ಗುರುವಾರ , ನವೆಂಬರ್ 26, 2020
19 °C
ಆಸ್ಪತ್ರೆ ಸಿಬ್ಬಂದಿ ಬದ್ಧತೆಯ ಕಾರ್ಯಕ್ಕೆ ಜೋಶಿ, ಶೆಟ್ಟರ್‌ ಮೆಚ್ಚುಗೆ

ಸವಾಲು ಅವಕಾಶವಾಗಿಸಿದ ಕಿಮ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಹಲವಾರು ವರ್ಷಗಳಿಂದ ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿತ್ತು. ಕೋವಿಡ್‌ ಸವಾಲನ್ನು ಅವಕಾಶವಾಗಿ ಬಳಸಿಕೊಂಡು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಎಲ್ಲರೂ ಮೆಚ್ಚುವಂಥ ಕೆಲಸ ಮಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಳಗಾವಿಯ ಏಕಸ್‌ ಸಂಸ್ಥೆ ಆಸ್ಪತ್ರೆಗೆ ಶನಿವಾರ ನೀಡಿದ 200 ಪೋರ್ಟಬಲ್‌ ವೆಂಟಿಲೇಟರ್‌ ಹಸ್ತಾಂತರ ಮಾಡಿ ಮಾತನಾಡಿದ ಶೆಟ್ಟರ್‌ ‘ಕೋವಿಡ್‌ ಬಂದಾಗಿನಿಂದ ಕೆಲ ಖಾಸಗಿ ಆಸ್ಪತ್ರೆಯವರು ಲಕ್ಷಾಂತರ ರೂಪಾಯಿ ಹಣ ಲೂಟಿ ಹೊಡೆಯುತ್ತಿದ್ದಾರೆ. ಮೊದಲು ಹಣ ಕಟ್ಟಿದರಷ್ಟೇ ಚಿಕಿತ್ಸೆ ನೀಡುತ್ತಾರೆ. ಆದರೆ, ಕಿಮ್ಸ್ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ಆರ್‌ಎಸ್‌ಎಸ್‌ ಹಿರಿಯ ಮುಖಂಡ ಸು. ರಾಮಣ್ಣ ಅವರು ಕಿಮ್ಸ್‌ನಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿ ಇಲ್ಲಿನ ವೈದ್ಯಕೀಯ ಸಿಬ್ಬಂದಿ ಕಾರ್ಯದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ’ ಎಂದರು.

ಪ್ರಲ್ಹಾದ ಜೋಶಿ ಮಾತನಾಡಿ ‘ಭಾರತದಲ್ಲಿ ಮೊದಲ ಕೋವಿಡ್‌ ಪ್ರಕರಣ ಪತ್ತೆಯಾದಾಗ ದೇಶದಲ್ಲಿ ಒಂದೇ ಪರೀಕ್ಷಾ ಕೇಂದ್ರವಿತ್ತು. ಈಗ 2,000 ಪರೀಕ್ಷಾ ಕೇಂದ್ರಗಳಿವೆ. ಭಾರತ ಕೋವಿಡ್‌ ಸವಾಲನ್ನು ಅವಕಾಶವಾಗಿ ಬಳಸಿಕೊಂಡಿದೆ. ವೈಯಕ್ತಿಕ ಸುರಕ್ಷಾ ಸಾಧನ, ವೆಂಟಿಲೇಟರ್‌ ಮತ್ತು ಔಷಧಗಳನ್ನು ರಫ್ತು ಮಾಡುವಷ್ಟು ನಾವು ಬಲಿಷ್ಠರಾಗಿ ಬೆಳೆದಿದ್ದೇವೆ’ ಎಂದರು.

‘ಕೋವಿಡ್‌ ಸಂದರ್ಭದಲ್ಲಿ ಸಿಎಸ್‌ಆರ್‌ ನಿಧಿಯಲ್ಲಿ ಕೋಲ್‌ ಇಂಡಿಯಾ ₹5 ಕೋಟಿ, ಐಒಸಿಎಲ್‌ ₹50 ಲಕ್ಷ ನೀಡಿದೆ. ಏಕಸ್‌ ಸಂಸ್ಥೆ ಮೊದಲು ನಾಲ್ಕು ವೆಂಟಿಲೇಟರ್‌ಗಳನ್ನು ನೀಡಿತ್ತು. ಈಗ 200 ಪೋರ್ಟಬಿಲಿಟಿ ವೆಂಟಿಲೇಟರ್‌ಗಳನ್ನು ನೀಡಿ ಸಾಮಾಜಿಕ ಕಾಳಜಿ ಮೆರೆದಿದೆ. ದೇಶದಲ್ಲಿ ಉತ್ಪಾದನಾ ಪ್ರಮಾಣ ಹೆಚ್ಚಿಸಲು ₹200 ಕೋಟಿ ಮೊತ್ತದ ಒಳಗಿನ ತಯಾರಿಕಾ ಗುತ್ತಿಗೆಯನ್ನು ಸ್ವದೇಶಿ ಕಂಪನಿಗಳಿಗೆ ನೀಡಬೇಕು ಎಂದು ನಿರ್ಧರಿಸಲಾಗಿದೆ. ಆರೋಗ್ಯ ಕ್ಷೇತ್ರ ಬಲಪಡಿಸಲು ಪ್ರತಿ ಮೂರು ಜಿಲ್ಲೆಗೆ ಒಂದು ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುವುದು’ ಎಂದರು.

ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ, ವೈದ್ಯಕೀಯ ಅಧೀಕ್ಷಕ ಡಾ. ಮುಲ್ಕಿ ಪಾಟೀಲ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಏಕಸ್ ಸಂಸ್ಥೆಯ ಸುಗಂಧಿ ಇದ್ದರು.

200 ವೆಂಟಿಲೇಟರ್‌ಗಳು ಕಿಮ್ಸ್‌ಗೆ ಹಸ್ತಾಂತರ

ಅಮೆರಿಕದ ಇಲಿನಾಯ್ಸ್ ವಿಶ್ವವಿದ್ಯಾಲಯ ರೂಪಿಸಿದ ಜೀವರಕ್ಷಕ ಸಾಧನದ ಮಾದರಿ ಆಧರಿಸಿ, ಏಕಸ್ ಸಂಸ್ಥೆ ಈ ವೆಂಟಿಲೇಟರ್‌ಗಳನ್ನು ತಯಾರಿಸಿದೆ.

ಇದರ ಮೌಲ್ಯ ₹8,400 ಆಗಿದ್ದು, ಕೋವಿಡ್‌ ರೋಗಿಗೆ ಒಂದು ಸಲ ಬಳಸಿದರೆ ಮತ್ತೊಂದು ರೋಗಿಗಿ ಬಳಸಲು ಬರುವುದಿಲ್ಲ. 200 ವೆಂಟಿಲೇಟರ್‌ಗಳನ್ನು ಕಿಮ್ಸ್‌ಗೆ ಹಸ್ತಾಂತರಿಸಲಾಯಿತು.

‘ಹೊಸ ಮಾದರಿಯ ವೆಂಟಿಲೇಟರ್‌ ಅನ್ನು ಒಂದು ಜಾಗದಿಂದ ಇನ್ನೊಂದು ಕಡೆ ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಕೋವಿಡ್‌ ಪ್ರಕರಣಗಳು ಹೆಚ್ಚಿದರೆ ತುರ್ತಾಗಿ ಬಳಸಲು ಬೇಕಾಗುವಷ್ಟು ವೆಂಟಿಲೇಟರ್‌ಗಳು ಬಹಳಷ್ಟು ಕಡೆ ಇಲ್ಲ. ಆದ್ದರಿಂದ ಈ ಪೊರ್ಟಬಿಲಿಟಿಗಳನ್ನು ಬಳಸಿ ಜೀವ ಉಳಿಸಬಹುದು’ ಎಂದು ಏಕಸ್ ಸಂಸ್ಥೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ. ಪ್ರವೀಣ್ ಕುಮಾರ್ ನಾಯ್ಕ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು