ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿ. 5ರೊಳಗೆ ಕಾಮಗಾರಿ ಮುಗಿಸಲು ಸೂಚನೆ

ಗುಂಡಿ ಮುಚ್ಚುವ ಕಾರ್ಯ: ಪಾಲಿಕೆ ಎಂಜಿನಿಯರ್‌ಗಳ ಜೊತೆ ಆಯುಕ್ತರ ಸಭೆ
Last Updated 29 ನವೆಂಬರ್ 2019, 10:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಹಾಳಾದ ರಸ್ತೆಗಳ ದುರಸ್ತಿ ಕಾರ್ಯ ಆರಂಭವಾಗಿದ್ದು, ಡಿ. 5ರ ಒಳಗೆ ಗುಂಡಿ ಮುಚ್ಚುವ ಕೆಲಸ ಪೂರ್ಣಗೊಳಿಸಬೇಕು ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು ಎಂಜಿನಿಯರ್‌ಗಳಿಗೆ ಸೂಚಿಸಿದ್ದಾರೆ.

ಗುರುವಾರ ನಡೆದ ರಸ್ತೆ ದುರಸ್ತಿಯ ಪರಿಶೀಲನಾ ಸಭೆಯ ಬಳಿಕ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಪಾಲಿಕೆ ವ್ಯಾಪ್ತಿಯ ಎಲ್ಲ ವಲಯಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ವೇಗವಾಗಿ ನಡೆದಿದೆ. ಕೆಲವೆಡೆ ಶೇ 80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಡಿ. 5ರ ವೇಳೆಗೆ ಮುಖ್ಯ ರಸ್ತೆ ಹಾಗೂ ಒಳ ರಸ್ತೆಗಳ ಬಹುತೇಕ ಕಡೆ ಗುಂಡಿ ಮುಚ್ಚುವ ಕಾರ್ಯ ಪೂರ್ಣಗೊಳ್ಳುತ್ತದೆ’ ಎಂದರು. ಅಲ್ಲಲ್ಲಿ ಕೆಲವೆಡೆ ಗುಂಡಿಗಳು ಉಳಿದರೂ ಬಳಿಕ ಪಾಲಿಕೆಯಲ್ಲಿರುವ ಯಂತ್ರದ ಸಹಾಯದಿಂದ ಮುಚ್ಚಲಾಗುತ್ತದೆ ಎಂದು ತಿಳಿಸಿದರು.

ದುರಸ್ತಿ:ತಾರಿಹಾಳ ರಸ್ತೆಯ ಗಾಮನಗಟ್ಟಿ–ನವನಗರ ಬಸ್‌ ಮಾರ್ಗ, ಬಾಲಭವನ ಉದ್ಯಾನದಿಂದ ಕುಸುಗಲ್‌ ರಸ್ತೆ ತನಕ, ಭುವನೇಶ್ವರಿ ನಗರಿ, ಲಕ್ಷ್ಮಿ ಪಾರ್ಕ್, ಸಿಬಿಟಿಯಿಂದ ಶಹಾ ಬಜಾರ್ ತನಕ, ಅರವಿಂದ ನಗರದಿಂದ ಕಾರವಾರ ರಸ್ತೆ, ಆಯೋಧ್ಯೆ ನಗರ, ನೇಕಾರ ನಗರ, ಅರವಿಂದ ನಗರ, ಪಡದಯ್ಯನ ಹಕ್ಕಲ, ಕೆ.ಬಿ. ನಗರದಿಂದ ಸೆಟ್ಲಮೆಂಟ್‌ ಮುಖ್ಯ ರಸ್ತೆ ಮತ್ತು ರಜತಗಿರಿ ಬಡಾವಣೆಯ ಕೆಲವೆಡೆ ಗುರುವಾರ ಗುಂಡಿ ಬಿದ್ದ ರಸ್ತೆಗಳಿಗೆ ಡಾಂಬಾರು ಹಾಕಲಾಗಿದೆ.

ಶೀಘ್ರದಲ್ಲಿ ಸಿಆರ್‌ಎಫ್‌ ರಸ್ತೆ:ನೀಲಿಜನ್‌ ರಸ್ತೆ, ಬೆಂಗೇರಿ ಮತ್ತು ಗೋಪನಕೊಪ್ಪ ಭಾಗದಲ್ಲಿ ಸಿಆರ್‌ಎಫ್‌ ಅನುದಾನದಲ್ಲಿ ರಸ್ತೆ ನಿರ್ಮಿಸಲಾಗುತ್ತದೆ. ಇದರಿಂದ ಹಳೇ ಹಾಗೂ ಹೊಸ ಬಾದಾಮಿ ನಗರ, ಭುವನೇಶ್ವರ ನಗರದ ಜನರಿಗೆ ಅನುಕೂಲವಾಗುತ್ತದೆ. ಇಂಥ ಮಹತ್ವದ ಹಲವು ಯೋಜನೆಗಳಿದ್ದು, ಅದರಲ್ಲಿ ಎರಡ್ಮೂರು ಯೋಜನೆಗಳನ್ನು ತುರ್ತಾಗಿ ಆರಂಭಿಸುತ್ತೇವೆ ಎಂದು ಇಟ್ನಾಳ ತಿಳಿಸಿದರು.

ಗುತ್ತಿಗೆದಾರರಿಗೆ ಕಾಮಗಾರಿಯ ಮುಗಿಸಿದ್ದಕ್ಕೆ ಹಣ ಸಿಗುತ್ತಿಲ್ಲ ಎನ್ನುವ ಆರೋಪವಿದೆಯಲ್ಲ ಎನ್ನುವ ಪ್ರಶ್ನೆಗೆ ‘ಶಾಸಕರ ಅನುದಾನದಲ್ಲಿ ₹5 ಕೋಟಿ, ನಮ್ಮ ಬಳಿಯಿದ್ದ ₹ 26 ಕೋಟಿಯಲ್ಲಿ ಗುತ್ತಿಗೆದಾರರಿಗೆ ಹಣ ನೀಡಲಾಗಿದೆ. ಸರ್ಕಾರದಿಂದ ಮುಂದಿನ ತಿಂಗಳು ₹24 ಕೋಟಿ ಪಿಂಚಣಿ ಹಣ ಬರುವ ನಿರೀಕ್ಷೆಯಿದೆ. ಇರುವ ಅನುದಾನದಲ್ಲಿಯೇ ಹೊಂದಾಣಿಕೆ ಮಾಡಿಕೊಂಡು ರಸ್ತೆ ದುರಸ್ತಿಗೆ ಆದ್ಯತೆ ನೀಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT