ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಜೆಡಿಎಸ್‌ ತೊರೆದು ಬಿಜೆಪಿಯತ್ತ ರಾಜಣ್ಣ ಕೊರವಿ

Last Updated 22 ಜನವರಿ 2021, 10:52 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಜೆಡಿಎಸ್‌ನೊಳಗೆ ಉಸಿರುಗಟ್ಟಿಸುವ ವಾತಾವರಣವಿದೆ. ಹಾಗಾಗಿ, ಪಕ್ಷದೊಂದಿಗಿನ 31 ವರ್ಷಗಳ ನಂಟು ತೊರೆದು ಜ. 23ರಂದು ಹುಬ್ಬಳ್ಳಿಯಲ್ಲಿ ಬೆಂಬಲಿಗರೊಂದಿಗೆ ಬಿಜೆಪಿ ಸೇರುತ್ತಿದ್ದೇನೆ ಎಂದು ಹುಬ್ಬಳ್ಳಿ-ಧಾರವಾಡ ಜೆಡಿಎಸ್ ಮಹಾನಗರ ಘಟಕದ ಅಧ್ಯಕ್ಷ ರಾಜಣ್ಣ ಕೊರವಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ನಲ್ಲಿದ್ದಾಗ 25ನೇ ವಾರ್ಡ್ ನಿಂದ ಎರಡು ಸಲ ಪಾಲಿಕೆ ಸದಸ್ಯ ನಾಗಿ ಆಯ್ಕೆಯಾಗಿ ಜನಪರ ಕೆಲಸ ಮಾಡಿದ್ದೇನೆ. 2008 ಮತ್ತು 2018ರಲ್ಲಿ ಪಕ್ಷದಿಂದ ಎರಡು ಸಲ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನನ್ನ ಗುರುಗಳು. ಪಕ್ಷದ ನಾಯಕರಾದ ಎಚ್.ಡಿ. ದೇವೇಗೌಡರು, ಎಚ್. ಡಿ. ಕುಮಾರಸ್ವಾಮಿ, ಮಾಜಿ ಶಾಸಕ ಕೋನರಡ್ಡಿ ಅವರು ನಮ್ಮನ್ನು ಗೌರವದಿಂದ ಕಂಡು ಕೆಲಸ ಮಾಡಲು ಅವಕಾಶ ನೀಡಿದ್ದಾರೆ ಎಂದರು.

ಪ್ರಾದೇಶಿಕ ಪಕ್ಷವಾಗಿ ಬೆಳೆಯಲು ಜೆಡಿಎಸ್ ವಿಫಲವಾಗಿದೆ. ತಳಮಟ್ಟದ ನಾಯಕರ ಮತ್ತು ಕಾರ್ಯಕರ್ತರ ನೋವನ್ನು ಯಾರೂ ಆಲಿಸುತ್ತಿಲ್ಲ. ಪಕ್ಷದ ಸರ್ಕಾರ ಇದ್ದಾಗ ‌ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಯಾವುದೇ ಸ್ಥಾನಮಾನ ಕೊಡಲಿಲ್ಲ‌. ಪಕ್ಷದೊಳಗೆ ಉಸಿರುಗಟಗುವ ವಾತಾವರಣವಿದೆ.‌ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ, ನನ್ನ ಬೆಂಬಲಿಗರು ಹಾಗೂ ಪಕ್ಷದ ಸ್ಥಳೀಯ ಕಾರ್ಯಕರ್ತರ ಒತ್ತಾಸೆಯೊಂದಿಗೆ, ಬಿಜೆಪಿ ನಾಯಕತ್ವ ಹಾಗೂ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿಕೊಂಡು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದರು.

ಮೂರು ತಲೆಮಾರಿನಿಂದ ನಮ್ಮ ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ನನ್ನ ತಾತ ಹಾಗೂ ತಂದೆಯೂ ರಾಜಕಾರಣದಲ್ಲಿದ್ದವರು.‌ ಜನತಾ ಪರಿವಾರದ ಭಾಗವಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ನಾನೂ ಅವರ ನೆರಳಿನಲ್ಲಿ ಬೆಳೆದು ವಿದ್ಯಾರ್ಥಿ ದೆಸೆಯಲ್ಲಿ ಜೆಡಿಎಸ್‌ನಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದು ತಿಳಿಸಿದರು.

ಬಿಜೆಪಿಯಿಂದ ಆಹ್ವಾನಿಸಿದ್ದರಿಂದ ಹಾಗೂ ನನಗೂ ಜೆಡಿಎಸ್‌ನಲ್ಲಿ ಉಸಿರುಗಟ್ಟಿಸುವ ವಾತಾವರಣ ಇದ್ದಿದ್ದರಿಂದ ಆ ಪಕ್ಷಕ್ಕೆ ಸೇರುತ್ತಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪಕ್ಷದ ಹಿರಿಯರಾದ ಹೊರಟ್ಟಿ ಅವರಿಗೂ ಸಚಿವ ಸ್ಥಾನ ಸಿಗಲಿಲ್ಲ, ಸಭಾಪತಿಯಾಗಿ ಕೆಲಸ ಮಾಡಲು ಅವಕಾಶ ನೀಡಲಿಲ್ಲ. ಅವರಿಗೆ ಅವಕಾಶ ನೀಡಿದ್ದರೆ, ನಾನು ಪಕ್ಷ ತೊರೆಯುತ್ತಿರಲಿಲ್ಲ. ಪಕ್ಷದೊಳಗೆ ನಾಯಕರು ಸರಿಯಾಗಿ ಸ್ಪಂದಿಸುವುದಿಲ್ಲ. ಕೇವಲ‌ ಮೈಸೂರು ಭಾಗಕ್ಕೆ ಪಕ್ಚ ಸೀಮಿತವಾಗುತ್ತಿದೆ. ಈ ಬಗ್ಗೆ ನಾಯಕರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇದು ನನಗೆ ಬೇಸರ ತರಿಸಿದೆ. ದುಃಖದಿಂದ ಪಕ್ಷವನ್ನು ತೊರೆದಿದ್ದೇನೆ. ಪಕ್ಷದಿಂದ ನಮಗೆ ಸಂತೋಷದಷ್ಟೇ ಕಷ್ಟವನ್ನೂ ಅನುಭವಿಸಿದ್ದೇನೆ.

ಯಾವುದೇ ಷರತ್ತುಗಳಿಲ್ಲದೆ ನಾನು ಬಿಜೆಪಿಗೆ ಸೇರುತ್ತಿದ್ದೇನೆ. ಅಧಿಕಾರಕ್ಕಾಗಿ ನಾನು ಅಲ್ಲಿಗೆ ಹೋಗುತ್ತಿಲ್ಲ. ನನಗೆ ನೆಮ್ಮದಿ ಬೇಕಿದೆ. ನಮ್ಮ ಕೆಲಸವನ್ನು ಗುರುತಿಸಿ ಪಕ್ಷ ಸೂಕ್ತ ಸ್ಥಾನಮಾನ ನೀಡುತ್ತದೆ ಎಂಬ ಭರವಸೆ ಇದೆ. ಹಿಂದೆ ಬಿಜೆಪಿ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದೇನೆ. ಅಭಿವೃದ್ಧಿ ಯೋಜನೆಗಳನ್ನು ಟೀಕಿಸಿದ್ದೇನೆ. ಆಗ, ಏನೇ ಮಾಡಿದರೂ ಅದು ಆ ಪಕ್ಷದ ಚೌಕಟ್ಟಿನಲ್ಲಿ ಮಾಡಿದ್ದೇನೆಯೇ ಹೊರತು, ಅದರಲ್ಲಿ ಯಾವುದೇ ವೈಯಕ್ತಿಕವಾದುದ್ದು ಇಲ್ಲ ಎಂದು ಸ್ಪಷ್ಟಪಡಿಸಿದರು.

ಪಕ್ಷ ತೊರೆಯದಂತೆ ರಾಜ್ಯ ನಾಯಕರು ಮನವೊಲಿಸಲು ಯತ್ನಿಸಿದರು. ಆದರೆ, ನನ್ನ ತೀರ್ಮಾನ ಅಚಲವಾಗಿತ್ತು.

ಸೊಲ್ಲಾಪುರದ ಸಂಸದರು ನಮ್ಮ ಬೀಗರ ಮನೆಯ ಗುರುಗಳು‌. ಪಕ್ಷಕ್ಕೆ ಬರುವಂತೆ ಹಿಂದಿನಿಂದಲೂ ಒತ್ತಾಯಿಸುತ್ತಿದ್ದರು. ಈಗ ನನ್ನ ತೀರ್ಮಾನ ಸ್ವಾಗತಿಸಿ, ಅವರೂ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. ಸಚಿವರಾದ ಜಗದೀಶ ಶೆಟ್ಟರ್, ಪ್ರಲ್ಹಾದ ಜೋಶಿ, ಬಸವರಾಜ ಬೊಮ್ಮಾಯಿ, ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಬಿಜೆಪಿ ಸೇರುತ್ತಿದ್ದೇನೆ ಎಂದರು.

ಜೆಡಿಎಸ್ ಮುಖಂಡರಾದ ನಾಗನಗೌಡ ಗದಿಗೆಪ್ಪಗೌಡರ, ನವೀನ ಮುನಿಯಪ್ಪನವರ, ಸುನೀಲ ರೇವಣಕರ, ಶಂಕರಗೌಡ ಪಾಟೀಲ, ಕಲ್ಲಪ್ಪ ವಾಲಿಕಾರ ಇದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT