ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವಳಿ ವ್ಯಾಪಾರಸ್ಥರ ಅಂಗಡಿ, ಮನೆಗಳ ಮೇಲೆ ಐಟಿ ದಾಳಿ

Last Updated 5 ಡಿಸೆಂಬರ್ 2019, 13:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ದಾಜೀಬಾನ್‌ ಪೇಟೆಯಲ್ಲಿರುವ ಎರಡು ಪ್ರಮುಖ ಜವಳಿ ಅಂಗಡಿಗಳು ಹಾಗೂ ಮಾಲೀಕರ ಮನೆಗಳ ಮೇಲೆ ಗುರುವಾರ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಗಂಗಾವತಿ ಸಿಲ್ಕ್‌ ಪ್ಯಾಲೇಸ್‌ನ ಮೂರು ಮಳಿಗೆ ಮತ್ತು ಎಸ್‌ಟಿ ಭಂಡಾರಿ ಸನ್ಸ್‌ ಬಟ್ಟೆ ಅಂಗಡಿ ಮೇಲೆ ದಾಳಿ ನಡೆದಿದೆ. 15ಕ್ಕೂ ಹೆಚ್ಚು ವಾಹನಗಳಲ್ಲಿ ಹುಬ್ಬಳ್ಳಿ, ಬೆಂಗಳೂರು, ಮೈಸೂರು ಮತ್ತು ಗೋವಾದಿಂದ ಬಂದಿದ್ದ 60ಕ್ಕೂ ಹೆಚ್ಚು ಅಧಿಕಾರಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ಅಧಿಕಾರಿಗಳು ನಗರದ ಕೇಶ್ವಾಪುರದ ಐಟಿ ಕಚೇರಿ ಮೂಲಕ ಕೇಶ್ವಾಪುರದಲ್ಲಿರುವ ಎಸ್‌. ಭಂಡಾರಿ ಅವರ ಮನೆಗೆ ತೆರಳಿ ತಪಾಸಣೆ ಆರಂಭಿಸಿದರು. ಇದಕ್ಕೂ ಮೊದಲೂ ಅಧಿಕಾರಿಗಳು ಭಂಡಾರಿ ಒಡೆತನದ ಜವಳಿ ಅಂಗಡಿಗಳ ಮೇಲೆ ನಿಗಾ ಇಟ್ಟಿದ್ದರು. ಗಂಗಾವತಿ ಸಿಲ್ಕ್‌ ಪ್ಯಾಲೇಸ್‌ನ ಮಾಲೀಕರು ಮನೆಯಲ್ಲೂ ದಾಖಲೆಗಳನ್ನು ತಪಾಸಣೆ ಮಾಡಿದ್ದಾರೆ.

ತೆರಿಗೆ ವಂಚನೆ ಹಾಗೂ ಗ್ರಾಹಕರಿಗೆ ಕೊಟ್ಟಿ ರಸೀದಿ ನೀಡಿ ವಂಚಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಗೊತ್ತಾಗಿದೆ. ಎಂದಿನಂತೆ ನಿತ್ಯದ ಕೆಲಸಕ್ಕೆ ಅಂಗಡಿಗೆ ಬಂದ ನೌಕರರನ್ನು ಅಂಗಡಿಯಲ್ಲಿಯೇ ಉಳಿಸಿಕೊಂಡು ಸಂಜೆವರೆಗೂ ಬಾಗಿಲು ಹಾಕಿ ತಪಾಸಣೆ ನಡೆಸಿದ್ದು, ಶನಿವಾರವೂ ಪರಿಶೀಲನೆ ಮುಂದುವರಿಯಬಹುದು ಎಂದು ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

ಮದುವೆ, ಮುಂಜಿ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಬಟ್ಟೆಗಳನ್ನು ಖರೀದಿಸಲು ಈ ಅಂಗಡಿಗಳತ್ತ ಬರುತ್ತಿದ್ದ ಗ್ರಾಹಕರನ್ನು ತಡೆದು ಅಂಗಡಿ ಬಂದ್ ಇದೆ ಎಂದು ಭದ್ರತಾ ಸಿಬ್ಬಂದಿ ವಾಪಸ್‌ ಕಳುಹಿಸುತ್ತಿದ್ದ ಚಿತ್ರಣ ಕಂಡು ಬಂತು.

‘ಭಂಡಾರಿ ಹಾಗೂ ಗಂಗಾವತಿ ಸಿಲ್ಕ್‌ ಪ್ಯಾಲೇಸ್‌ ಅಂಗಡಿಗಳು ಹಾಗೂ ಅವರ ಮನೆಗಳ ಬಳಿ ಭದ್ರತಾ ಸೌಲಭ್ಯ ಒದಗಿಸುವಂತೆ ಐಟಿ ಅಧಿಕಾರಿಗಳು ಹೇಳಿದ್ದರು. ನಾವು ಭದ್ರತೆ ಒದಗಿಸಿದ್ದೆವು. ಉಳಿದಂತೆ ನಮಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ’ ಎಂದು ಶಹರ ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದರು.

‘ಐಟಿ ಅಧಿಕಾರಿಗಳು ತಪಾಸಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ನೀಡಿದ್ದೇವೆ’ ಎಂದು ಗಂಗಾವತಿ ಸಿಲ್ಕ್ ಪ್ಯಾಲೇಸ್ ಮಳಿಗೆ ಮುಂದೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್‌ ಸಿಬ್ಬಂದಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT