ಗುರುವಾರ , ಡಿಸೆಂಬರ್ 3, 2020
18 °C

ಖಾಸಗಿ ಆಸ್ಪತ್ರೆಗಳ ನಡೆ: ಕ್ರಮಕ್ಕೆ ಜೋಶಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್‌ ಪ್ರಕರಣಗಳು ಹೆಚ್ಚಿದ್ದ ಸಂದರ್ಭದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಜನರಿಂದ ಸಾಕಷ್ಟು ಹಣ ಹೀರಿವೆ. ಈಗಲೂ ಅದೇ ಕೆಲಸ ಮುಂದುವರಿಸಿದ್ದು, ಅಂಥ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಸಂಕಷ್ಟದ ಸಮಯದಲ್ಲಿ ಮಾನವೀಯ ನೆಲೆಯಲ್ಲಿ ಕೆಲಸ ಮಾಡಬೇಕಿದ್ದ ಖಾಸಗಿ ಆಸ್ಪತ್ರೆಗಳು ತಮ್ಮ ಜವಾಬ್ದಾರಿ ಮರೆತಿವೆ. ಆಸ್ಪತ್ರೆಗೆ ದಾಖಲಾದರೆ ಆ ರೋಗಿಯ ಬಳಿ ವಿಮೆ ಅಥವಾ ಸಾಕಷ್ಟು ಹಣ ಇದೆಯೇ ಎನ್ನುವುದನ್ನು ನೋಡುತ್ತಿವೆ’ ಎಂದರು.

ಕೇಂದ್ರ ಮತ್ತು ರಾಜ್ಯದಲ್ಲಿ ನಿಮ್ಮ ಪಕ್ಷ ಅಧಿಕಾರದಲ್ಲಿದ್ದರೂ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಏಕೆ ಸಾಧ್ಯವಾಗಿಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ‘ಎಲ್ಲವನ್ನೂ ಸರ್ಕಾರ ಹಾಗೂ ಕಾನೂನಿನಿಂದ ಮಾಡಲು ಸಾಧ್ಯವಿಲ್ಲ. ಸಾಧ್ಯವಾದಷ್ಟು ಆಸ್ಪತ್ರೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದ್ದೇವೆ. ಚುನಾವಣಾ ಕಾರ್ಯ ಮುಗಿದ ಬಳಿಕ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ’ ಎಂದರು.

ಕೀಳುಮಟ್ಟದ ರಾಜಕೀಯ: ಪುಲ್ವಾಮಾ ದಾಳಿಯ ಬಗ್ಗೆ ಪಾಕಿಸ್ತಾನದ ಸಂಸದ ಹೇಳಿಕೆ ಕೊಟ್ಟ ಮೇಲೂ ಕಾಂಗ್ರೆಸ್‌ನ ಒಬ್ಬ ನಾಯಕರೂ ತುಟಿ ಬಿಚ್ಚಿಲ್ಲ. ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ಭಾರತಕ್ಕೆ ವಿದ್ರೋಹ ಮಾಡುತ್ತಿದ್ದಾರೆ ಎಂದು ಜೋಶಿ ಟೀಕಿಸಿದರು.

‘ಚುನಾವಣೆಯಲ್ಲಿ ಗೆಲ್ಲಲು ಮೋದಿ ಪುಲ್ವಾಮಾ ದಾಳಿಯ ದಾಳ ಬಳಸಿಕೊಂಡಿದ್ದಾರೆ ಎಂದು ಅನೇಕ ಕಾಂಗ್ರೆಸ್‌ ನಾಯಕರು ಟೀಕಿಸಿದ್ದರು. ಸತ್ಯ ಎನೆಂಬುದು ಈಗ ಎಲ್ಲರಿಗೂ ಗೊತ್ತಾಗಿದೆ. ಚುನಾವಣೆ ಗೆಲ್ಲಲು ರಾಹುಲ್‌ ಗಾಂಧಿ ಪಾಕಿಸ್ತಾನದ ಪರವೂ ಮಾತನಾಡಲು ಹಿಂಜರಿಯುವುದಿಲ್ಲ ಎನ್ನುವುದನ್ನು ಸಾಬೀತಾಗಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು