ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ ಇನ್ಫೊಸಿಸ್ ಕ್ಯಾಂಪಸ್‌ ಆರಂಭ ಆ.1ರಿಂದ

ಕ್ಯಾಂಪಸ್ ಆರಂಭಕ್ಕೆ ಒತ್ತಾಯಿಸಿ ಒಂದು ತಿಂಗಳಿಂದ ನಡೆದಿದ್ದ ಅಭಿಯಾನ
Last Updated 30 ಜುಲೈ 2022, 5:46 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯಲ್ಲಿರುವ ಇನ್ಫೊಸಿಸ್ ಕ್ಯಾಂಪಸ್‌ ಆರಂಭಕ್ಕೆ ಕಂಪನಿ ಕಡೆಗೂ ಅಸ್ತುಎಂದಿದ್ದು, ಉತ್ತರ ಕರ್ನಾಟಕ ಭಾಗದ ಉದ್ಯೋಗಿಗಳಿಗೆ ಆಗಸ್ಟ್ 1ರಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಇ–ಮೇಲ್ ಮೂಲಕ ಸೂಚಿಸಿದೆ.

ಕಂಪನಿಯು ಜೂನ್ 22ರಂದು ದೇಶದ ವಿವಿಧ ಭಾಗಗಳ ಎರಡನೇ ಹಂತದ ನಗರಗಳಲ್ಲಿ ಕಾರ್ಯಾರಂಭ ಮಾಡುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿರುವ ಕ್ಯಾಂಪಸ್ ಆರಂಭಕ್ಕೆ ‘ಸ್ಟಾರ್ಟ್ ಇನ್ಫೊಸಿಸ್’ ಹೆಸರಿನಲ್ಲಿ ಅಭಿಯಾನ ಆರಂಭವಾಗಿತ್ತು.

ಕಂಪನಿಯಲ್ಲಿ ಕೆಲಸ ಮಾಡುವ ಉತ್ತರ ಕರ್ನಾಟಕ ಭಾಗದ ಉದ್ಯೋಗಿಗಳ ಜೊತೆ ಸಭೆ ನಡೆಸಿದ್ದ ಹಿರಿಯ ಅಧಿಕಾರಿಗಳು, ತಿಂಗಳಾಂತ್ಯಕ್ಕೆ ಕ್ಯಾಂಪಸ್ ಆರಂಭಿಸುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ, ಆ. 1ರಿಂದ ಕ್ಯಾಂಪಸ್‌ ಕಾರ್ಯಾಚರಣೆಗೆ ಮುಂದಾಗಿದ್ದೇವೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಸಂಭ್ರಮಾಚರಣೆ

ಇನ್ಫೊಸಿಸ್ ಆರಂಭದ ವಿಷಯ ಗೊತ್ತಾಗುತ್ತಿದ್ದಂತೆ ‘ಸ್ಟಾರ್ಟ್ ಇನ್ಫೊಸಿಸ್’ ಅಭಿಯಾನದ ಸದಸ್ಯರು ಕ್ಯಾಂಪಸ್ ಹೊರಭಾಗದಲ್ಲಿ ಜಮಾಯಿಸಿ ಸಂಭ್ರಮಾಚರಿಸಿದರು.

‘ಒಂದು ತಿಂಗಳಿಂದ ನಡೆಯುತ್ತಿದ್ದ ಅಭಿಯಾನಕ್ಕೆ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳಿಂದ ಭಾರೀ ಬೆಂಬಲ ವ್ಯಕ್ತವಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರ ಗಮನ ಸೆಳೆಯಲಾಗಿತ್ತು. ಕಡೆಗೂ ಕಂಪನಿ ತನ್ನ ಕ್ಯಾಂಪಸ್ ಆರಂಭಿಸಲು ಮುಂದಾಯಿತು’ ಎಂದು ‘ಸ್ಟಾರ್ಟ್ ಇನ್ಫೊಸಿಸ್’ ಅಭಿಯಾನದ ರೂವಾರಿ ಸಂತೋಷ ನರಗುಂದ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

2018ರಲ್ಲಿ ಕ್ಯಾಂಪಸ್ ನಿರ್ಮಾಣ: ನಗರದ ವಿಮಾನ ನಿಲ್ದಾಣದ ಪಕ್ಕದ ಜಾಗದಲ್ಲಿ ಇನ್ಫೊಸಿಸ್ ಕ್ಯಾಂಪಸ್ ನಿರ್ಮಾಣಕ್ಕೆ 2015ರಲ್ಲಿ ಸರ್ಕಾರ 50 ಎಕರೆ ಭೂಮಿ ಮಂಜೂರು ಮಾಡಿತ್ತು. ನಂತರ ₹350 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ಯಾಂಪಸ್ ನಿರ್ಮಾಣ ಕಾರ್ಯ 2018ರಲ್ಲಿ ಪೂರ್ಣಗೊಂಡಿತ್ತು. ಕ್ಯಾಂಪಸ್‌ನಲ್ಲಿ 1,400 ಮಂದಿ ಕಾರ್ಯನಿರ್ವಹಿಸಬಹುದಾಗಿದೆ.

ಅಭಿಯಾನದ ಹಾದಿ...

* ಇನ್ಫೊಸಿಸ್‌ ಕಂಪನಿಯಿಂದ ಇಂದೋರ್, ನಾಗಪುರ, ಕೊಯಮತ್ತೂರು ಸೇರಿದಂತೆ ದೇಶದ 6 ನಗರಗಳಲ್ಲಿ ತನ್ನ ಕಚೇರಿ ತೆರೆಯುವುದಾಗಿ ಪ್ರಕಟಣೆ. ಹುಬ್ಬಳ್ಳಿಯ ಕ್ಯಾಂಪಸ್ ಆರಂಭಕ್ಕೆ ಸ್ಥಳೀಯರಿಂದ ಒತ್ತಾಯ.

* ಉತ್ತರ ಕರ್ನಾಟಕದ ವೃತ್ತಿಪರರಿಂದ ಸಂತೋಷ ನರಗುಂದ ನೇತೃತ್ವದಲ್ಲಿಶಾಮ ನರಗುಂದ, ಉದಯ ಪೇಂಡ್ಸೆ, ವಿಜಯ ಸಾಯಿ, ನಚಿಕೇತ ಜಮಾದಾರ ಅವರನ್ನೊಳಗೊಂಡ ತಂಡದಿಂದಜೂನ್ 22ರಿಂದ ‘ಸ್ಟಾರ್ಟ್ ಇನ್ಫೊಸಿಸ್’ ಅಭಿಯಾನ ಆರಂಭ.

* ಆನ್‌ಲೈನ್‌ನಲ್ಲಿ change.org ಮೂಲಕವೂ ನಡೆದಿದ್ದ ಸಹಿ ಅಭಿಯಾನದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿಯಿಂದ ಸಹಿ ಮಾಡಿ ಬೆಂಬಲ.

* ಮುಖ್ಯಮಂತ್ರಿಗೆ 10 ಸಾವಿರ ಪತ್ರ ಅಭಿಯಾನ ಆರಂಭ.ಹುಬ್ಬಳ್ಳಿ–ಧಾರವಾಡದ ಮೇಯರ್, ಉಪ ಮೇಯರ್, ಉದ್ಯಮಿಗಳು, ಎಂಜಿನಿಯರ್‌ಗಳು ಸೇರಿದಂತೆ ಗಣ್ಯರು, ಸಂಘ–ಸಂಸ್ಥೆಗಳು,
ಕಾಲೇಜು ವಿದ್ಯಾರ್ಥಿಗಳಿಂದ ಪತ್ರ ಚಳವಳಿ ಬೆಂಬಲಿಸಿ ಸಿ.ಎಂ.ಗೆ ಪತ್ರ.

ಆರ್ಥಿಕ ಚಟುವಟಿಕೆಗೆ ಉತ್ತೇಜನ

ಇನ್ಫೊಸಿಸ್ ಕ್ಯಾಂಪಸ್ ಆರಂಭದಿಂದ ಹುಬ್ಬಳ್ಳಿ–ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತಷ್ಟು ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ.

‘ಐ.ಟಿ ಕಂಪನಿಗಳು ಸೇರಿದಂತೆ ಕೈಗಾರಿಕೆಗಳ ಆರಂಭಕ್ಕೆ ಪೂರಕವಾದ ರಾಷ್ಟ್ರೀಯ ಹೆದ್ದಾರಿಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ದಶದಿಕ್ಕುಗಳಿಗೂ ಬಸ್‌ ಸೇವೆಯಂತಹ ಸೌಲಭ್ಯಗಳನ್ನು ಹೊಂದಿರುವ ಹುಬ್ಬಳ್ಳಿ ಅಭಿವೃದ್ಧಿಗೆ ಹೊಸ ಸ್ವರೂಪ ಸಿಗಲಿದೆ. ಸರ್ಕಾರದ ಬಿಯಾಂಡ್ ಬೆಂಗಳೂರು ಆಶಯ ನಿಜವಾಗಿಯೂ ಈಡೇರಿದೆ’ ಎಂದು ಸಂತೋಷ ನರಗುಂದ ಹೇಳಿದರು.

‘ಈ ಭಾಗದಲ್ಲಿ ಎಂಜಿನಿಯರಿಂಗ್ ಮುಗಿಸಿದವರ ಜೊತೆಗೆ ಬಿಸಿಎ, ಇತರ ಪದವಿ ಕೋರ್ಸ್‌ಗಳನ್ನು ಮುಗಿಸಿದವರಿಗೆ ತಮ್ಮ ಭಾಗದಲ್ಲೇ ಉದ್ಯೋಗ ಸಿಗಲಿದೆ. ಜೊತೆಗೆ, ಇನ್ನಿತರ ಉದ್ಯೋಗಗಳು ಸೃಷ್ಟಿಯಾಗಲಿವೆ. ಸ್ಥಳೀಯ ಆರ್ಥಿಕತೆಯು ಕನಿಷ್ಠ ₹100 ಕೋಟಿ ಹೆಚ್ಚಾಗಲಿದೆ’ ಎಂದು ಹೇಳಿದರು.

ಇವರು ಏನಂತಾರೆ...?

ಇನ್ಫೊಸಿಸ್ ಕ್ಯಾಂಪಸ್ ಆರಂಭದಿಂದ ‌ಹುಬ್ಬಳ್ಳಿ–ಧಾರವಾಡ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ.
– ವಿನಯ ಜವಳಿ, ಅಧ್ಯಕ್ಷ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ

ಇನ್ಫೊಸಿಸ್ ಭಾರತದ ಐ.ಟಿ ಕ್ಷೇತ್ರದ ಐಕಾನ್. ಹುಬ್ಬಳ್ಳಿ ಕ್ಯಾಂಪಸ್ ಆರಂಭದಿಂದ ನಗರಕ್ಕೆ ಐ.ಟಿ ಸಿಟಿ ಎಂಬ ಇಮೇಜ್ ಬರಲಿದೆ. ಇತರ ಐ.ಟಿ ಕಂಪನಿಗಳ ಆಗಮನಕ್ಕೂ ದಾರಿ ಮಾಡಿಕೊಡಲಿದೆ.
– ಡಾ. ಅಶೋಕ ಶೆಟ್ಟರ್, ಕುಲಪತಿ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯ

ಇನ್ಪೊಸಿಸ್‌ ಆರಂಭದಿಂದ ಹುಬ್ಬಳ್ಳಿಯಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಆರಂಭವಾಗಲಿವೆ. ಇತರ ಆರ್ಥಿಕ ಚಟುವಟಿಕೆಗಳ ಆರಂಭಕ್ಕೆ ಉತ್ತೇಜನ ಸಿಗಲಿದೆ
– ವಿವೇಕ ಪವಾರ, ಸಿಇಒ, ದೇಶಪಾಂಡೆ ಫೌಂಡೇಷನ್

ಉತ್ತರ ಕರ್ನಾಟಕದಲ್ಲಿ ಹಲವು ಎಂಜಿನಿಯರಿಂಗ್ ಕಾಲೇಜುಗಳಿದ್ದರೂ, ಇಲ್ಲಿ ಉದ್ಯೋಗ ಸಿಗುತ್ತಿರಲಿಲ್ಲ. ಇನ್ನು ಮುಂದೆ ಐ.ಟಿ. ಕ್ಷೇತ್ರದ ಪ್ರತಿಭಾ ಪಲಾಯನ ತಪ್ಪಲಿದೆ. ಸ್ಥಳೀಯರಿಗೆ ಉದ್ಯೋಗ ಸಿಗಲಿದೆ.
– ದೀಪಾಲಿ ಗೋಟಡಕಿ, ಸಂಸ್ಥಾಪಕಿ, ವೆಬ್‌ ಡ್ರೀಮ್ಸ್‌ ಆ್ಯಂಡ್ ಕ್ಲಿಕ್ ಹುಬ್ಬಳ್ಳಿ ಡಾಟ್ ಕಾಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT