ಶನಿವಾರ, ಡಿಸೆಂಬರ್ 7, 2019
24 °C

ಸದ್ಯದಲ್ಲೇ ಹೂಡಿಕೆದಾರರ ಸಮಾವೇಶ: ಸಚಿವರಾದ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಅವಳಿನಗರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಸದ್ಯದಲ್ಲೇ ಹೂಡಿಕೆದಾರರ ಸಮಾವೇಶ ನಡೆಲಾಗುವುದು’ ಎಂದು ಸಚಿವರಾದ ಜಗದೀಶ ಶೆಟ್ಟರ್ ಹಾಗೂ ಪ್ರಹ್ಲಾದ ಜೋಶಿ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಇಬ್ಬರೂ, ಹೂಡಿಕೆದಾರರ ಸಮಾವೇಶ ಆಯೋಜಿಸುವ ಬಗ್ಗೆ ಒಮ್ಮತ ವ್ಯಕ್ತಪಡಿಸಿದರು.

ಬೃಹತ್‌ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ‘ವಿಮಾನ ನಿಲ್ದಾಣ, ರೈಲ್ವೆ ಜಂಕ್ಷನ್, ರಾಷ್ಟ್ರೀಯ ಹೆದ್ದಾರಿ ಇರುವ ಹುಬ್ಬಳ್ಳಿ ಮತ್ತು ಧಾರವಾಡ ಕೈಗಾರಿಕೆಗಳ ಸ್ಥಾಪನೆಗೆ ಸೂಕ್ತ ನಗರಳಾಗಿವೆ. ಕೈಗಾರಿಕೆ ಸ್ಥಾಪಿಸಲು ಯಾರೇ ಬಂದರೂ, ಕೆಐಡಿಬಿಯಿಂದ ಭೂಮಿ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲು ಸಿದ್ಧನಿದ್ದೇನೆ’ ಎಂದರು.

‘ಇತ್ತೀಚೆಗೆ ಹೊರ ರಾಜ್ಯಗಳ ಉದ್ಯಮಿಗಳ ಜತೆ ನಡೆದ ಸಭೆಯಲ್ಲಿ, ವಿನಾಯ್ತಿ ಕೊಟ್ಟರೆ ಈ ಭಾಗದಲ್ಲಿ ಕೈಗಾರಿಕೆ ಆರಂಭಿಸುವುದಾಗಿ ಹಲವರು ಹೇಳಿದ್ದಾರೆ. ಚೀನಾದ ಉತ್ಪನ್ನಗಳ ಮೇಲೆ ಅಮೆರಿಕ ಹೆಚ್ಚಿನ ಸುಂಕ ವಿಧಿಸಿರುವುದರಿಂದ, ಅಲ್ಲಿನ ಉದ್ಯಮಿಗಳು ಭಾರತದತ್ತ ಮುಖ ಮಾಡಿದ್ದಾರೆ. ಅವರನ್ನು ಕರ್ನಾಟಕಕ್ಕೆ ಕರೆ ತರುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ’ ಎಂದು ಹೇಳಿದರು.

ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಹಾಗೂ ಗಣಿ ಖಾತೆ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ‘ಕೈಗಾರಿಕಾಭಿವೃದ್ಧಿಗಾಗಿ ಹುಬ್ಬಳ್ಳಿ–ಧಾರವಾಡ ಫೋರಂ ರಚಿಸಲಾಗಿದ್ದು, ಅದಕ್ಕೆ ಉದ್ಯಮಿ ವಿಜಯ ಸಂಕೇಶ್ವರ ಅವರು ಅಧ್ಯಕ್ಷರಾಗಿದ್ದಾರೆ. ನಮ್ಮ ಭಾಗಕ್ಕೆ ಕೈಗಾರಿಕೆಗಳನ್ನು ತರಲು ಏನೇನು ಮಾಡಬಹುದು ಎಂಬುದರ ಬಗ್ಗೆ ಸಲಹೆ ನೀಡಬೇಕು. ಇದಕ್ಕೆ ವಾಣಿಜ್ಯೋದ್ಯಮ ಸಂಸ್ಥೆಯವರೂ ಕೈ ಜೋಡಿಸಬೇಕು’ ಎಂದರು.

‘ಒಂದು ತಿಂಗಳೊಳಗೆ ಏರ್‌ ಇಂಡಿಯಾ ವಿಮಾನವು ಹುಬ್ಬಳ್ಳಿಯಿಂದ ಮುಂಬೈಗೆ ಹಾರಾಟ ನಡೆಸಲಿದೆ. ಇಂಡಿಗೊ ಹಾಗೂ ಸ್ಪೈಸ್ ಜೆಟ್ ಕಂಪನಿ ಜತೆಗೂ ಮಾತನಾಡಿದ್ದು, ಅವರೂ ಸೇವೆ ಆರಂಭಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಸಿಆರ್‌ಎಫ್ ಅನುದಾನದಲ್ಲಿ ನಗರದ ಮತ್ತಷ್ಟು ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು. ರೈಲು ನಿಲ್ದಾಣದಲ್ಲಿ ಮತ್ತೆರಡು ಪ್ಲಾಟ್‌ಫಾರಂ ಆರಂಭಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಸಚಿವೆ ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ, ಸಂಸದ ಅಣ್ಣಾ ಸಾಹೇಬ ಜೊಲ್ಲೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಕೆಸಿಸಿಐ ಅಧ್ಯಕ್ಷ ವಿ.ಪಿ. ಲಿಂಗನಗೌಡರ, ಉಪಾಧ್ಯಕ್ಷರಾದ ಮಹೇಂದ್ರ ಲದ್ದಡ, ಅಶೋಕ ತೋಳನವರ, ಜಿ.ಕೆ. ಆದಪ್ಪಗೌಡರ, ಕಾರ್ಯದರ್ಶಿ ವಿನಯ ಜವಳಿ, ಜಂಟಿ ಕಾರ್ಯದರ್ಶಿ ಅಶೋಕ ಗಾಡದ ಇದ್ದರು.

ಅವಳಿನಗರದಲ್ಲಿ ಕೈಗಾರಿಕಾಭಿವೃದ್ಧಿಗೆ ಸಂಬಂಧಿಸಿದಂತೆ ಕೆಸಿಸಿಐ ವತಿಯಿಂದ ಮೂವರು ಸಚಿವರಿಗೂ ಮನವಿ ಸಲ್ಲಿಸಲಾಯಿತು.

ಬೇಕೆಂದೇ ಕೈಗಾರಿಕೆ ಸಚಿವನಾದೆ: ಶೆಟ್ಟರ್

‘ನಾನು ಕೈಗಾರಿಕಾ ಖಾತೆ ಸಚಿವನಾಗಿದ್ದಕ್ಕೆ ಕೆಲವರು, ‘ಯಾಕ್ರೀ ಈ ಖಾತೆ ತೆಗೆದುಕೊಂಡಿರಿ. ಕಂದಾಯ ಖಾತೆ ಕೇಳೋದಲ್ವಾ’ ಎಂದು ಬೇಸರದಿಂದ ಕೇಳಿದರು. ಆದರೆ, ನಾನು ಬೇಕೆಂದೇ ಈ ಖಾತೆಯನ್ನು ಆಯ್ಕೆ ಮಾಡಿಕೊಂಡೆ’ ಎಂದು ಸಚಿವ ಜಗದೀಶ ಶೆಟ್ಟರ್ ಹೇಳಿದರು.

‘ಬೆಂಗಳೂರು ಕೇಂದ್ರಿತವಾಗಿರುವ ಕೈಗಾರಿಕೆಗಳನ್ನು ಉತ್ತರ ಕರ್ನಾಟಕ ಸೇರಿದಂತೆ ಎಲ್ಲಾ ಭಾಗಕ್ಕೂ ವಿಸ್ತರಿಸಲು ಈ ಖಾತೆ ಅನುಕೂಲಕಾರಿ. ನಾನು ಬೇಕು ಎಂದಿದ್ದರೆ ಕಂದಾಯವಷ್ಟೇ ಅಲ್ಲ, ಗೃಹ ಖಾತೆಯನ್ನೂ ನೀಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿದ್ಧರಿದ್ದರು’ ಎಂದರು.

ಪ್ರತಿಕ್ರಿಯಿಸಿ (+)