ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಬದುಕುವುದೇ ಪುಣ್ಯ: ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ

ಆರೂಢಜ್ಯೋತಿ ಶಿವಪುತ್ರ ಸ್ವಾಮೀಜಿ ರಚಿತ ಗ್ರಂಥಗಳ ಶತಮಾನೋತ್ಸವ: ಸಿದ್ದೇಶ್ವರ ಸ್ವಾಮೀಜಿ ಅನಿಸಿಕೆ
Last Updated 5 ನವೆಂಬರ್ 2019, 15:12 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಾಧು ಸಂತರು, ಸ್ವಾಮೀಜಿಗಳು ಮತ್ತು ಅಧ್ಯಾತ್ಮದ ನೆಲೆವೀಡಾದ ಭಾರತದಲ್ಲಿ ಬದುಕುವುದೇ ದೊಡ್ಡ ಪುಣ್ಯ. ಸಂತೋಷದಿಂದ ಆ ಪುಣ್ಯ ಗಳಿಸಬೇಕು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಅಭಿನವನಗರದ ಶಾಂತಾಶ್ರಮದ ಆರೂಢಜ್ಯೋತಿ ಶಿವಪುತ್ರ ಸ್ವಾಮೀಜಿ ವಿರಚಿತ ಗ್ರಂಥಗಳ ಶತಮಾನೋತ್ಸವ ಅಂಗವಾಗಿ ಸಿದ್ಧಾರೂಢ ಮಠದ ಆವರಣದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾಮೀಜಿಗಳು ಸ್ತುತಿ, ನಿಂದನೆ ಎಲ್ಲವನ್ನೂ ಸಮಾನ ದೃಷ್ಟಿಕೋನದಲ್ಲಿ ನೋಡಿಕೊಂಡು ಹೋಗುತ್ತಾರೆ. ಮಹಾನುಭವಿಗಳು ಸತ್ಯವನ್ನು ನೋಡಿದವರು. ಎಲ್ಲ ವಿಷಯಗಳನ್ನು ಕಂಡವರೇ ಸತ್ಯದರ್ಶಿಗಳು. ಗುರುಗಳಿಗೆ ಪ್ರಿಯರಾದವರೇ ನಿಜವಾಗಿಯೂ ದೊಡ್ಡವರೆನಿಸಿಕೊಳ್ಳುತ್ತಾರೆ’ ಎಂದರು.

‘ಮನುಷ್ಯ ಜ್ಞಾನದ ಬೆಳಕಿನಲ್ಲಿ ಅರಳಿದ ಜ್ಯೋತಿಯಾಗಿದ್ದಾನೆ. ಸ್ವಾಮೀಜಿಗಳು ಹಚ್ಚುವ ಒಳ್ಳೆಯ ಮಾತಿನ ಜ್ಯೋತಿ ನಮ್ಮ ಅಂತರಂಗದ ಕತ್ತಲನ್ನು ದೂರ ಮಾಡುತ್ತದೆ. ಬೇರೆ, ಬೇರೆಯಾಗಿ ಹರಿಯುವ ನದಿಗಳು ಮಹಾಸಾಗರದಲ್ಲಿ ಒಂದಾಗುತ್ತವೆ. ಆಗ ನೀರು ಎನ್ನುವ ಹೆಸರು ಬಿಟ್ಟರೆ ಬೇರೆ ಯಾವ ಹೆಸರು ಇರುವುದಿಲ್ಲ. ಇದೇ ಬದುಕು; ಎಲ್ಲರೊಂದಿಗೆ ಒಂದಾಗುವುದೇ ನಿಜವಾದ ಜೀವನ’ ಎಂದು ಅಭಿಪ್ರಾಯಪಟ್ಟರು.

ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ ‘ಜಗತ್ತಿನಲ್ಲಿ ಯಾವ ದೇಶಕ್ಕೂ ಮಾತೆ ಎನ್ನುವುದಿಲ್ಲ. ಆದರೆ, ಭಾರತಕ್ಕೆ ಮಾತ್ರ ಮಾತೆ ಎಂದು ಕರೆಯುತ್ತೇವೆ. ಒಂದೇ ಧರ್ಮಕ್ಕೆ ಹಲವಾರು ದೇಶಗಳಿವೆ. ಹಲವಾರು ಧರ್ಮಗಳು ಇರುವ ದೇಶ ನಮ್ಮದು’ ಎಂದರು.

‘ಸಮಾನತೆಯ ಸದೃಢತೆಯ ಬುನಾದಿ ಹಾಕಿಕೊಟ್ಟಿದ್ದು ಸಿದ್ಧಾರೂಢರು. ಕಾಯಕ ಮತ್ತು ದಾಸೋಹ ಬದುಕಿನ ಅವಿಭಾಜ್ಯ ಅಂಗಗಳಾಗಿಬೇಕು. ನಮಗೆ ಪ್ರಕೃತಿ ಅನೇಕ ಪಾಠಗಳನ್ನು ಕಲಿಸಿಕೊಟ್ಟರೂ, ನಾವು ಪಾಠ ಕಲಿಯುತ್ತಿಲ್ಲ. ಪ್ರತಿ ಮನುಷ್ಯ ಆಧ್ಯಾತ್ಮಕ ಮತ್ತು ಸಂತರಿಗಾಗಿ ಬದುಕನ್ನು ಮೀಸಲಿಡಬೇಕು’ ಎಂದರು.

ಕರಿಕಟ್ಟೆಯ ಬಸವರಾಜ ಸ್ವಾಮೀಜಿ ‘ಎಲ್ಲ ಸ್ವಾಮೀಜಿಗಳ ದರ್ಶನ ಪಡೆದರೆ ಅದುವೇ ಬದುಕಿನ ದೊಡ್ಡ ಭಾಗ್ಯ’ ಎಂದರು. ಅಸುಂಡಿಯ ನೀಲಮ್ಮ ತಾಯಿ ಮಾತನಾಡಿ ‘ಅಧಿಕಾರ ಎಲ್ಲರಿಗೂ ಸಿಗುತ್ತದೆ; ಅರ್ಹತೆ ಎಲ್ಲರಿಗೂ ಸಿಗುವುದಿಲ್ಲ. ಅರ್ಹತೆ ಸಿಗಲು ಜ್ಞಾನವೇ ಆಧಾರ’ ಎಂದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಅಭಿನವ ನಗರದಿಂದ ಸಿದ್ಧಾರೂಢ ಮಠದ ಆವರಣದ ತನಕ ಆನೆಗಳ ಮೇಲೆ ಆರೂಢರ ಗ್ರಂಥಗಳ ಮೆರವಣಿಗೆ ನಡೆಯಿತು. ಸಂಜೆ ತತ್ವಾಮೃತ ಮತ್ತು ಸ್ವಾಮೀಜಿಗಳ ಪಾದಪೂಜೆ ಜರುಗಿತು. ಮಠದ ಆವರಣದಲ್ಲಿ ಹಾಕಿರುವ ಭವ್ಯ ವೇದಿಕೆಯಲ್ಲಿ ಹೊರ ಜಿಲ್ಲೆಗಳಿಂದಲೂ ಭಕ್ತರು ಬಂದಿದ್ದಾರೆ. ಸಾವಿರಾರು ಜನ ಪಾಲ್ಗೊಂಡಿದ್ದರು.

ಅಭಿನವ ಶಿವಪುತ್ರ ಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ, ಷಡಕ್ಷರಿ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಅಭಿನವ ಸಿದ್ಧಾರೂಢ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಶಿವಾನಂದ ಭಾರತಿ ಸ್ವಾಮೀಜಿ, ಅಭಿನವ ಶಿವಪುತ್ರ ಸ್ವಾಮೀಜಿ ಸೇರಿದಂತೆ ಹಲವಾರು ಸ್ವಾಮೀಜಿಗಳು ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT