ಶುಕ್ರವಾರ, ಫೆಬ್ರವರಿ 3, 2023
18 °C
ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಶೆಟ್ಟರ್

ಅಂಗವಿಕಲರಿಗೆ ಆತ್ಮವಿಶ್ವಾಸ ತುಂಬಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಅಂಗವಿಕಲರು ಯಾವುದೇ ಕಾರಣಕ್ಕೂ ವಿಶ್ವಾಸ ಕಳೆದುಕೊಳ್ಳಬಾರದು. ತಮ್ಮ ಸ್ಥಿತಿಯ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳಬಾರದು. ಸಮಾಜ ಸಹ ಅಂಗವಿಕಲರನ್ನು ಕೀಳಾಗಿ ಕಾಣದೆ, ಅವರಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಬೇಕು’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.

ನಗರದ ಇಂದಿರಾ ಗಾಜಿನ ಮನೆಯಲ್ಲಿ ವಿವಿಧ ಇಲಾಖೆಗಳು ಮತ್ತು ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಹುಬ್ಬಳ್ಳಿಯ ಜ್ಯೋತಿ ಸಣ್ಣಕ್ಕಿ ಎಂಬುವವರು ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಪದಕ‌ ಗಳಿಸಿ ದೇಶಕ್ಕೆ ಹಮ್ಮೆ ತಂದಿದ್ದಾರೆ. ಇದೇ ರೀತಿ, ಅಂಗವಿಕಲರು‌ ಸಹ ತಮ್ಮಿಷ್ಟದ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು. ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಅಗತ್ಯ ಕೌಶಲಗಳನ್ನು ಕಲಿಯಬೇಕು’ ಎಂದು ಸಲಹೆ ನೀಡಿದರು.

ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ‌ ಶಿಕ್ಷಣ ಸೇವಾ ಆಶ್ರಮದ ಮುಖ್ಯಸ್ಥ ಐ.ಕೆ. ಲಕ್ಕುಂಡಿ ಮಾತನಾಡಿ, ‘ಅಂಗವಿಕಲರಿಗೆ ಕೌಶಲ‌ ತರಬೇತಿ ಹಾಗೂ ವೃತ್ತಿಪರ ತರಬೇತಿ ಕೇಂದ್ರಗಳನ್ನು ಜಿಲ್ಲಾಮಟ್ಟದಲ್ಲಿ ತೆರೆಯಬೇಕು. ಬುದ್ಧಿಮಾಂದ್ಯ ಮಕ್ಕಳಿಗೆ ವಿಶೇಷ ತರಬೇತಿ ಕೇಂದ್ರವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಬೇಕು. ಉದ್ಯಮ ಸ್ಥಾಪಿಸುವ ಅಂಗವಿಕಲರಿಗೆ ಆರ್ಥಿಕ ನೆರವು ಒದಗಿಸಬೇಕು. ವಿದ್ಯಾರ್ಥಿನಿಲಯಗಳಲ್ಲಿ ಅಂಗವಿಕಲರಿಗೆ ಸೀಟುಗಳನ್ನು ಮೀಸಲಿಡಬೇಕು. ಉಚಿತವಾಗಿ ಆಶ್ರಯ ಮನೆಗಳನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಕೆ. ಮಾತನಾಡಿ, ‘ಅಂಗವಿಕಲರನ್ನು ಗುರುತಿಸಿ ಅವರಿಗೆ ಸೌಲಭ್ಯಗಳನ್ನು ಒದಗಿಸುವುದು ಇಲಾಖೆಯ ಉದ್ದೇಶ. ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯಬಾರದು ಎಂದು ಶಾಲೆಯ ಶುಲ್ಕ ಮರುಪಾವತಿ ಮಾಡುವ ಯೋಜನೆ ಸಹ ಜಾರಿಯಲ್ಲಿದೆ.‌ ಆರ್ಥಿಕ ಸ್ವಾವಲಂಬನೆಗಾಗಿ ಕಿವಿ ಕೇಳದ ಮತ್ತು ಮಾತು ಬಾರದವರಿಗೆ ಹೊಲಿಗೆ ಯಂತ್ರ ನೀಡಲಾಗುತ್ತಿದೆ’ ಎಂದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಬಹುಮಾನ ವಿತರಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಎಚ್‌.ಎಚ್‌. ಕುಕನೂರ,  ಸರ್ಕಾರಿ ಅಂಧ ಬಾಲಕರ ಶಾಲೆಯ ಶಿಕ್ಷಕ ಅಣ್ಣಪ್ಪ ಕೋಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.