ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಖರೀದಿ ಕೇಂದ್ರ ಆರಂಭಿಸಲು ಆಗ್ರಹ

ಉಪವಾಸ ಸತ್ಯಾಗ್ರಹ: ಜೆಡಿಎಸ್‌ ಮುಖಂಡ ಅಸ್ವಸ್ಥ
Last Updated 27 ಆಗಸ್ಟ್ 2022, 1:52 IST
ಅಕ್ಷರ ಗಾತ್ರ

ಧಾರವಾಡ: ‘ಅಕಾಲಿಕ ಮಳೆಯಿಂದ ಬೆಳೆ ಸರಿಯಾಗಿ ಕೈಸೇರದೆ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಹೆಸರು ಬೆಳೆ ಖರೀದಿ ಕೇಂದ್ರವನ್ನು ಆರಂಭಿಸಬೇಕು’ ಎಂದು ಜೆಡಿಎಸ್ ಮುಖಂಡ ಗುರುರಾಜ ಹುಣಸಿಮರದ ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಪಕ್ಷದ ವತಿಯಿಂದ ಆರಂಭಿಸಿರುವ ಉಪವಾಸ ಸತ್ಯಾಗ್ರಹ ವೇದಿಕೆಯಲ್ಲಿ ಅಸ್ವಸ್ಥಗೊಂಡ ಪ್ರಕಾಶ ಅಂಗಡಿ ಅವರೊಂದಿಗೆ ರೈತ ಪರ ಘೋಷಣೆ ಕೂಗಿ ಅವರು ಮಾತನಾಡಿದರು.

‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ರೈತರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರೆ ಸಾಲು. ನಿಜವಾಗಿಯೂ ರೈತರ ಸಮಸ್ಯೆಗಳಿಗೆ ಸಮಯಕ್ಕೆ ಸರಿಯಾಗಿ ಸ್ಪಂದಿಸಬೇಕು. ಇದೀಗ ಧಾರವಾಡ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಹೆಸರು ಬೆಳೆ ಒಕ್ಕಲಿಗೆ ಬಂದಿದ್ದು, ಖರೀದಿ ಕೇಂದ್ರ ಆರಂಭಿಸಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರ ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ ₹7770ರಷ್ಟು ಬೆಲೆ ನಿಗದಿಪಡಿಸಿದೆ. ಆದರೆ ಖರೀದಿ ಕೇಂದ್ರವನ್ನೇ ಆರಂಭಿಸಿಲ್ಲ. ಮತ್ತೊಂದೆಡೆ ದಲ್ಲಾಳಿಗಳು ಸುಮಾರು ₹4ಸಾವಿರದಂತೆ ಖರೀದಿಸುತ್ತಿದ್ದಾರೆ. ಮುಂದೆ ಬೆಂಬಲ ಬೆಲೆ ಖರೀದಿ ಆರಂಭಿಸಿದರೆ ಈ ದಲ್ಲಾಳಿಗಳೇ ಇದನ್ನು ಮಾರುವ ಅನುಮಾನವೂ ಇದೆ. ಇದು ಸರ್ಕಾರ ಹಾಗೂ ದಲ್ಲಾಳಿಗಳ ನಡುವೆ ಅಪವಿತ್ರ ಮೈತ್ರಿ ನಡೆದಿರುವ ಶಂಕೆ ಇದೆ’ ಎಂದು ಆರೋಪಿಸಿದರು.

‘ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಉಪವಾಸ ನಿರತರ ಆರೋಗ್ಯ ವಿಚಾರಿಸಿದ್ದಾರೆ. ಜಿಲ್ಲಾಧಿಕಾರಿ ಸತ್ಯಾಗ್ರಹ ಹಿಂಪಡೆಯಿರಿ ಎನ್ನುತ್ತಿದ್ದಾರೆಯೇ ಹೊರತು, ಖರೀದಿ ಕೇಂದ್ರ ಎಂದು ಆರಂಭಿಸಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಇದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದೆ. ಜಿಲ್ಲೆಯವರೇ ಆದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೆಸರು ಖರೀದಿ ಕೇಂದ್ರಕ್ಕೆ ಒತ್ತಾಯಿಸಿ ಪತ್ರ ಬರೆದರೂ, ಸರ್ಕಾರ ಅವರಿಗೂ ಸ್ಪಂದಿಸಿಲ್ಲ ಎನ್ನುವುದು ಈ ಸರ್ಕಾರದ ವಿಪರ್ಯಾಸ. ಒಂದೊಮ್ಮೆ ಶೀಘ್ರದಲ್ಲಿ ಖರೀದಿ ಕೇಂದ್ರ ಆರಂಭಿಸದಿದ್ದಲ್ಲಿ ರೈತ ಸಂಘಗಳೊಂದಿಗೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಅಸ್ವಸ್ಥಗೊಂಡ ಪ್ರಕಾಶ ಅಂಗಡಿ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT