ಶುಕ್ರವಾರ, ಸೆಪ್ಟೆಂಬರ್ 24, 2021
24 °C

16ರಂದು ಜಿಲ್ಲೆಯಲ್ಲಿ ಜನಾಶೀರ್ವಾದ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪ್ರತಿ ಜಿಲ್ಲೆಗಳ ಕಾರ್ಯಕರ್ತರು ಹಾಗೂ ಕೈಗಾರಿಕೋದ್ಯಮಿಗಳ ಜೊತೆ ಚರ್ಚಿಸಲು ಇತ್ತೀಚಿಗೆ ಕೇಂದ್ರ ಸಂಪುಟಕ್ಕೆ ಸೇರಿದ ಕರ್ನಾಟಕದ ಸಂಸದರು ರಾಜ್ಯದಲ್ಲಿ ಆ. 15ರಿಂದ ಜನಾಶೀರ್ವಾದ ಯಾತ್ರೆ ಆರಂಭಿಸಲಿದ್ದಾರೆ.

16ರಂದು ರಾಜೀವ್‌ ಚಂದ್ರಶೇಖರ್ ಅವರು ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಭೇಟಿ ನೀಡಿ ಸ್ಥಳೀಯರ ಜೊತೆ ಚರ್ಚೆ ಮಾಡಲಿದ್ದಾರೆ. ಹೊಸದಾಗಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಎ. ನಾರಾಯಣ ಸ್ವಾಮಿ ಮತ್ತು ಭಗವಂತ್ ಖುಬಾ ಅವರು ಬೇರೆ, ಬೇರೆ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪೆಗಾಸಸ್‌ ಕುತಂತ್ರಾಂಶ ಬಳಸಿ ಗೂಢಚರ್ಯೆ ನಡೆಸಲಾಗಿದೆ ಎನ್ನುವ ಆರೋಪ ಮುಂದಿಟ್ಟು ಕಾಂಗ್ರೆಸ್‌ ಕಲಾಪಕ್ಕೆ ಅಡ್ಡಿಪಡಿಸಿದೆ. ಸುಗಮ ಕಲಾಪಕ್ಕೆ ಸಹಕಾರ ಕೊಡುವಂತೆ ಕೋರಿದರೂ ನೆರವಾಗದೆ ರಾಜಕಾರಣ ಮಾಡಿದೆ. ಸಂಸತ್ತಿನ ಅಧಿವೇಶನದಲ್ಲಿ ಕೋವಿಡ್‌ ಸಾಂಕ್ರಾಮಿಕ, ಆರ್ಥಿಕ ಸಮಸ್ಯೆಗಳು, ಉತ್ಪಾದನಾ ಕ್ಷೇತ್ರದ ಸವಾಲುಗಳು ಸೇರಿದಂತೆ ಅನೇಕ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲು ಅವಕಾಶ ಕೊಡಲಿಲ್ಲ’ ಎಂದು ಟೀಕಿಸಿದರು.

‘ಪೆಗಾಸಸ್‌ ಬಗ್ಗೆ ತನಿಖೆಯಾಗಲಿ ಎನ್ನುತ್ತಿರುವ ರಾಹುಲ್‌ ಗಾಂಧಿ ಅಧಿಕೃತವಾಗಿ ಮೊದಲು ದೂರು ದಾಖಲಿಸಲಿ. ಅವರ ಮೊಬೈನ್‌ ಅನ್ನು ಪೊಲೀಸರ ಕೈಗೆ ಒಪ್ಪಿಸಿ ತನಿಖೆಗೆ ನೆರವಾಗಲಿ. ಕೋವಿಡ್‌ ಎರಡನೆ ಅಲೆ ಸಮಯದಲ್ಲಿ ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕೆಂದು ಒತ್ತಾಯಿಸುತ್ತಿದ್ದ ವಿರೋಧ ಪಕ್ಷಗಳು ಸಂಸತ್ತಿನ ಅಧಿವೇಶನವು ನಡೆಯುವ ಸಂದರ್ಭದಲ್ಲಿ ಚರ್ಚಿಸಲು ಹಿಂದೇಟು ಹಾಕಿವೆ. ಇದು ರಾಜಕೀಯ ಸೋಗಲಾಡಿತನಕ್ಕೆ ಸಾಕ್ಷಿಯಾಗಿದೆ’ ಎಂದರು.

‘ಜಿಲ್ಲೆಯ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಉನ್ನತ ಸ್ಥಾನಕ್ಕೆ ಹೋಗಬೇಕು ಎಂದು ಎಲ್ಲರೂ ಬಯಸುವುದು ಸಹಜ. ಅದರಲ್ಲಿ ತಪ್ಪೇನೂ ಇಲ್ಲ’ ಎಂದರು.

ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ವೀರಣ್ಣ ಜಡಿ, ನಾರಾಯಣ ಜರತಾರಘರ್‌, ಸಿದ್ದು ಮೊಗಲಿಶೆಟ್ಟರ್‌, ರವಿ ನಾಯ್ಕ ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.