ಸೋಮವಾರ, ಆಗಸ್ಟ್ 8, 2022
21 °C

ಸೇವಾ ಭದ್ರತೆ, ಪಿಂಚಣಿ ಸೌಲಭ್ಯ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಜ್ಯ ಸರ್ಕಾರ ಸೇವಾ ಭದ್ರತೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಬ್ಯಾಂಕ್‌ಗಳ ಕ್ಷೇಮಾಭಿವೃದ್ಧಿ ಮಹಾಮಂಡಳದ ನೌಕರರು ಆಗ್ರಹಿಸಿದ್ದಾರೆ.

ಮಹಾಮಂಡಳದ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಲನಗೌಡ ಮೂಗಣ್ಣವರ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ರಾಜ್ಯದಲ್ಲಿ ಪತ್ತಿನ ಸಹಕಾರ ಸಂಘಗಳು ಆರಂಭವಾಗಿ 116 ವರ್ಷಗಳು ಕಳೆದಿವೆ. ರಾಜ್ಯದಲ್ಲಿ 12ರಿಂದ 13 ಸಾವಿರ ಜನ ನೌಕರರು ಇದ್ದಾರೆ. ಸರ್ಕಾರದ ಯೋಜನೆಗಳನ್ನು ನಮ್ಮ ಬ್ಯಾಂಕ್‌ಗಳ ಮೂಲಕ ರೈತರಿಗೆ ತಲುಪಿಸುತ್ತಿದ್ದೇವೆ. ಆದರೂ, ಸರ್ಕಾರ ನಮಗೆ ಯಾವ ಸೌಲಭ್ಯಗಳನ್ನೂ ಕೊಟ್ಟಿಲ್ಲ’ ಎಂದು ದೂರಿದರು.

‘ಸಹಕಾರ ಬ್ಯಾಂಕ್‌ಗಳು ಕೃಷಿ ಸಲಕರಣೆ, ಬೆಳೆವಿಮೆ, ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ಹೀಗೆ ಅನೇಕ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುತ್ತಿದೆ. ಕೋವಿಡ್‌ ಕಷ್ಟದ ಕಾಲದಲ್ಲಿಯೂ ವಾರಿಯರ್ಸ್‌ಗಳಂತೆ ಕೆಲಸ ಮಾಡಿದ್ದೇವೆ. ಆದರೂ, ಸರ್ಕಾರಿ ನೌಕರರಿಗೆ ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿ ಸೇರಿದಂತೆ ಯಾವ ಸೌಲಭ್ಯಗಳನ್ನೂ ಕೊಟ್ಟಿಲ್ಲ. ಈ ಬೇಡಿಕೆಗಳ ಈಡೇರಿಕೆಗಾಗಿ ಅನೇಕ ಬಾರಿಗೆ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

‘ರಾಜ್ಯದಲ್ಲಿ 5,608 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ನಮಗೆ ಕನಿಷ್ಠ ಸೌಲಭ್ಯಗಳನ್ನಾದರೂ ಒದಗಿಸಬೇಕು. ಕೋವಿಡ್‌ ಸಂಕಷ್ಟದ ಕಾಲದಲ್ಲಿಯೂ ಜನರಿಗೆ ನಾವು ಸ್ಪಂದಿಸಿದ್ದೇವೆ. ನಮ್ಮ ಕಷ್ಟಕ್ಕೂ ಸರ್ಕಾರ ನೆರವಾಗಬೇಕು’ ಎಂದು ಆಗ್ರಹಿಸಿದರು. ರಾಜ್ಯ ಸರ್ಕಾರ ಅಧಿವೇಶನದಲ್ಲಿ ಈ ಬಾರಿ ನಮ್ಮ ಬೇಡಿಕೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲವಾದರೆ ರಾಜ್ಯಮಟ್ಟದಲ್ಲಿ ಅನಿರ್ದಿಷ್ಟ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಹಾಮಂಡಳದ ಹುಬ್ಬಳ್ಳಿ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಣ್ಣ ಗುರಕ್ಕನವರ, ನಿರ್ದೇಶಕ ನೀಲಕಂಠಗೌಡ ಹಿತ್ತಲಮನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.