ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಮುಕ್ತವಾಗುವುದೇ ಈದ್ಗಾ ಮೈದಾನ?

ಕಾರ್ಯಕ್ರಮಕ್ಕೆ ಅವಕಾಶ ಕೋರಿದ ಸಂಘಟನೆ, ಸಮುದಾಯಗಳು: ಪಾಲಿಕೆ ಮೇಲೆ ಹೆಚ್ಚಿದ ಒತ್ತಡ
Last Updated 8 ನವೆಂಬರ್ 2022, 12:15 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎರಡು ತಿಂಗಳ ಹಿಂದೆ ಗಣೇಶೋತ್ಸವಕ್ಕೆ ಸಾಕ್ಷಿಯಾಗಿ ದೇಶದ ಗಮನ ಸೆಳೆದಿದ್ದ ನಗರದ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿರುವ ಈದ್ಗಾ ಮೈದಾನ, ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಗಣೇಶೋತ್ಸವದ ಬಳಿಕ ವಿವಿಧ ಸಮುದಾಯಗಳು, ಸಂಘಟನೆಗಳು ಹಾಗೂ ಪಕ್ಷಗಳು ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ಪಾಲಿಕೆಗೆ ಮನವಿ ಸಲ್ಲಿಸಿವೆ. ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆಗೆ ಒತ್ತಡ ಹೇರುತ್ತಿವೆ.

ಮಹಾನಗರ ಪಾಲಿಕೆಯ ಒಡೆತನದ ಮೈದಾನವು ಹಿಂದೊಮ್ಮೆ ರಾಷ್ಟ್ರಧ್ವಜದ ವಿಚಾರದಲ್ಲೂ ದೊಡ್ಡ ಸುದ್ದಿಯಾಗಿತ್ತು. ಆಗ ಸುಪ್ರೀಂಕೋರ್ಟ್, ಮುಸ್ಲಿಮರಿಗೆ ವರ್ಷಕ್ಕೆ ಎರಡು ಸಲ ಪ್ರಾರ್ಥನೆ ಹಾಗೂ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದಂದು ಧ್ವಜಾರೋಹಣಕ್ಕೆಪಾಲಿಕೆಗೆ ಅವಕಾಶ ನೀಡಿ ಆದೇಶ ಹೊರಡಿಸಿತ್ತು.

ಈ ವರ್ಷ ಗಣೇಶ ಹಬ್ಬ ಹತ್ತಿರ ಬರುತ್ತಿದ್ದಂತೆ, ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಬೇಕೆಂದು ಸಂಘಟನೆಯೊಂದು ದನಿ ಎತ್ತಿತು. ಇದಕ್ಕೆ ಕೆಲ ಹಿಂದೂಪರ ಸಂಘಟನೆಗಳು ದನಿಗೂಡಿಸಿದವು. ಪ್ರತಿಭಟನೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸುವುದು, ಅವಕಾಶ ಕೊಡುವಂತೆ ಗಡುವು ನೀಡುವುದು ಜೋರಾಯಿತು.

ಆರು ಸಂಘಟನೆಗಳು ಗಣೇಶೋತ್ಸವಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದವು. ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಿಷಯ ಚರ್ಚೆಯಾಯಿತು. ಮೇಯರ್ ಸದನ ಸಮಿತಿ ರಚಿಸಿದ್ದರು. ಸಮಿತಿಯು ಮೂರು ದಿನಗಳ ಗಣೇಶೋತ್ಸವಕ್ಕೆ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಗೆ ಅನುಮತಿ ನೀಡಿತ್ತು.

ಇದರ ಬೆನ್ನಲ್ಲೇ, ವಿವಿಧ ಕನ್ನಡಪರ ಸಂಘಟನೆಗಳು ಮತ್ತು ಸಮುದಾಯಗಳು ಸಹ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕೇಳತೊಡಗಿವೆ. ಪಾಲಿಕೆ ಎಲ್ಲರಿಗೂ ಮೈದಾನವನ್ನು ಮುಕ್ತಗೊಳಿಸಲಿದೆಯೇ ಎಂದು ಕಾದು ನೋಡಬೇಕಿದೆ.

ಟಿಪ್ಪು, ಕನಕದಾಸ ಜಯಂತಿಗೆ ಮನವಿ

ಮೈದಾನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಅವಕಾಶ ನೀಡಬೇಕು ಎಂದು ಎಐಎಂಐಎಂ ಪಕ್ಷ ಹಾಗೂ ಸಮತಾ ಸೈನಿಕ ದಳದ ಮುಖಂಡರು,ಪಾಲಿಕೆಗೆ ಈಗಾಗಲೇ ಮನವಿ ಮಾಡಿದ್ದಾರೆ. ಮೇಯರ್ ಭೇಟಿ ಮಾಡಿ ಒತ್ತಡ ಕೂಡ ಹೇರಿದ್ದಾರೆ.

‘ಗಣೇಶೋತ್ಸವದಂತೆ ಟಿಪ್ಪು ಜಯಂತಿಗೂ ಅನುಮತಿ ನೀಡಬೇಕು’ ಎಂದು ಎಐಎಂಐಎಂ ಪಕ್ಷದಧಾರವಾಡ ಜಿಲ್ಲಾ ಘಟಕದ ಜಂಟಿ ಕಾರ್ಯದರ್ಶಿ ವಿಜಯ ಗುಂಟ್ರಾಳ ಒತ್ತಾಯಿಸಿದ್ದಾರೆ.

ಇದರ ಬೆನ್ನಲ್ಲೇ, ಸಮಾಜ ಸುಧಾರಕ ಕನಕದಾಸ ಜಯಂತಿಗೂ ಅನುಮತಿ ಕೊಡಬೇಕು ಎಂದು, ಪಾಲಿಕೆಗೆ ಮನವಿ ಕೊಟ್ಟಿರುವ ಶ್ರೀರಾಮ ಸೇನಾದ ಜಿಲ್ಲಾ ಅಧ್ಯಕ್ಷ ಅಣ್ಣಪ್ಪ ದಿವಟಗಿ ಆಗ್ರಹಿಸಿದ್ದಾರೆ.

ಬಿಜೆಪಿ ವಿರೋಧ

ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಆಚರಣೆಗೆ ಎಐಎಂಐಎಂ ಪಕ್ಷಕ್ಕೆ ಪಾಲಿಕೆ ಅನುಮತಿ ನೀಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುವುದಿಲ್ಲ ಎಂದು ಹೇಳಿದೆ. ಹೀಗಿರುವಾಗ ಮೈದಾನದಲ್ಲಿ ಆಚರಿಸಲು ಅನುಮತಿ ಕೇಳುವುದು ಔಚಿತ್ಯವಲ್ಲ. ಗಣೇಶೋತ್ಸವಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಅವರು, ಟಿಪ್ಪು ಜಯಂತಿ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದು ಪಕ್ಷದ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ ಹಾಗೂ ಜಿಲ್ಲಾ ವಕ್ತಾರ ರವಿ ನಾಯಕ ಹೇಳಿದ್ದಾರೆ.

ಸಾಮಾನ್ಯ ಸಭೆ ನಿರ್ಧರಿಸಲಿದೆ: ಆಯುಕ್ತ

‘ಮೈದಾನದಲ್ಲಿ ಯಾವುದಕ್ಕೆಲ್ಲಾ ಅನುಮತಿ ನೀಡಬೇಕೆಂಬುದನ್ನು ಸಾಮಾನ್ಯ ಸಭೆ ನಿರ್ಧರಿಸಲಿದೆ. ಕೆಲ ಕಾರ್ಯಕ್ರಮಗಳಿಗೆ ಅನುಮತಿ ಕೋರಿ ನನಗೂ ಅರ್ಜಿಗಳು ಬಂದಿವೆ. ಈ ವಿಷಯವನ್ನು ಮುಂದೆ ನಡೆಯಲಿರುವ ಸಭೆಯ ಗಮನಕ್ಕೆ ತರುವೆ. ಅಲ್ಲಿನ ನಿರ್ಣಯದಂತೆ, ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಯಾರಿಗೂ ಅನುಮತಿ ಇರುವುದಿಲ್ಲ’ ಎಂದು ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ‘ಪ್ರಜಾವಾಣಿ’ಗೆ ತಿಳಿಸಿದರು.

ಚರ್ಚಿಸಿ ನಿರ್ಧಾರ: ವಿವಿಧ ಜಯಂತಿ ಆಚರಣೆಗೆ ಮೈದಾನದಲ್ಲಿ ಅನುಮತಿ ಕೋರಿ ಬಂದಿರುವ ಅರ್ಜಿಗಳ ಕುರಿತು ಆಯುಕ್ತರ ಜೊತೆ ಚರ್ಚಿಸಿ, ಕಾನೂನಾತ್ಮಕವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೇಯರ್ ಈರೇಶ ಅಂಚಟಗೇರಿ ಹೇಳಿದರು.

ಪಾಲಿಕೆ ತೀರ್ಮಾನಿಸಲಿ

ಮೈದಾನದಲ್ಲಿ ಟಿಪ್ಪು ಜಯಂತಿ ಆಚರಿಸಲು ಅನುಮತಿ ನೀಡಬೇಕೋ, ಬೇಡವೋ ಎಂಬುದರ ಬಗ್ಗೆ ಪಾಲಿಕೆಯ ಮೇಯರ್‌, ಆಯುಕ್ತರು, ಆಡಳಿತ ಮಂಡಳಿ ತೀರ್ಮಾನ ಕೈಗೊಳ್ಳಬೇಕು.

-ಜಗದೀಶ ಶೆಟ್ಟರ್‌, ಶಾಸಕ

‘ಯಥಾಸ್ಥಿತಿ ಕಾಯ್ದುಕೊಳ್ಳಲಿ’

ಈದ್ಗಾ ಮೈದಾನದ ಪೂರ್ವಾಪರ, ಕೋರ್ಟ್ ಆದೇಶವನ್ನು ಪರಿಶೀಲಿಸದೆ ಪಾಲಿಕೆ ಆಯುಕ್ತರು, ಬಿಜೆಪಿ ಒತ್ತಡಕ್ಕೆ ಮಣಿದು ಗಣೇಶೋತ್ಸವಕ್ಕೆ ಅನುಮತಿ ಕೊಟ್ಟಿದ್ದೇ ತಪ್ಪು. ಅದಕ್ಕಾಗಿ, ಅವರ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದೇವೆ. ಹೈಕೋರ್ಟ್‌ಗೆ ಮತ್ತೆ ಅರ್ಜಿ ಹಾಕಿದ್ದೇವೆ. ಇದೀಗ, ವಿವಿಧ ಸಮುದಾಯದವರು ಕಾರ್ಯಕ್ರಮಗಳಿಗಾಗಿ ಅನುಮತಿ ಕೋರಿದ್ದಾರೆ. ಪಾಲಿಕೆಯವರು ಮತ್ತೆ ತಪ್ಪು ಮಾಡದೆ, ಯಥಾಸ್ಥಿತಿ ಕಾಯ್ದುಕೊಳ್ಳಬೇಕು.

–ಯುಸೂಫ ಸವಣೂರ, ಅಧ್ಯಕ್ಷ, ಹುಬ್ಬಳ್ಳಿ ಅಂಜುಮನ್ ಎ ಇಸ್ಲಾಂ ಸಂಸ್ಥೆ

‘ಕೋರ್ಟ್ ಆದೇಶ ಪಾಲಿಸಲಿ’

ಈದ್ಗಾ ಮೈದಾನ ವಿಷಯ ಸೇರಿದಂತೆ, ಹಲವು ವಿಷಯಗಳಲ್ಲಿ ಮೇಯರ್ ಮತ್ತು ಆಯುಕ್ತರು ನಮ್ಮನ್ನು ಕಡೆಗಣಿಸಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ, ಸ್ಥಳೀಯ ನಾಯಕರು ನಮ್ಮ ಬೆನ್ನಿಗಿದ್ದಾರೆ ಎಂದುಕೊಂಡುಮೇಯರ್ ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳುತ್ತಿದ್ದಾರೆ. ಮೈದಾನದ ವಿಷಯದಲ್ಲಿ ಪಾಲಿಕೆ ಆಯುಕ್ತರು ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಬೇಕು.

– ದೊರೆರಾವ್ ಮಣಿಕುಂಟ್ಲ, ವಿರೋಧ ಪಕ್ಷದ ನಾಯಕ, ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT