ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಗೆ ನಾಟಕ ಪ್ರದರ್ಶನ, ಹೊರಗೆ ಪ್ರತಿಭಟನೆ

‘ಸಾಮ್ರಾಟ್ ಅಶೋಕ’ ನಾಟಕದಲ್ಲಿ ಆಕ್ಷೇಪಾರ್ಹ ದೃಶ್ಯ; ದಲಿತ ಸಂಘಟನೆಗಳ ಆರೋಪ
Last Updated 26 ಜನವರಿ 2021, 16:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಮಂಗಳವಾರ ಸಂಜೆ ಪ್ರದರ್ಶನಗೊಂಡ ‘ಸಾಮ್ರಾಟ್ ಅಶೋಕ’ ನಾಟಕದಲ್ಲಿ ಆಕ್ಷೇಪಾರ್ಹ ದೃಶ್ಯಗಳಿವೆ ಎಂದು ಆರೋಪಿಸಿ, ದಲಿತ ಸಂಘಟನೆಗಳ ಮಹಾಮಂಡಳದ ಸದಸ್ಯರು ಸ್ಥಳಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ನಾಟಕ ಪ್ರದರ್ಶಕರ ವಿರುದ್ಧ ಘೋಷಣೆ ಕೂಗಿ ಆಕ್ಷೇಪ ವ್ಯಕ್ತಪಡಿಸಿದರು. ರಂಗಾಯಣ ಮತ್ತು ನೂಪುರ ನೃತ್ಯ ವಿಹಾರದ ಸಹಯೋಗದಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.

ಈ ವೇಳೆ ಮಾತನಾಡಿದ ಸಮತಾ ಸೇನಾದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ, ‘ಧಾರವಾಡದಲ್ಲಿ ನಾಟಕ ಪ್ರದರ್ಶನಗೊಂಡಿದ್ದಾಗಲೇ ದಲಿತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ದೃಶ್ಯಗಳನ್ನು ತೆಗೆಯುವುದಾಗಿ ಭರವಸೆ ನೀಡಿದ್ದರು. ಆದರೂ ಬದಲಾವಣೆ ಮಾಡಿಲ್ಲ. ನಾಟಕದಲ್ಲಿ ಅಶೋಕನನ್ನು ಕುರೂಪವಾಗಿ ತೋರಿಸಲಾಗಿದೆ. ಬೇಡಿ ಹಾಕಿ ಬಂಧಿಸಲಾಗಿದೆ. ಧ್ಯಾನಸ್ಥ ಭಂತೇಜಿಯನ್ನು ಮಹಿಳೆ ಚಂಚಲಗೊಳಿಸುವ ದೃಶ್ಯವಿದೆ. ಅಶೋಕ ಮೋಸದಿಂದ ಅಧಿಕಾರ ಪಡೆದ ಎಂದು ಬಿಂಬಿಸಿ, ಆತನ ವ್ಯಕ್ತಿತ್ವ ಹಾಗೂ ಬೌದ್ಧ ಧರ್ಮವನ್ನು ಅವಹೇಳನ ಮಾಡಲಾಗಿದೆ’ ಎಂದು ದೂರಿದರು.

ಬಿಎಸ್‌ಪಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮನಾಥ ಚಿಕ್ಕತುಂಬಳ, ‘ಸರ್ಕಾರಿ ಸಂಸ್ಥೆಯಾದ ರಂಗಾಯಣವು ಇತಿಹಾಸ ತಿರುಚಿದ ಇಂತಹ ನಾಟಕಗಳನ್ನು ಪ್ರದರ್ಶಿಸಬಾರದು. ಇದೇ ರೀತಿ ಮುಂದುವರಿದರೆ ನಾಟಕ ಎಲ್ಲಿಯೂ ಪ್ರದರ್ಶನವಾಗದಂತೆ ತಡೆಯಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ, ಎಸಿಪಿ ವಿನೋದ ಮುಕ್ತೇದಾರ ಹಾಗೂ ಇನ್‌ಸ್ಪೆಕ್ಟರ್ ರವಿಚಂದ್ರ ಅವರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಆದರೂ, ಪ್ರತಿಭಟನೆ ನಿಲ್ಲಲಿಲ್ಲ. ಕಡೆಗೆ ಪರವಿನಾಯ್ಕರ ಅವರು, ನಾಟಕದಲ್ಲಿ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆಯುವುದಾಗಿ ಲಿಖಿತ ಭರವಸೆ ನೀಡಿದರು. ರಂಗಾಯಣ ಆಡಳಿತಾಧಿಕಾರಿಯು ಆಗಿರುವ ಉಪ ವಿಭಾಗಾಧಿಕಾರಿ ಗೋಪಾಲಕೃಷ್ಣ ಕೂಡ, ಪ್ರತಿಭಟನಾಕಾರರಿಗೆ ಕರೆ ಮಾಡಿ ಮಾತನಾಡಿ ಭರವಸೆ ನೀಡಿದರು. ಬಳಿಕ ಮುಖಂಡರು ಪ್ರತಿಭಟನೆ ನಿಲ್ಲಿಸಿದರು.

ಹೊರಗಡೆ ಪ್ರತಿಭಟನೆ ನಡೆಯುತ್ತಿದ್ದರೂ, ಸಚಿವ ಜಗದೀಶ ಶೆಟ್ಟರ್ ಅವರು ಕುಟುಂಬ ಸಮೇತರಾಗಿ ಒಳಗೆ ನಾಟಕ ವೀಕ್ಷಿಸುತ್ತಿದ್ದರು. ರಂಗಾಯಣ ನಿರ್ದೇಶಕರೇ ಪೊಲೀಸರ ನೆರವಿನೊಂದಿಗೆ, ಪ್ರತಿಭಟನಾಕಾರರ ಜತೆ ಮಾತನಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ರಂಗಾಯಣಕ್ಕೆ ಸ್ವಂತ ಜಾಗ: ಶೆಟ್ಟರ್ ಭರವಸೆ

ನಾಟಕ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ‘ರಂಗಾಯಣಕ್ಕೆ ಸ್ವಂತ ಜಾಗ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಹುಬ್ಬಳ್ಳಿಯ ಟೌನ್‌ ಹಾಲ್ ನವೀಕರಣಗೊಳ್ಳಲಿದ್ದು, ಅಲ್ಲಿ ಕಂಪನಿಗಳ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು’ ಎಂದು ಭರವಸೆ ನೀಡಿದರು.

ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ, ‘ಧಾರವಾಡ ರಂಗಾಯಣವನ್ನು ಮೈಸೂರು ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಹೆಚ್ಚಿನ ಅನುದಾನದ ಅಗತ್ಯವಿದೆ. ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸಲು ಸಚಿವ ಶೆಟ್ಟರ್ ಅವರು ನೆರವಾಗಬೇಕು’ ಎಂದು ಮನವಿ ಮಾಡಿದರು.

ನೂಪುರ ನೃತ್ಯ ವಿಹಾರದ ಅಧ್ಯಕ್ಷ ಎಸ್‌.ಎಸ್. ಕಿರಣ ಅತಿಥಿಗಳನ್ನು ಸ್ವಾಗತಿಸಿದರು. ಬಿಜೆಪಿ ಮುಖಂಡ ಲಿಂಗರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಡಾ. ಪಾಂಡುರಂಗ ಪಾಟೀಲ, ಸಾಹಿತಿ ಬಾಳಣ್ಣ ಶೀಗೆಹಳ್ಳಿ, ರಂಗಕರ್ಮಿ ಯಶವಂತ ಸರದೇಶಪಾಂಡೆ, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ರಾಜು ಜರತಾರಘರ, ಜಿ.ವಿ. ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT