ಪಕ್ಷಾತೀತವಾಗಿ ಬೆಂಬಲ ನೀಡಲು ಒತ್ತಾಯ

7
ಸಂಗೊಳ್ಳಿ ರಾಯಣ್ಣ ಜಯಂತಿ: ಮೆರವಣಿಗೆ, ರಾಯಣ್ಣ ಸಾಧನೆ ಸ್ಮರಣೆ

ಪಕ್ಷಾತೀತವಾಗಿ ಬೆಂಬಲ ನೀಡಲು ಒತ್ತಾಯ

Published:
Updated:
Deccan Herald

ಹುಬ್ಬಳ್ಳಿ: ‘ಸಂಗೊಳ್ಳಿ ರಾಯಣ್ಣ ಒಂದು ಸಮಾಜಕ್ಕಷ್ಟೇ ಸೀಮಿತವಾದ ವ್ಯಕ್ತಿಯಲ್ಲ, ದೇಶಭಕ್ತಿಯ ಕಿಚ್ಚು ಹಚ್ಚಿಸಿದ ದೇಶಭಕ್ತನ ಜಯಂತಿ ಆಚರಣೆಗೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಬೇಕು, ಮುಂಬರುವ ದಿನಗಳಲ್ಲಿಯೂ ಚನ್ನಮ್ಮ ವೃತ್ತದಲ್ಲಿಯೇ ಕಾರ್ಯಕ್ರಮ ಆಯೋಜಿಸಲು ಅನುಮತಿ ಕೊಡಬೇಕು’ ಎಂದು ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ ಆಗ್ರಹಿಸಿದರು.

ಚನ್ನಮ್ಮ ವೃತ್ತದಲ್ಲಿ ಬುಧವಾರ ಧಾರವಾಡ ಜಿಲ್ಲೆ ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ‘ವೃತ್ತದಲ್ಲಿ ಕಾರ್ಯಕ್ರಮ ಆಯೋಜಿಸಲು ಅಡ್ಡಿಪಡಿಸಿದರೂ ನಾವು ಜಗ್ಗಲಿಲ್ಲ. ಇದೇ ಜಾಗದಲ್ಲಿ ಮುಸ್ಲಿಂ ಸಮಾಜದ ಕಾರ್ಯಕ್ರಮ ನಡೆದಾಗ ಬೆಂಬಲ ನೀಡಿದ್ದೇವೆ. ಆದರೆ, ರಾಯಣ್ಣನ ಕಾರ್ಯಕ್ರಮ ಆಯೋಜಿಸಿದಾಗ ವಿರೋಧ ಏಕೆ’ ಎಂದು ಪ್ರಶ್ನಿಸಿದರು.

ಚಿತ್ರನಟ ಮುರಳಿ ವಿಜಯ್‌, ಯುವ ನಿರ್ದೇಶಕ ಚೇತನ್‌ ಕುಮಾರ್‌, ಜಾನಪದ ಕಲಾವಿದ ಭರಮಣ್ಣ, ಛಾಯಾ ಚಿತ್ರಗ್ರಾಹಕ ಗುರುನಾಥ ಬಾಂಡಗೆ, ಸಂಗೀತ ನಿರ್ದೇಶಕ ಹನುಮಂತ ಬಟ್ಟೂರು ಸೇರಿದಂತೆ ವಿವಿಧ ಸಾಧಕರಿಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮುರಳಿ ವಿಜಯ್‌ ಮಾತನಾಡಿ ‘ಜಾತಿ ವಿಷಯಕ್ಕಾಗಿ ಬಡಿದಾಡುವ ಬದಲು ನಾವೆಲ್ಲರೂ ಒಂದೇ, ಮನುಷ್ಯ ಜಾತಿಯವರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು, ಪ್ರತಿ ಮನೆಯಲ್ಲಿ ರಾಯಣ್ಣ ಹುಟ್ಟಬೇಕು’ ಎಂದರು. ಮೆರವಣಿಗೆ ವೇಳೆ ಡೊಳ್ಳುಕುಣಿತ ಗಮನ ಸೆಳೆಯಿತು. ಅನೇಕ ಚಿಣ್ಣರು ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ವೇಷ ತೊಟ್ಟು ಕಂಗೊಳಿಸಿದರು.

ಶಾಸಕ ಜಗದೀಶ ಶೆಟ್ಟರ್‌, ಸಂಸದ ಪ್ರಹ್ಲಾದ ಜೋಶಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಪಾಲಿಕೆ ಸದಸ್ಯ ಡಿ.ಕೆ. ಚವ್ಹಾಣ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾಹುಕಾರ, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ಇದ್ದರು.

ಕನಕರಾಯ ಸಮಿತಿ:
ನಗರದ ಗಣೇಶಪೇಟೆ ಕರಿಯಮ್ಮಾ ದೇವಿ ದೇವಸ್ಥಾನದ ಕನಕರಾಯಣ್ಣ ಸಮಿತಿ ವತಿಯಿಂದ ನಡೆದ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಎಸಿಪಿ ನಿಂಗಪ್ಪ ಸಕ್ಕರಿ, ದೇವಸ್ಥಾನದ ಹಿರಿಯರಾದ ಶಂಕ್ರಪ್ಪ ಬಸಣ್ಣ, ಎಂ.ಎಚ್‌. ಮಳಲಿ, ಹನಮಂತ ಬೆಣಕಲ್ಲ, ಶೇಖರ ಕಿಲಾರಿ, ರಾಜು, ರವಿ ಕಂಬಳಿ, ಕಲ್ಲಪ್ಪ ಸಿರಕೋಳ, ವಿಶಾಲ ನರಗುಂದ ಇದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಗಣೇಶಪೇಟೆದಿಂದ ಸಂಗೊಳ್ಳಿ ರಾಯಣ್ಣ ವೃತ್ತದ ತನಕ ಮೆರವಣಿಗೆ ನಡೆಯಿತು.

ನೂಕುನುಗ್ಗಲು; ಬೈಕ್‌ ಏರಿ ಹೋದ ಮುರಳಿ ವಿಜಯ
ನಟ ಮುರಳಿ ವಿಜಯ್ ಅವರನ್ನು ನೋಡಲು ಅಭಿಮಾನಿಗಳ ನಡುವೆ ನೂಕು ನುಗ್ಗಲು ಉಂಟಾಯಿತು.

ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಚಿಕ್ಕದಾಗಿ ವೇದಿಕೆ ನಿರ್ಮಿಸಲಾಗಿತ್ತು. ಪ್ರಶಸ್ತಿ ಸ್ವೀಕರಿಸಿದ ಕೆಲ ಹೊತ್ತಿನಲ್ಲೇ ಅಭಿಮಾನಿಗಳೆಲ್ಲ ವೇದಿಕೆ ಮೇಲೆ ಏರಿ ಮುರಳಿ ಅವರನ್ನು ಮುತ್ತಿಕೊಳ್ಳಲು ಪ್ರಯತ್ನಿಸಿದರು.  ಆದ್ದರಿಂದ ಕೆಲವರು ವೇದಿಕೆ ಮೇಲಿನಿಂದ ಕೆಳಕ್ಕೆ ಜಿಗಿದರು.

ಭದ್ರತಾ ಸಿಬ್ಬಂದಿ ಮತ್ತು ಪೊಲೀಸರ ನೆರವಿನೊಂದಿಗೆ ಮುರಳಿ ತಳ್ಳಾಟದ ನಡುವೆಯೇ ಹರಸಾಹಸ ಪಟ್ಟು ವೇದಿಕೆಯಿಂದ ಕೆಳಗಿಳಿದರು. ಆಗ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದರಿಂದ ಸಂಘಟಕರ ಬೈಕ್‌ ಏರಿ ಮುರಳಿ ಹೋಟೆಲ್‌ನತ್ತ ತೆರಳಿದರು!  ಇದಕ್ಕೂ ಮೊದಲು ಭರಾಟೆ ಚಿತ್ರದ ಪೋಸ್ಟರ್‌ ಬಿಡುಗಡೆ ನಡೆಯಿತು. ಆಗ ಅಭಿಮಾನಿಗಳು ಕೇಕೆ, ಜೈಕಾರ ಹಾಕಿ ಸಂಭ್ರಮಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !