ಗ್ರಾಮೀಣ ಭಾಗಕ್ಕೆ ನಯಾ ಪೈಸೆ ನೀಡದ ಜೋಶಿ: ವಿನಯ ಕುಲಕರ್ಣಿ ವಾಗ್ದಾಳಿ

ಬುಧವಾರ, ಏಪ್ರಿಲ್ 24, 2019
27 °C
ಮೈತ್ರಿ ಪಕ್ಷಗಳ ಸಭೆ

ಗ್ರಾಮೀಣ ಭಾಗಕ್ಕೆ ನಯಾ ಪೈಸೆ ನೀಡದ ಜೋಶಿ: ವಿನಯ ಕುಲಕರ್ಣಿ ವಾಗ್ದಾಳಿ

Published:
Updated:
Prajavani

ಹುಬ್ಬಳ್ಳಿ: ಸಂಸದರಾಗಿ ಸುಳ್ಳು ಹೇಳುತ್ತಲೇ ಕಾಲ ಕಳೆದಿರುವ ಪ್ರಹ್ಲಾದ ಜೋಶಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಐದು ವರ್ಷಗಳಲ್ಲಿ ನಯಾಪೈಸೆ ಕೊಟ್ಟಿಲ್ಲ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಆರೋಪಿಸಿದರು.

ಜೆಡಿಎಸ್‌ ಕಚೇರಿಯಲ್ಲಿ ಭಾನುವಾರ ನಡೆದ ಜೆಡಿಎಸ್‌–ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ‘ಪ್ರಹ್ಲಾದ ಜೋಶಿ ಗ್ರಾಮೀಣ ಭಾಗದಲ್ಲಿ ಒಂದೂ ನೀರಾವರಿ ಯೋಜನೆ ಕೊಟ್ಟಿಲ್ಲ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಜಾರಿಗೆ ತರಲು ಮುಂದಾಗಿದ್ದ ಯೋಜನೆಗಳಿಗೆ ಅಡ್ಡಗಾಲು ಹಾಕಿದರು. ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಿಸಲು ಆರು ತಿಂಗಳು ಹಿಂದೆಯೇ ಟೆಂಡರ್‌ ಆಗಿದೆ. ಆದರೆ, ಪ್ರಚಾರದ ಗೀಳಿನಿಂದ ಚುನಾವಣೆ ಘೋಷಣೆಗೆ 15 ದಿನ ಮೊದಲು ಜೋಶಿ ಭೂಮಿಪೂಜೆ ಮಾಡಿದ್ದಾರೆ’ ಎಂದರು.

‘ಧಾರವಾಡಕ್ಕೆ ಐಐಟಿ, ಹುಬ್ಬಳ್ಳಿಗೆ ವಿಮಾನ ನಿಲ್ದಾಣ ಮತ್ತು ಬಿಆರ್‌ಟಿಎಸ್‌ ಅನುಷ್ಠಾನಕ್ಕೆ ತಂದಿದ್ದು ನಾನೇ ಎಂದು ಪ್ರಹ್ಲಾದ ಜೋಶಿ ಹೇಳುತ್ತಿದ್ದಾರೆ. ಒಂದು ಸುಳ್ಳನ್ನು ನೂರು ಸಲ ಹೇಳಿ ಅದನ್ನೇ ಸತ್ಯವೆಂದು ಬಿಂಬಿಸುತ್ತಿದ್ದಾರೆ. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಮತ್ತು ಪಟ್ಟಣ ಪಂಚಾಯ್ತಿಯ ಯೋಜನೆಗಳಿಗೆ ಭೂಮಿಪೂಜೆ ಮಾಡಿದ್ದಷ್ಟೇ ಜೋಶಿ ಸಾಧನೆ’ ಎಂದು ಟೀಕಿಸಿದರು.

ಜೆಡಿಎಸ್‌ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಮಾತನಾಡಿ ‘ವಿನಯ ಕುಲಕರ್ಣಿ ಜೆಡಿಎಸ್‌ ಪಕ್ಷದ ಅಭ್ಯರ್ಥಿ ಅಂದುಕೊಂಡೇ ಎಲ್ಲರೂ ಕೆಲಸ ಮಾಡಬೇಕು. ಲಾಲಕೃಷ್ಣ ಅಡ್ವಾಣಿ ಅವರನ್ನು ಪಕ್ಷದಿಂದಲೇ ಮೂಲೆಗುಂಪು ಮಾಡಲಾಗಿದೆ. ಬೆಳೆಸಿದ ತಂದೆಯನ್ನೇ ನರೇಂದ್ರ ಮೋದಿ ವೃದ್ಧಾಶ್ರಮಕ್ಕೆ ಕಳುಹಿಸಿದಂತಾಗಿದೆ’ ಎಂದರು.

ರೈತ ಮುಖಂಡ ಗಂಗಾಧರ ಪಾಟೀಲ ಕುಲಕರ್ಣಿ ‘2014ರ ಚುನಾವಣೆ ವೇಳೆ ಬಿಜೆಪಿ ನೀಡಿದ್ದ ಯಾವ ಭರವಸೆಗಳೂ ಈಡೇರಿಲ್ಲ. ಸ್ವಾಮಿನಾಥನ್‌ ವರದಿ ಜಾರಿಗೆ ಬರಲಿಲ್ಲ. ಸಾಲ ಮನ್ನಾ ಕೂಡ ಆಗಲಿಲ್ಲ. ಕುತಂತ್ರದಿಂದ ಬಿಜೆಪಿ, ಜೆಡಿಎಸ್‌ನ ಎರಡನೇ ದರ್ಜೆಯ ನಾಯಕರನ್ನು ಸೆಳೆಯಲು ಯತ್ನಿಸುತ್ತಿದೆ. ಸಾಮಾಜಿಕ ತಾಣದಲ್ಲಿ ವಿನಾಕಾರಣ ವಿನಯ ಕುಲಕರ್ಣಿ ವಿರುದ್ಧ ಟೀಕೆ ಮಾಡುತ್ತಿದೆ. ಇದಕ್ಕೆ ಮೈತ್ರಿ ಪಕ್ಷಗಳ ಕಾರ್ಯಕರ್ತರು ಸರಿಯಾಗಿ ತಿರುಗೇಟು ನೀಡಬೇಕು’ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಲ್ತಾಫ್‌ ಹಳ್ಳೂರು, ಮುಖಂಡರಾದ ಸದಾನಂದ ಡಂಗನವರ, ಜೆಡಿಎಸ್‌ ಮುಖಂಡ ರಾಜಣ್ಣ ಕೊರವಿ, ಗಂಗಾಧರ ಮಠ, ಗುರುರಾಜ ಹುಣಸಿಮರದ ಇದ್ದರು. ಈರಣ್ಣ ನೀರಲಗಿ, ಶಿವಣ್ಣ, ಸುಧಾಕರ ಶೆಟ್ರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !