ಭಾನುವಾರ, ಡಿಸೆಂಬರ್ 8, 2019
21 °C
ಜಪಾನ್‌ ಎಕ್ಸ್‌ಟರ್ನಲ್‌ ಟ್ರೇಡ್‌ ಆರ್ಗನೈಸೇಷನ್‌ (ಜೆಟ್ರೊ)

‘ಜಪಾನ್‌ನಲ್ಲಿ ಹೂಡಿಕೆಗೆ ಸಕಲ ನೆರವು: ಜೆಟ್ರೊನ ಮಹಾನಿರ್ದೇಶಕ ತಕಾಶಿ ಸುಜುಕಿ

Published:
Updated:
Prajavani

ಹುಬ್ಬಳ್ಳಿ: ಭಾರತೀಯ ಕಂಪನಿಗಳು ಜಪಾನ್‌ನಲ್ಲಿ ಹೂಡಿಕೆ ಮಾಡಲು ಮುಂದಾದರೆ ಜಪಾನ್‌ ಸರ್ಕಾರ ನೆರವು ನೀಡಲು ಸಿದ್ಧವಿದೆ. ಜೊತೆಗೆ ಭಾರತದಲ್ಲಿಯೂ ಜಪಾನ್‌ ಕಂಪನಿಗಳ ಹೂಡಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಜಪಾನ್‌ ಎಕ್ಸ್‌ಟರ್ನಲ್‌ ಟ್ರೇಡ್‌ ಆರ್ಗನೈಸೇಶನ್‌ (ಜೆಟ್ರೊ)ದ ಮಹಾನಿರ್ದೇಶಕ ತಕಾಶಿ ಸುಜುಕಿ ತಿಳಿಸಿದರು.

ಇಲ್ಲಿನ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಪಾನ್‌ ಪ್ರಧಾನಿ ಶಿಂಜೊ ಅಬೆ ಅಕ್ಟೋಬರ್‌ನಲ್ಲಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಜಪಾನ್‌ನಲ್ಲಿ ಭಾರತೀಯ ಉದ್ಯಮಿಗಳಿಗೆ ಪೂರಕ ವಾತಾವರಣವನ್ನು ಸೃಷ್ಟಿಸಲು ಜೆಟ್ರೊ ಅಗತ್ಯ ನೆರವು ನೀಡಲಿದೆ. ಜಪಾನ್ ಉದ್ಯಮಿಗಳು ಭಾರತದಲ್ಲಿ ತಮ್ಮ ಉದ್ಯಮಗಳನ್ನು ಆರಂಭಿಸಲು ಆಸಕ್ತಿ ತೋರಿಸಿದ ಪರಿಣಾಮವಾಗಿ ಪ್ರಸ್ತುತ ದೇಶದಲ್ಲಿ 1369 ಜಪಾನ್‌ ಕಂಪನಿಗಳ 5 ಸಾವಿರ ಕಚೇರಿಗಳಿವೆ. 2006ರಲ್ಲಿ ಕೇವಲ 267 ಕಚೇರಿಗಳಿದ್ದವು. ಇಷ್ಟಾಗಿಯೂ ನಮಗೆ ಸಮಾಧಾನವಿಲ್ಲ. ಇನ್ನಷ್ಟು ಹೂಡಿಕೆದಾರರನ್ನು ಭಾರತಕ್ಕೆ ಕರೆತರಲಿದ್ದೇವೆ, ಜಪಾನ್‌ನಲ್ಲಿ 15 ಕಂಪನಿಗಳು ತಮ್ಮ ಚಟುವಟಿಕೆಗಳನ್ನು ಆರಂಭಿಸಿವೆ’ ಎಂದರು.

ಜೆಟ್ರೊದಲ್ಲಿ ಭಾರತೀಯ ಮೂಲದ ದೀಪಕ್‌ ಆನಂದ್‌, ಸ್ವಸ್ತಿಕ್‌ ಕುಲಕರ್ಣಿ ಅವರು ಭಾರತೀಯ ಉದ್ಯಮಿಗಳಿಗೆ ಅಗತ್ಯ ತಾಂತ್ರಿಕ ನೆರವನ್ನು ನೀಡಲಿದ್ದಾರೆ ಎಂದು ಹೇಳಿದರು.

‘ಜಪಾನ್‌ನಲ್ಲಿ 350 ಬಿಲಿಯನ್‌ ಅಮೆರಿಕನ್‌ ಡಾಲರ್‌ನಷ್ಟು ಹೂಡಿಕೆ ಮಾಡಲು ನಾವು ಪ್ರಯತ್ನ ಮುಂದುವರಿಸಿದ್ದೇವೆ. ಜೊತೆಗೆ ಕರ್ನಾಟಕದ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಜಪಾನ್‌ ಉದ್ಯಮಗಳ ಸ್ಥಾಪನೆಗೆ ಯತ್ನಿಸುತ್ತೇವೆ’ ಎಂದರು.

ಜೆಟ್ರೊ ಬೆಂಗಳೂರು ಘಟಕದ ಸಂಶೋಧನಾ ವಿಭಾಗದ ನಿರ್ದೇಶಕ ದೀಪಕ್‌ ಆನಂದ್‌ ಸಂವಾದದಲ್ಲಿ ಭಾಗವಹಿಸಿದ್ದರು.

ಕೆಸಿಸಿಐ ಅಧ್ಯಕ್ಷ ವಿ.ಪಿ.ಲಿಂಗನಗೌಡರ, ಗೌರವ ಕಾರ್ಯದರ್ಶಿ ವಿನಯ್‌ ಜೆ. ಜವಳಿ, ಜಂಟಿ ಕಾರ್ಯದರ್ಶಿ ಅಶೋಕ ಗಡಾದ, ಜಿಲ್ಲಾ, ಕೆಸಿಸಿಐ ಮಾಜಿ ಅಧ್ಯಕ್ಷ ರಮೇಶ ಪಾಟೀಲ, ಸಿದ್ಧೇಶ್ವರ ಕಮ್ಮಾರ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು