ಗುರುವಾರ , ಫೆಬ್ರವರಿ 20, 2020
29 °C
ಹುಬ್ಬಳ್ಳಿ: ಕ್ಷಮತಾ ಸೇವಾ ಸಂಸ್ಥೆ ಆಯೋಜಿಸಿರುವ ‘ಅಂತರರಾಷ್ಟ್ರೀಯ ಗಾಳಿಪಟ ಉತ್ಸವ–2020’

ಬಾನಂಗಳದಲ್ಲಿ ಗಾಳಿಪಟಗಳ ಚಿತ್ತಾರ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಗಾಂಧೀಜಿ, ನಾಗರಹಾವು, ಡಾಲ್ಫಿನ್, ಡ್ರ್ಯಾಗನ್, ಸಾಂಟಾಕ್ಲಾಸ್, ಸ್ಟ್ರಾಬೇರಿ... ಇವುಗಳು ಎಂದಾದರೂ ಆಗಸದಲ್ಲಿ ಹಾರಾಡುವುದು ಸಾಧ್ಯವೇ? ನಿಜಕ್ಕೂ ಇಲ್ಲ. ಆದರೆ, ಹುಬ್ಬಳ್ಳಿಯ ಬಾನಂಗಳದಲ್ಲಿ ಸೋಮವಾರ ಇವೆಲ್ಲವೂ ಸ್ವಚ್ಛಂದವಾಗಿ ಹಾರಾಡುತ್ತಾ ಹೊಸ ಚಿತ್ತಾರವನ್ನು ಮೂಡಿಸಿದವು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕ್ಷಮತಾ ಸೇವಾ ಸಂಸ್ಥೆಯು ನಗರದ ಹೊರವಲಯದ ಬಿಜಾಪುರ ರಸ್ತೆಯಲ್ಲಿ ಆಯೋಜಿಸಿರುವ ಎರಡು ದಿನಗಳ ‘ಅಂತರರಾಷ್ಟ್ರೀಯ ಗಾಳಿಪಟ ಉತ್ಸವ–2020’ ಇಂತಹದ್ದೊಂದು ಸೋಜಿಗಕ್ಕೆ ವೇದಿಕೆಯಾಯಿತು.

ದೇಶ–ವಿದೇಶಗಳಿಂದ ಬಂದಿದ್ದ ಅಂದಾಜು 50 ಮಂದಿ ಬಗೆ ಬಗೆಯ ವರ್ಣರಂಜಿತ ಗಾಳಿಪಟಗಳನ್ನು ಆಗಸದಲ್ಲಿ ಹಾರಿಸುತ್ತಿದ್ದರೆ, ನೂರಾರು ಸಂಖ್ಯೆಯಲ್ಲಿ ಬಂದಿದ್ದ ಮಂದಿ ಕಣ್ತುಂಬಿಕೊಂಡರು. ಮಕ್ಕಳು ಸಂಭ್ರಮದಿಂದ ಕುಣಿದು ಕುಪ್ಪಳಿಸಿದರು. ಪಟಗಳ ದಾರ ಹಿಡಿದು ತಾವೂ ಕೆಲ ಹೊತ್ತು ಹಾರಿಸಿ ಸಂಭ್ರಮಿಸಿದರು.

ವಿದೇಶದ ಥಾಯ್ಲೆಂಡ್, ನೆದರ್ಲೆಂಡ್, ಇಂಗ್ಲೆಂಡ್, ಇಂಡೊನೇಷ್ಯಾ, ಎಸ್ತೋನಿಯಾ, ಟ್ಯೂನಿಷಿಯಾ ಹಾಗೂ ರಾಜ್ಯ ಸೇರಿದಂತೆ ಮಹಾರಾಷ್ಟ್ರ, ಗುಜರಾತ್‌ಗಳ ಗಾಳಿಪಟ ಪಟುಗಳು ಉತ್ಸವದಲ್ಲಿ ಭಾಗವಹಿಸಿದ್ದರು. ಎಲ್ಲರೂ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿರುವವರೇ ಆಗಿದ್ದು ವಿಶೇಷವಾಗಿತ್ತು.

ವಿಭಿನ್ನವಾಗಿ ಉದ್ಘಾಟನೆ:

ಬಿಳಿ ಬೋರ್ಡ್‌ ಮೇಲೆ ಚಿತ್ರ ಬಿಡಿಸುವ ಮೂಲಕ, ಎರಡು ದಿನಗಳ ಉತ್ಸವಕ್ಕೆ ಅತಿಥಿಗಳು ವಿನೂನತವಾಗಿ ಚಾಲನೆ ನೀಡಿದರು.

ಬೆಳಗಾವಿಯ ಶಾಸಕ ಅಭಯ ಪಾಟೀಲ, ನವಲಗುಂದದ ಶಂಕರಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಪೊಲೀಸ್ ಕಮಿಷನರ್ ಆರ್. ದಿಲೀಪ್, ಕ್ಷಮತಾ ಸೇವಾ ಸಂಸ್ಥೆಯ ಸಂಚಾಲಕ ಗೋವಿಂದ ಜೋಶಿ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಸಚಿವ ಪ್ರಹ್ಲಾದ ಜೋಶಿ ಅವರ ಪತ್ನಿ ಜ್ಯೋತಿ ಜೋಶಿ, ಬಿಜೆಪಿ ಮುಖಂಡರಾದ ಮಹೇಶ ಟೆಂಗಿನಕಾಯಿ, ಮಾ. ನಾಗರಾಜ, ಲಿಂಗರಾಜ ಪಾಟೀಲ, ಮಲ್ಲಿಕಾರ್ಜುನ ಸಾವಕಾರ, ಬಸವರಾಜ ಕುಂದಗೋಳಮಠ, ನಾಗೇಶ ಕಲಬುರ್ಗಿ, ಮಹೇಂದ್ರ ಕವತಾಳ ಮುಂತಾದವರು ಉದ್ಘಾಟನೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಮೋಜಿನ ಆಟ:ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಮ್ಯೂಸಿಕಲ್ ಚೇರ್ ಸ್ಪರ್ಧೆ ಹಾಗೂ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಹೆಚ್ಚಿನ ಮಂದಿ ಉತ್ಸಾಹದಿಂದ ಭಾಗವಹಿಸಿದ್ದರು. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಯಿತು.

ಅನಿಲ್ ಕುಮಾರ್ ಮಾಲಗಾರ ಹಾಗೂ ಮೋಹನ್ ರಾವ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು