ಮಂಗಳವಾರ, ಮೇ 24, 2022
23 °C
ನೂತನ ಕೈಗಾರಿಕಾ ನೀತಿ ಹೂಡಿಕೆ ಅವಕಾಶಗಳು ಕುರಿತು ಅರಿವು ಮೂಡಿಸುವ ಕಾರ್ಯಕ್ರಮ

‘ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಬಂಡವಾಳ ಹೂಡುವ ಸಲುವಾಗಿ ಪ್ರಮುಖ ಎರಡು ಕಂಪನಿಗಳು ಮುಂದೆ ಬಂದಿದ್ದು, ಹಣಕಾಸು ಇಲಾಖೆಯ ಅನುಮೋದನೆ ಸಿಕ್ಕರೆ ಕಾರ್ಯಾರಂಭ ಮಾಡಲಿವೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘಗಳ ಸಹಯೋಗದಲ್ಲಿ ಶನಿವಾರ ನಗರದಲ್ಲಿ ನಡೆದ ನೂತನ ಕೈಗಾರಿಕಾ ನೀತಿ 2020–25 ಮತ್ತು ಹೂಡಿಕೆ ಅವಕಾಶಗಳು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜೇಶ್‌ ಮೆಹ್ತಾ ಒಡೆತನದ ಕಂಪನಿ ವಿದ್ಯುತ್‌ ಚಾಲಿತ ವಾಹನಗಳ ತಯಾರಿಕಾ ಘಟಕ ಆರಂಭಿಸಲು ಮತ್ತು ಯೂಪ್ಲೆಕ್ಸ್‌ ಸಂಸ್ಥೆ ಘಟಕ ತೆರೆಯಲು ಆಸಕ್ತಿ ಹೊಂದಿವೆ. ಇವುಗಳನ್ನು ಹೊರತುಪಡಿಸಿ ಬೇರೆ ಕಂಪನಿಗಳ ಮುಖ್ಯಸ್ಥರೂ ನನ್ನೊಂದಿಗೆ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಹೂಡಿಕೆ ಮಾಡಲಿವೆ. ಗಾಮನಗಟ್ಟಿ ಪ್ರದೇಶಕ್ಕೆ ಬೇಡಿಕೆ ಹೆಚ್ಚಾಗಿದ್ದು, ಈಗ ಅಲ್ಲಿ ಭೂಮಿ ಉಳಿದಿಲ್ಲ. ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ವಿಶೇಷ ಆದ್ಯತೆ ನೀಡಲು ಪ್ರತಿ ಭೂ ಸ್ವಾಧೀನದಲ್ಲಿ ಶೇ 30ರಷ್ಟು ಭೂಮಿ ಮೀಸಲಿಡಲು ನಿರ್ಧರಿಸಲಾಗಿದೆ’ ಎಂದರು.

‘ಸಣ್ಣ ಕೈಗಾರಿಕೆಗಳಿಗೆ ನೀಡುತ್ತಿರುವ ಜಾಗ ದೊಡ್ಡದಾಗಿರುತ್ತದೆ ಎನ್ನುವ ದೂರುಗಳಿದ್ದು, ಅವುಗಳ ವಿನ್ಯಾಸ ಕಡಿಮೆ ಮಾಡಲಾಗುತ್ತಿದೆ. ಶೇ 20ರಷ್ಟು ಮಾತ್ರ ಭೂಮಿ ಬೆಲೆ ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು. ಹಿಂದೆ ಭೂಮಿ ಪಡೆದವರ ಸಮಸ್ಯೆ ಪರಿಹರಿಸಲು ಫೆ. 19ರಂದು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ’ ಎಂದು ತಿಳಿಸಿದರು.

ಎಂಎಸ್‌ಎಂಇ ಹೆಚ್ಚುವರಿ ನಿರ್ದೇಶಕ ಎಚ್‌.ಎಂ. ಶ್ರೀನಿವಾಸ ಹೊಸ ಕೈಗಾರಿಕಾ ನೀತಿ ಕುರಿತು ಮಾತನಾಡಿ ‘ಕೈಗಾರಿಕೆಗಳನ್ನು ಆರಂಭಿಸಲು ಬೇಕಾದ ಸೌಲಭ್ಯ, ಕಾರ್ಮಿಕರು, ಕಚ್ಚಾವಸ್ತು ಹೀಗೆ ಎಲ್ಲ ಮಾಹಿತಿ ಒಂದೇಸೂರಿನಲ್ಲಿ ಸಿಗುವಂತೆ ಮಾಡಲು ಸಾರ್ಥಕ ಯೋಜನೆ ಜಾರಿಗೊಳಿಸಲಾಗಿದೆ’ ಎಂದರು.

ಕಾಸಿಯಾ ಅಧ್ಯಕ್ಷ ಕೆ.ಬಿ. ಅರಸಪ್ಪ ಮಾತನಾಡಿ ‘ಜಿಲ್ಲೆಯಲ್ಲಿ ಇನ್ನಷ್ಟು ಕೈಗಾರಿಕೆಗಳ ಸ್ಥಾಪನೆ ಅಗತ್ಯವಿದ್ದು, ಮೂಲ ಸೌಕರ್ಯ ಕಲ್ಪಿಸಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು’ ಎಂದು ಕೋರಿದರು.

ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ನಿಂಗಣ್ಣ ಎಸ್‌. ಬಿರಾದಾರ, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಭಾರ ಜಂಟಿ ನಿರ್ದೇಶಕ ದೊಡ್ಡಬಸವರಾಜು, ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ ಪಾಲ್ಗೊಂಡಿದ್ದರು.

ಹೂಡಿಕೆ: ಕರ್ನಾಟಕವೇ ಮುಂದೆ

ಹೂಡಿಕೆಗೆ ರಾಷ್ಟ್ರಮಟ್ಟದಲ್ಲಿ ಕರ್ನಾಟಕವೇ ಮುಂಚೂಣಿಯಲ್ಲಿದೆ ಎಂದು ಶೆಟ್ಟರ್‌ ತಿಳಿಸಿದರು. ಕೇಂದ್ರ ಸರ್ಕಾರದ ಉದ್ಯಮ ಹಾಗೂ ಆಂತರಿಕ ವ್ಯವಹಾರಗಳ ಉತ್ತೇಜನ ಇಲಾಖೆಗೆ 2020ರ ಜನವರಿಯಿಂದ ಅಕ್ಟೋಬರ್‌ ಅವಧಿಯಲ್ಲಿ ದೇಶದಾದ್ಯಂತ ಬಂದ ಒಟ್ಟು 1,188 ಅರ್ಜಿಗಳಲ್ಲಿ ₹3.76 ಲಕ್ಷ ಸಾವಿರ ಕೋಟಿ ಹೂಡಿಕೆಗೆ ಉದ್ಯಮಿಗಳು ಆಸಕ್ತಿ ತೋರಿಸಿದ್ದಾರೆ. ಇದರಲ್ಲಿ 95 ಅರ್ಜಿಗಳು ರಾಜ್ಯದಿಂದ ಸಲ್ಲಿಕೆಯಾಗಿದ್ದು, ₹1.54 ಸಾವಿರ ಲಕ್ಷ ಕೋಟಿ ಹೂಡಿಕೆಗೆ ಕಾಯತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಐದಾರು ಕಡೆ ಕೈಗಾರಿಕಾ ಉಪನಗರಗಳನ್ನು ಸ್ಥಾಪಿಸುವ ಉದ್ದೇಶವಿದ್ದು, ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶವನ್ನು ಆದ್ಯತೆ ಮೇರೆಗೆ ಕೈಗಾರಿಕಾ ಉಪನಗರವಾಗಿ ಮಾಡಲಾಗುವುದು. ನಗರಾಭಿವೃದ್ಧಿ ಇಲಾಖೆಯೊಂದಿಗೆ ಈಗಾಗಲೇ ಸ್ಥಾಪಿಸಲಾಗಿರುವ ಕೈಗಾರಿಕಾ ವಸಾಹತುಗಳಿಗೆ ಉಪನಗರ ಸ್ಥಾನ ಮಾನ ನೀಡುವಂತೆ ಕೋರಲಾಗಿದೆ ಎಂದರು.

ಕಡೇಚೂರಿನಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ: ಶೆಟ್ಟರ್‌

ಯಾದಗಿರಿ ಜಿಲ್ಲೆಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ನಾಲ್ಕು ಸಾವಿರ ಎಕರೆ ಭೂಮಿ ಲಭ್ಯವಿದ್ದು, ಅಲ್ಲಿ ಬಂಡವಾಳ ಹೂಡಿಕೆ ಮಾಡಲು 70 ಕಂಪನಿಗಳು ಆಸಕ್ತಿ ತೋರಿಸಿವೆ. ಇದರಿಂದಾಗಿ ಅಲ್ಲಿ ಸಾವಿರಾರು ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಜಗದೀಶ ಶೆಟ್ಟರ್‌ ತಿಳಿಸಿದರು.

‘ಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಮಾವೇಶ ನಡೆಸುವುದಕ್ಕಿಂತಲೂ ಮೊದಲು ಹೈದರಾಬಾದ್‌ನಲ್ಲಿ ರೋಡ್‌ ಷೋ ಮಾಡಲಾಗಿತ್ತು. ನಮ್ಮ ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಲಾಗಿತ್ತು. ಇದರಿಂದಾಗಿ ಹೈದರಾಬಾದ್‌ನ ಕಂಪನಿಗಳು ತಮಗೆ ಸಮೀಪದ ಯಾದಗಿರಿಯಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿವೆ’ ಎಂದರು.

’ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ನೌಕರಿಗಾಗಿ ವಲಸೆ ಹೋಗುವವರ ಸಂಖ್ಯೆ ಹೆಚ್ಚಿದ್ದು, ಇದನ್ನು ತಪ್ಪಿಸಲು ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಔಷಧಿಗಳ ಪಾರ್ಕ್ ಆರಂಭಿಸುವಂತೆ ಕೇಂದ್ರ ಸಚಿವ ಸದಾನಂದ ಗೌಡ ಅವರಿಗೆ ಕೋರಿದ್ದೇನೆ. ಪಾರ್ಕ್‌ ಆರಂಭಿಸಲು ಒಂದು ಸಾವಿರ ಎಕರೆ ಭೂಮಿ ನೀಡಲು ಸಿದ್ಧವಿದ್ದೇವೆ ಎಂದೂ ಲಿಖಿತ ಒಪ್ಪಿಗೆ ಕೊಟ್ಟಿದ್ದೇನೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು