ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಲಿಂಗಾತಯ ಸಮಾಜ ಎಚ್ಚೆತ್ತುಕೊಳ್ಳಬೇಕು

ಕಟ್ಟಡ ದುರಂತದಲ್ಲಿ ತಮ್ಮ ಹೆಸರು ಎಳೆದು ತಂದಿದ್ದಕ್ಕೆ ವಿನಯ ಕುಲಕರ್ಣಿ ಭಾವುಕ
Last Updated 11 ಏಪ್ರಿಲ್ 2019, 12:08 IST
ಅಕ್ಷರ ಗಾತ್ರ

ಧಾರವಾಡ: ‘ಎಲ್ಲಾ ಸಮಸ್ಯೆಗಳಿಗೆ ವಿನಯ ಬೇಕು. ಆದರೆ ನನಗೆ ನೀವು ಬೇಡವೇ? ಈಗಲಾದರೂ ವೀರಶೈವ ಲಿಂಗಾಯತ ಸಮಾಜ ಎಚ್ಚೆತ್ತುಕೊಂಡು ಮತದಾನ ಮಾಡಬೇಕು’ ಎಂದು ಧಾರವಾಡ ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಮನವಿ ಮಾಡಿಕೊಂಡರು.

ಇಲ್ಲಿನ ಲಿಂಗಾಯತ ಭವನದಲ್ಲಿ ಗುರುವಾರ ಜರುಗಿದ ಮತಯಾಚನೆ ಕಾರ್ಯಕ್ರಮದಲ್ಲಿ ಸಮಾಜದವರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಕ್ಷೇತ್ರದ ಉದ್ದಗಲ ಓಡಾಡಿ ಮತ ಯಾಚಿಸಿದ್ದೇನೆ. ಎಲ್ಲಾ ಸಮುದಾಯದವರೂ ನನಗೆ ಮತ ಹಾಕುವ ಭರವಸೆ ನೀಡಿದ್ದಾರೆ. ಜತೆಗೆ ವೀರಶೈವ ಲಿಂಗಾಯತ ಮತಗಳನ್ನು ಹಾಕಿಸಿಕೊಳ್ಳಿ ಎಂಬ ಸಲಹೆಯನ್ನೂ ನೀಡುತ್ತಿದ್ದಾರೆ. ಈ ಮಾತು ಕೇಳಿ ನನಗೆ ಮುಜುಗರವಾಗುತ್ತಿದೆ. ಇಂಥ ಸಂದರ್ಭದಲ್ಲಿ ಈ ಸಮಾಜವೂ ನನ್ನ ಬೆನ್ನಿಗೆ ನಿಂತಲ್ಲಿ ಜಯ ಶತಸಿದ್ಧ’ ಎಂದರು.

‘ಕರ್ನಾಟಕದಲ್ಲಿ ಟಿಕೇಟ್ಪಡೆದ ಕಟ್ಟ ಕಡೆಯ ವ್ಯಕ್ತಿ ನಾನು. ಈ ವಿಳಂಬಕ್ಕೂ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರೇ ಕಾರಣ. ಯಡಿಯೂರಪ್ಪ ಜೈಲಿಗೆ ಹೋಗಲೂ ಜೋಶಿಯೇ ಕಾರಣ. ಈಗ ನನ್ನ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಅವರು ಇಂಥ ಎಷ್ಟೇ ಪ್ರಕರಣ ದಾಖಲಿಸಿದರೂ ನಾನು ಹಿಂಜರಿಯುವುದಿಲ್ಲ’ ಎಂದರು.

‘ಕುಮಾರೇಶ್ವರ ನಗರದಲ್ಲಿ ಮಾರ್ಚ್ 19ರಂದು ಕುಸಿದ ಕಟ್ಟಡ ನನ್ನ ಮಾವ ಮತ್ತು ಅವರ ಸ್ನೇಹಿತರಿಗೆ ಸೇರಿದ್ದು. ಇವರಲ್ಲಿ ಬಿಜೆಪಿಯವರೂ ಇದ್ದಾರೆ. ದುರಂತದಲ್ಲಿ ಸಿಲುಕಿದ್ದವರರಕ್ಷಣೆಗೆಹಗಲು ರಾತ್ರಿ ನಿಂತು ಕೆಲಸ ಮಾಡಿದ್ದೇನೆ. ಹೀಗಿದ್ದರೂ ಕಟ್ಟಡ ದುರಂತದಲ್ಲಿ ವಿನಾಕಾರಣ ನನ್ನ ಹೆಸರನ್ನು ಎಳೆದು ತಂದುಹಾಳು ಮಾಡುತ್ತಿದ್ದಾರೆ’ ಎಂದು ಭಾವುಕರಾದರು.

‘ಕಟ್ಟಡ ಮಾಲೀಕರಾದ 72 ವರ್ಷದ ನನ್ನ ಮಾವ ಮತ್ತು ಪಾಲುದಾರರು ಜೈಲಿನಲ್ಲಿದ್ದಾರೆ. ಆದರೂ ಚುನಾವಣೆಯಲ್ಲಿ ಗೆಲ್ಲುವ ಏಕೈಕ ಉದ್ದೇಶದಿಂದ ನನ್ನ ಹೆಸರನ್ನು ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ’ ಎಂದು ವಿನಯ ಹೇಳಿದರು.

ರೈತ ಮುಖಂಡ ಬಾಬಾಗೌಡ ಪಾಟೀಲ ಮಾತನಾಡಿ, ‘ಬಿಜೆಪಿ ಪಕ್ಷ ರೈತರನ್ನು ಹೊರಗಿಟ್ಟು ಚುನಾವಣೆ ನಡೆಸುತ್ತಿದೆ. ವ್ಯಕ್ತಿಯೊಬ್ಬರ ಹೆಸರಿನ ಹವಾ ಮೇಲೆ ಚುನಾವಣೆ ನಡೆಯುತ್ತಿದೆ. ಮೋದಿ, ಮೋದಿ ಎನ್ನುತ್ತಿರುವವರಿಗೆ ಏಕೆ ಅನ್ನುತ್ತಿದ್ದೇವೆ ಎನ್ನುವುದೇ ಗೊತ್ತಿಲ್ಲ. ಈ ಹವಾ ಅಸಲಿಯೋ, ನಕಲಿಯೋ ತಿಳಿದಿಲ್ಲ. ಈ ಕುರಿತು ಜಾಗೃತಿ ಮೂಡಿಸಬೇಕಾದ್ದು ಅನಿವಾರ್ಯ’ ಎಂದರು.

‘ಕಳೆದ 70 ವರ್ಷದಲ್ಲಿ ಕಾಂಗ್ರೆಸ್ ಮಾಡದ್ದನ್ನು ಬಿಜೆಪಿ ಮಾಡಿದೆ ಎಂದು ಭೀಗುತ್ತಿರುವ ಮೋದಿ, ದೇಶದಲ್ಲಿ ಏಕೆ ನೀರಾವರಿ ಮಾಡಿಲ್ಲ? ಬಿಜೆಪಿ ಸರ್ಕಾರದ ಯೋಜನೆಗಳು ಕೇವಲ ಶ್ರೀಮಂತರ ಪರವಾಗಿವೆ. ದೇಶದಲ್ಲಿ ಶೇ 3ರಷ್ಟು ಜನಸಂಖ್ಯೆ ಇರುವವರು ಅಧಿಕಾರದ ಚುಕ್ಕಾಣಿ ಹಿಡಿದಿದೆ. ರೈತರನ್ನು ಬಿಟ್ಟು ಮೋದಿ ಸರ್ಕಾರ ಅಂಬಾನಿ, ಅದಾನಿ ವಿಕಾಸ ಮಾಡುತ್ತಿದ್ದಾರೆ’ ಎಂದು ಆರೋಪ ಮಾಡಿದರು.

‘ನಾವು ಇಷ್ಟು ದಿನ ಜಾತಿ ಹೆಸರಿನಲ್ಲಿ ಮತ ಕೇಳಿಲ್ಲ. ಒಂದೊಮ್ಮೆ ನೀವು ಅದನ್ನೇ ಮಾಡುತ್ತೀರೆಂದರೆ, ನಾವು ಬಿಡುವುದಿಲ್ಲ. ಲಿಂಗಾಯತರಿಗೆ ಸ್ವಾಭಿಮಾನ ಇದ್ದರೆ, ಅಭಿಮಾನದಿಂದ ವಿನಯ ಕುಲಕರ್ಣಿ ಅವರನ್ನು ಬೆಂಬಲಿಸಬೇಕು. ಆ ಮೂಲಕ ಲಿಂಗಾಯತರೇಪರೀಕ್ಷೆ ಮಾಡಿಕೊಳ್ಳೋಣ’ ಎಂದು ಬಾಬಾಗೌಡ ಪಾಟೀಲ ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ರಾಜಣ್ಣ ಕೊರವಿ, ಉಪಾಧ್ಯಕ್ಷ ಗುರುರಾಜ ಹುಣಸಿಮರದ, ಶಿವಾನಂದ ಅಂಬಡಗಟ್ಟಿ, ಬಿ.ಬಿ.ಗಂಗಾಧರಮಠ, ಶಿವಶಂಕರ ಹಂಪಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT