿಕೆ; 75 ಅಡಿ ಎತ್ತರದ ಧ್ವಜ ಸ್ತಂಭಕ್ಕೆ ಧ್ವಜಾರೋಹಣ
Last Updated 15 ಆಗಸ್ಟ್ 2022, 8:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಾಲ್ಲೂಕು ಆಡಳಿತ ನಗರದ ನೆಹರೂ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಮಕ್ಕಳು ಪ್ರದರ್ಶಿಸಿದ ನೃತ್ಯ ಪ್ರೇಕ್ಷಕರ ಕಣ್ಮನ ಸೆಳೆಯಿತು.

ಘಂಟಿಕೇರಿ ಶಾಂತಿನಾಥ ಪ್ರೌಢಶಾಲೆ ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ಸಂಸ್ಕೃತಿ ಬಿಂಬಿಸುವ ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು. ಗಡಿ ಕಾಯುವ ಸೈನಿಕರ ಕುರಿತು ಬಿಡನಾಳದ ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ‘ಸಲಾಂ ಸೋಲ್ಜರ್’ ಹಾಡಿಗೆ ಆಕರ್ಷಕವಾಗಿ ಹೆಜ್ಜೆ ಹಾಕಿದರು, ವಿವಿಧ ಬೆಗೆಯ ಸಾಹಸ ಪ್ರದರ್ಶಿಸಿ ಸೈನಿಕರ ಕರ್ತವ್ಯ ಕಣ್ಮುಂದೆ ತಂದರು. ಅವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಉಕ್ಕಿಸುವಂತೆ ಮಾಡಿತು. ಆ ಸಂದರ್ಭದಲ್ಲಿ ಭಾರತ ಮಾತಾಕಿ ಜೈ ಘೋಷಣೆ ಮೈದಾನದ ತುಂಬೆಲ್ಲ ಮೊಳಗಿತು. ಪರಿವರ್ತನ ಗುರುಕುಲ ಶಾಲೆ ಮಕ್ಕಳು ‘ವಂದೇ ಮಾತರಂ’ ಹಾಡಿಗೆ ಹೆಜ್ಜೆ ಹಾಕಿ, ಭಾರತ ಮಾತೆಗೆ ಗೌರವ ಸಲ್ಲಿಸಿದರು.

ಅದಕ್ಕೂ ಪೂರ್ವ ತಹಶೀಲ್ದಾರ್ ಶಶಿಧರ ಮಾಡ್ಯಾಳ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿದರು. ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ಎನ್‌ಸಿಸಿ ಹಾಗೂ ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ‌ ಆಕರ್ಷಕ ಪಥ ಸಂಚಲ ನಡೆಯಿತು.

ಅತಿಥಿಯಾಗಿ ಪಾಲ್ಗೊಂಡಿದ್ದ ಶಾಸಕ‌ ಜಗದೀಶ ಶೆಟ್ಟರ್, ‘ಭಾರತ ಪ್ರಪಂಚದಲ್ಲಿಯೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ಕೆಲವೇ ವರ್ಷಗಳಲ್ಲಿ ಪ್ರಪಂಚದ ಸೂಪರ್ ಪವರ್ ಆಗಲಿದೆ. ಆದರೆ, ಕೆಲವರು ಟೀಕಿಸಬೇಕೆನ್ನುವ ಉದ್ದೇಶದಿಂದ ಟೀಕೆ ಮಾಡುತ್ತಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಎಲ್ಲರ ಮನೆಯಲ್ಲೂ ರಾಷ್ಟ್ರಧ್ವಜ ಹಾರಾಡಬೇಕೆನ್ನುವ ಕಾರಣಕ್ಕೆ ಪಾಲಿಸ್ಟರ್‌ ಧ್ವಜಕ್ಕೆ ಅನುಮತಿ ನೀಡಲಾಗಿದೆ. ಇದರಿಂದ ಖಾದಿ ಧ್ವಜ ಮಾರಾಟದಲ್ಲಿ ಹಿನ್ನಡೆಯಾಗಿಲ್ಲ. ಪ್ರತಿವರ್ಷಕ್ಕಿಂತ ಅತಿ ಹೆಚ್ಚು ಧ್ವಜ ಈ ವರ್ಷವೇ ಮಾರಾಟವಾಗಿದೆ’ ಎಂದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಹಾಗೂ ಸರ್ಕಾರಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದವರನ್ನು ಸನ್ಮಾನಿಸಲಾಯಿತು.

ಈದ್ಗಾ ಮೈದಾನ: ನಗರದ ಈದ್ಗಾ ಮೈದಾನದಲ್ಲಿ ಹುಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಬಿ.ಗೋಪಾಲಕೃಷ್ಣ 76ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪಾಲಿಕೆ ವತಿಯಿಂದ ತಿರಂಗ ರ‍್ಯಾಲಿ, ಐದು ಕಿ.ಮೀ. ಗೋಡೆ ಬರಹದಲ್ಲಿ ಜಾಗೃತಿ ಸಂದೇಶ, ಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಪಾಲಿಕೆ ಕೇಂದ್ರ ಕಚೇರಿ ಎದುರು 75 ಅಡಿ ಎತ್ತರದ ಧ್ವಜಸ್ತಂಭ ನಿರ್ಮಿಸಲಾಗಿದೆ’ ಎಂದರು.

‘ಪಾಲಿಕೆ ವ್ಯಾಪ್ತಿಯಲ್ಲಿ ಎಲ್ಇಡಿ ಬೀದಿದೀಪ ಅಳವಡಿಸುವ ಯೋಜನೆಗೆ ಸಮೀಕ್ಷೆ ಆರಂಭಿಸಲಾಗಿದೆ. ನಿರಂತರ ನೀರು ಪೂರೈಸುವ ಯೋಜನೆಯನ್ನು ಎಲ್‌ ಆ್ಯಂಡ್‌ ಡಿ ಕಂಪನಿಗೆ ಹಸ್ತಾಂತರಿಸಿದ್ದು, 2025ರ ಒಳಗೆ 82 ವಾರ್ಡ್‌ಗಳಿಗೆ ಯೋಜನೆ ವಿಸ್ತರಿಸಲಾಗುವುದು. ಘನತ್ಯಾಜ್ಯ ನಿರ್ವಹಣೆಯ ಭೂಸಮೃದ್ಧಿ ಯೋಜನೆಯಡಿ 120 ಟನ್ ಗೊಬ್ಬರ ಮಾರಾಟ ಮಾಡಲಾಗಿದೆ. ಧಾರವಾಡದ ಶಿವಳ್ಳಿ ಗ್ರಾಮದಲ್ಲಿ ಕಟ್ಟಡ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ಆರಂಭಿಸಲು ₹5.56 ಕೋಟಿ ಅನುದಾನ ಬಿಡುಗಡೆಯಾಗಿದೆ. ಖಾಲಿ ನಿವೇಶನಗಳನ್ನು ಶುಚಿಗೊಳಿಸಿ ಅವುಗಳ ಮಾಲೀಕರಿಂದ ₹1.12 ಕೋಟಿ ಸಂಗ್ರಹ ಮಾಡಲಾಗಿದೆ’ ಎಂದು ಹೇಳಿದರು.

75 ಅಡಿ ಎತ್ತರದ ಧ್ವಜ ಸ್ತಂಭಕ್ಕೆ ಧ್ವಜಾರೋಹಣ: ಸ್ವಾತಂತ್ರ್ಯ ಅಮೃತ ಮಹೋತ್ಸದ ಅಂಗವಾಗಿ ಮಹಾನಗರ ಪಾಲಿಕೆ ಆವರಣದಲ್ಲಿ ಸ್ಥಾಪಿಸಲಾದ 75 ಅಡಿ ಎತ್ತರದ ಧ್ವಜಸ್ತಂಭವನ್ನು ಶಾಸಕ ಜಗದೀಶ ಶೆಟ್ಟರ್ ಉದ್ಘಾಟಿಸಿದರು. ಮೇಯರ್ ಈರೇಶ ಅಂಚಟಗೇರಿ ಧ್ವಜಾರೋಹಣ ನೆರವೇರಿಸಿದರು. ಆಯುಕ್ತ ಡಾ. ಬಿ. ಗೋಪಾಲಕೃಷ್ಣ, ಪಾಲಿಕೆ ಸದಸ್ಯರು ಮತ್ತು ಅಧಿಕಾರಿ, ಸಿಬ್ಬಂದಿ ಇದ್ದರು.

ಮಹಾನಗರ ಪಾಲಿಕೆ: ಪಾಲಿಕೆ ಕೇಂದ್ರ ಕಚೇರಿಯಲ್ಲಿ ಉಪ ಮೇಯರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಶಿವು ಮೆಣಸಿನಕಾಯಿ, ಕಿಶನ್ ಬೆಳಗಾವಿ, ಸಂತೋಷ ಚವ್ಹಾಣ್, ನಿರಂಜನ ಹಿರೇಮಠ, ಆಯುಕ್ತ ಡಾ. ಬಿ. ಗೋಪಾಲಕೃಷ್ಣ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT