ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೆಟ್ಟರೇ, ಇನ್ನಾದರೂ ಹುಬ್ಬಳ್ಳಿ ಬದಲಾಗುತ್ತಾ...?

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 21 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಮಾನ್ಯ ಜಗದೀಶ ಶೆಟ್ಟರ್‌ ಅವರೇ,

ಅಬ್ಬಾ.. ಅಂತೂ ಧಾರವಾಡ ಜಿಲ್ಲೆಯ ಶಾಸಕರೊಬ್ಬರು ಹಲವು ದಿನಗಳ ನಂತರ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ. ಅದೂ ರಾಜ್ಯದ ಮುಖ್ಯಮಂತ್ರಿಯಾಗಿದ್ದ, ಹಿರಿಯರೂ ಆದ ಜಗದೀಶ ಶೆಟ್ಟರ್‌ ಅವರೇ ಈಗ ಯಡಿಯೂರಪ್ಪ ನೇತೃತ್ವದ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವುದು ನಿಜಕ್ಕೂ ಸಂತೋಷದ ವಿಷಯ.

ಮುಖ್ಯಮಂತ್ರಿಯಾಗಿದ್ದವರು ಮಂತ್ರಿಯಾಗುವುದು ಸರಿಯೊ ತಪ್ಪೊ ಎನ್ನುವ ಚರ್ಚೆಯ ಗೋಜಲಿಗೆ ನಾನು ಹೋಗುವುದಿಲ್ಲ. ನನ್ನ ಕಾಳಜಿ ಏನಿದ್ದರೂ ಕುಡಿಯುವ ನೀರು, ಮೂಲಸೌಲಭ್ಯ ಅಭಿವೃದ್ಧಿ, ಸ್ವಚ್ಛತೆ.

ಹಾಗಾದರೆ ಶೆಟ್ಟರ್‌ ಏನು ಮಾಡಬೇಕು?

ಅಧಿಕಾರ ಸಿಕ್ಕಾಗ ತಮ್ಮೂರು, ತಮ್ಮ ಕ್ಷೇತ್ರ, ತಮ್ಮ ಜಿಲ್ಲೆಗೆ ಏನೆಲ್ಲ ಮಾಡಬಹುದು ಎಂಬುದನ್ನು ಒಮ್ಮೆ ಶೆಟ್ಟರ್‌ ಅವರು ಶಿವಮೊಗ್ಗ, ಹಾಸನ ಮತ್ತು ಮೈಸೂರಿಗೆ ಹೋಗಿ ನೋಡಿ ಬಂದ್ರೆ ಒಳ್ಳೆಯದು ಅನಿಸುತ್ತೆ. ಅದರಲ್ಲೂ ಶಿವಮೊಗ್ಗ ಹೇಗಿತ್ತು? ಹೇಗಾಯಿತು ಎನ್ನುವುದು ಇವತ್ತಿಗೂ ಪವಾಡ ಅನಿಸುತ್ತದೆ. ಇದಕ್ಕೆ ಯಡಿಯೂರಪ್ಪ ಅವರಿಗೆ ಥ್ಯಾಂಕ್ಸ್‌ ಹೇಳಲೇಬೇಕು.

ಹಿಂದೆ ಕಡಿಮೆ ಅವಧಿಗೆ ಮುಖ್ಯಮಂತ್ರಿಯಾದ ಕಾರಣ ಹೆಚ್ಚು ಅಭಿವೃದ್ಧಿ ಮಾಡಲು ಆಗಲಿಲ್ಲ ಎಂದು ಶೆಟ್ಟರ್‌ ಅವರು ಆಗಾಗ್ಗೆ ಅಲವತ್ತುಕೊಂಡಿದ್ದನ್ನು ನಾನೂ ಕೇಳಿದ್ದೇನೆ. ಸತತ 6 ಬಾರಿ ಶಾಸಕರಾಗಿ ಗೆದ್ದರೂ ಅಧಿಕಾರ ಸಿಕ್ಕಿದ್ದು ಕಡಿಮೆಯೇ ಎಂಬುದು ಶೆಟ್ಟರ್ ಅವರ ಅಭಿಪ್ರಾಯ. ಹೀಗಾಗಿ ಹುಬ್ಬಳ್ಳಿ– ಧಾರವಾಡ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಆಗಲಿಲ್ಲ ಎಂದು ಹೇಳುತ್ತಲೇ ಅವರು ಕಳೆದ ಚುನಾವಣೆಯಲ್ಲಿ ವೋಟ್‌ ಕೇಳಿದ್ದು ಇನ್ನೂ ನೆನಪಿನಿಂದ ಮಾಸಿಲ್ಲ.

ಮುಖ್ಯಮಂತ್ರಿಯಾಗಿದ್ದಾಗ ಬಿಆರ್‌ಟಿಎಸ್‌ ಯೋಜನೆ ತಂದ್ರು; 24 ಗಂಟೆ ಕುಡಿಯುವ ನೀರು ಕೊಡುವುದಕ್ಕೆ ಯೋಜನೆ ರೂಪಿಸಿದ್ರು.. ಆದರೆ ಇವತ್ತಿಗೂ ಕುಡಿಯುವ ನೀರು ಅವಳಿ ನಗರದ ಜನರಿಗೆ ಗಗನಕುಸುಮ! ಮಲಪ್ರಭಾ ತುಂಬಿ ಹರಿಯುತ್ತಿದ್ದರೂ ಈಗಲೂ 10–15 ದಿನಕ್ಕೊಮ್ಮೆ ಕುಡಿಯುವ ನೀರು ಕೊಡುವ ವ್ಯವಸ್ಥೆ ಇದೆ. ಆರೇಳು ವರ್ಷಗಳಾದರೂ ಕುಡಿಯುವ ನೀರಿನ ಯೋಜನೆ ಕುಂಟುತ್ತಲೇ ಸಾಗುತ್ತಿದೆ. ಇದಕ್ಕೆ ಕಾರಣ ಏನು? ಇಪ್ಪತ್ತೆಂಟು ಸಬೂಬು ಕೇಳಿಕೊಂಡು ನಾನೇನು ಮಾಡಲಿ? ನನಗೆ ನೀರಷ್ಟೇ ಬೇಕು.

ಇನ್ನು ರಸ್ತೆ; ಸ್ವಚ್ಛತೆ ಬಗ್ಗೆಯಂತೂ ಹೇಳುವಂತೆಯೇ ಇಲ್ಲ; ಸಿಆರ್‌ಎಫ್‌ ಅನುದಾನದಲ್ಲಿ ಇತ್ತೀಚೆಗೆ ನಿರ್ಮಿಸಿದ ಒಂದಷ್ಟು ರಸ್ತೆಗಳು ಹಾಗೂ ಬಿಆರ್‌ಟಿಎಸ್‌ ರಸ್ತೆ ಬಿಟ್ಟರೆ ಅವಳಿನಗರದಲ್ಲಿನ ಯಾವ ರಸ್ತೆಗಳೂ ಜನ ಓಡಾಡುವಂತಿಲ್ಲ. ಅಲ್ಪಸ್ವಲ್ಪ ಚೆನ್ನಾಗಿದ್ದ ರಸ್ತೆಗಳೂ ಮೊನ್ನೆ ಬಿದ್ದ ಮಳೆಗೆ ಗುಂಡಿಮಯವಾಗಿವೆ. ಇನ್ನು ಉದ್ಯಾನವನಗಳಂತೂ ಹೇಳುವಂತೆಯೇ ಇಲ್ಲ. ರಾಜಕಾಲುವೆಗಳು ಒತ್ತುವರಿಯಾದ ಕಾರಣ ಇತ್ತೀಚಿನ ಮಳೆಗೆ ಚರಂಡಿ ನೀರೆಲ್ಲ ಮನೆಗಳಿಗೆ ನುಗ್ಗಿದ್ದು ಎಲ್ಲರಿಗೂ ಗೊತ್ತೇ ಇದೆ.

ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ನಿಮ್ಮ ಒಳ್ಳೆಯತನ; ಸೌಮ್ಯ ಸ್ವಭಾವದ ವ್ಯಕ್ತಿ ಎನ್ನುವ ಕಾರಣಕ್ಕೆ ಅಯ್ಯೊ ಪಾಪಾ ಎಂದು ವೋಟ್‌ ಹಾಕಿದ್ದೇವೆ. ಸತತ 6 ಬಾರಿ ಶಾಸನಸಭೆಗೆ ಕಳುಹಿಸಿದ್ದೇವೆ. ನೀವೂ ಕೂಡ ಚ್ಯುತಿಬರದಂತೆ ಕೆಲಸ ಮಾಡಿದ್ದೀರಿ. ಆದರೆ, ಕ್ಷೇತ್ರದ ಕಡೆಗೂ ಒಮ್ಮೆ ನೋಡ್ರಲಾ.

ಬೆಂಗಳೂರು ನಗರ ಬಿಟ್ಟರೆ ಅತಿ ಹೆಚ್ಚು ಜನಸಂಖ್ಯೆ ಇರುವ ನಗರ ಅಂದ್ರೆ ಹುಬ್ಬಳ್ಳಿ–ಧಾರವಾಡ. ಇನ್ಫೊಸಿಸ್‌ ಬಂದಿದೆ; ದೇಶಪಾಂಡೆ ಫೌಂಡೇಷನ್‌ ಕ್ಯಾಂಪಸ್‌ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಏಮ್ಸ್‌ ಮಾದರಿಯ ಕಿಮ್ಸ್‌ ಆಸ್ಪತ್ರೆ ಇದೆ, ಐಐಟಿ; ಐಐಐಟಿ ಇವೆ. ನೈರುತ್ಯ ರೈಲ್ವೆ ವಲಯದ ಪ್ರಧಾನ ಕಚೇರಿ; ಹೈಕೋರ್ಟ್‌ ಪೀಠ ಇದೆ... ಇನ್ನೇನು ಬೇಕು? ಬೆಂಗಳೂರಿನಲ್ಲಿ ಇರುವುದೆಲ್ಲವೂ ಇದೆ. ರಾಜ್ಯ ಮಾತ್ರ ಅಲ್ಲ; ದೇಶ–ವಿದೇಶಗಳ ಜನರೂ ಬಂದು– ಹೋಗುತ್ತಿದ್ದಾರೆ. ತಿಂಗಳಿಗೆ ಸರಾಸರಿ 50–60 ಸಾವಿರ ಜನ ಇಲ್ಲಿನ ವಿಮಾನ ನಿಲ್ದಾಣದ ಮೂಲಕವೇ ಸಂಚರಿಸುತ್ತಿದ್ದಾರೆ.

ಇಷ್ಟೆಲ್ಲ ಇದ್ದರೂ ನಮ್ಮ ಹುಬ್ಬಳ್ಳಿ ಮಾತ್ರ ಇನ್ನೂ ಒಂದು ರೀತಿ ದೊಡ್ಡ ಹಳ್ಳಿಯ ಹಾಗೆಯೇ ಇದೆಯಲ್ಲ ಎಂದು ವ್ಯಥೆ ಆಗುತ್ತದೆ. ಇದಕ್ಕೆ ಕಾರಣ ಏನು ಅಂದ್ರೆ ಮತ್ತೆ ಮೊದಲಿನಿಂದ ಸ್ಟೋರಿ ಹೇಳಬೇಕಾಗುತ್ತದೆ. ಅದು ಬೇಡ.

ಶೆಟ್ಟರ್‌ ಅವರೇ ನೀವು ಹಿರಿಯರಿದ್ದೀರಿ; ನೀವು ಮನಸ್ಸು ಮಾಡಿದರೆ ಎಲ್ಲವೂ ಆಗುತ್ತದೆ. ನಿಮಗೆ ಯಾವ ಖಾತೆ ಸಿಗುತ್ತದೊ ನನಗೆ ಗೊತ್ತಿಲ್ಲ. ಕನಿಷ್ಠ ನಿಮ್ಮ ಊರನ್ನಾದರೂ ಅಭಿವೃದ್ಧಿ ಮಾಡುವುದರ ಮೂಲಕ ಮತದಾರರ ಅವಕೃಪೆಯಿಂದ ಪಾರಾಗಿ. ಇದೊಂದು ನನ್ನ ಕಾಳಜಿ. ಅವಕಾಶ ಕೈಚೆಲ್ಲಬೇಡಿ.. ಮುಂದಿನ ಚುನಾವಣೆಗೂ ಅಯ್ಯೊ.. ಆಗಲಿಲ್ಲ ಅನ್ನಲು ಆಗುವುದಿಲ್ಲ.

–ಇಂತಿ ನಿಮ್ಮ ಹುಬ್ಬಳ್ಳಿಯವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT