ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಳಕ್ಕೆ ಬರ, ಏರೈತಿ ದರ

ಹುಬ್ಬಳ್ಳಿ–ಧಾರವಾಡ ಮೆಟ್ರೊ
Last Updated 29 ಜುಲೈ 2019, 19:30 IST
ಅಕ್ಷರ ಗಾತ್ರ

‘ರೊಟ್ಟಿ ತಿಂದ್ರ ರಟ್ಟಿ ಗಟ್ಟಿ’ ಎಂಬುದು ಉತ್ತರ ಕರ್ನಾಟಕದ ಮನೆ ಮಾತು. ಖಡಕ್‌ ರೊಟ್ಟಿ, ಶೇಂಗಾ ಚಟ್ನಿ, ಎಣ್ಣೆಗಾಯಿ ಪಲ್ಯೆಯ ಮುಂದೆ ಬೇರೆಲ್ಲ ಭಕ್ಷ್ಯಗಳು ಅಪಥ್ಯ. ಆದರೆ, ರಟ್ಟಿ ಗಟ್ಟಿ ಮಾಡುವ ಜೋಳಕ್ಕೇ ಈಗ ಬರ ಎದುರಾಗಿದೆ. ಮಳೆ ಕೊರತೆಯಿಂದ ಬಿಳಿ ಜೋಳ ಉತ್ಪಾದನೆ ಪ್ರಮಾಣ ಹಾಗೂ ಪ್ರದೇಶ ಕ್ಷೀಣಿಸುತ್ತಿದೆ. ಮನೆಗೆ ಸಾಕಾಗುವಷ್ಟು ಜೋಳ ಬೆಳೆವ ಸ್ಥಿತಿ ರೈತರದ್ದು.

ಖಡಕ್‌ ರೊಟ್ಟಿ ಮಾರಾಟ, ತಯಾರಿಕೆಯನ್ನೇ ನೆಚ್ಚಿಕೊಂಡ ದೊಡ್ಡ ವ್ಯಾಪಾರಿ ವಲಯವೇ ಉತ್ತರ ಕರ್ನಾಟಕದಲ್ಲಿದೆ.ಇದರ ಜತೆಗೆ ಖಾನಾವಳಿ, ಕಿರಾಣಿ ಅಂಗಡಿಗಳಲ್ಲೂ ಖಡಕ್‌ ರೊಟ್ಟಿಯ ಗಮ್ಮತ್ತಿದೆ. ಜೋಳ ಉತ್ಪಾದನೆ ಕ್ಷೀಣಿಸುತ್ತಿರುವ ಕಾರಣದಿಂದ ಈಗ ಆಹಾರ ಕ್ರಮವೂ ಬದಲಾವಣೆಯತ್ತ ಹೊರಳುತ್ತಿದೆ. ರೊಟ್ಟಿಯ ಜಾಗವನ್ನು ಚಪಾತಿ ಆವರಿಸುತ್ತಿದೆ.

ಹಿಂಗಾರಿನಲ್ಲಷ್ಟೇ ಬಿತ್ತನೆ

ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹಿಂಗಾರಿನಲ್ಲಷ್ಟೇ ಜೋಳ ಬೆಳೆಯಲಾಗುತ್ತದೆ. ಮುಂಗಾರು ಅವಧಿಯ ಮೊದಲ ಬೆಳೆಯಾಗಿ ಹೆಸರುಕಾಳು, ಶೇಂಗಾ, ಇದಾದ ನಂತರ ಮೆಣಸಿನಕಾಯಿ, ಹತ್ತಿ ಬೆಳೆಯಲಾಗುತ್ತದೆ. ಹಿಂಗಾರಿನಲ್ಲಿ ಮಳೆ ಅನಿಶ್ಚಿತತೆಯಿಂದ ಬೆಳೆ ಬರಬಹುದು; ಬಾರಲೂ ಇರಬಹುದು. ಕಳೆದ ವರ್ಷ ವಿಜಯಪುರ, ಧಾರವಾಡ ಜಿಲ್ಲೆಗಳಲ್ಲಿ ಹಿಂಗಾರಿನಲ್ಲಿ ಮಳೆ ಕೈಕೊಟ್ಟಿದ್ದರಿಂದ ಜೋಳ ಬೆಳೆದಿರಲಿಲ್ಲ. ಇದರ ಪರಿಣಾಮ ಇಂದು ಜೋಳಕ್ಕೆ ಬೇಡಿಕೆ ಬಂದು ಬೆಲೆಯೂ ಹೆಚ್ಚಾಗಿದೆ. ಆಹಾರಕ್ರಮದ ಮೇಲೂ ಹೊಡೆತ ಬಿದ್ದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಜೋಳ ಬೆಳೆದರೂ ರುಚಿ ಇರುವುದಿಲ್ಲ. ಹಾಗಾಗಿ ಅಲ್ಲಿನ ಜೋಳಕ್ಕೆ ಬೇಡಿಕೆ ಇಲ್ಲ.

‘ಹಿಂಗಾರಿನಲ್ಲಿ ಪ್ರತಿ ರೈತರು 4–5 ಕೂರಿಗೆ ಜೋಳ ಹಾಕುತ್ತಿದ್ದರು. ಆದರೆ, ಮಳೆ ಕೊರತೆಯಿಂದ ಫಸಲು ಕಡಿಮೆಯಾಗಿದೆ. ನೀರಾವರಿ ಆಶ್ರಿತ ಹಾಗೂ ಬೆಳಗಾವಿಯ ಕೆಲ ಕಡೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಬಿಳಿ ಜೋಳ ಬೆಳೆಯಲಾಗಿತ್ತು. ಅದನ್ನು ಹೊರತುಪಡಿಸಿ ಬೇರೆಲ್ಲೂ ಉತ್ಪಾದನೆ ಇಲ್ಲ. ಹಾಗಾಗಿ ಬಿಳಿಜೋಳಕ್ಕೆ ಬರ ಬಂದಿದೆ’ ಎನ್ನುತ್ತಾರೆ ಹುಬ್ಬಳ್ಳಿಯ ಬಂಡಿವಾಡದ ರೈತ ವ್ಯಾಪಾರಿ ಈರಣ್ಣ ವಾಲಿ.

ಆದರೆ, ‘ಧಾರವಾಡ ಜಿಲ್ಲೆಯಲ್ಲಿ ಬೆಳೆ ಪ್ರದೇಶ ಅಷ್ಟೇನು ಕಡಿಮೆಯಾಗಿಲ್ಲ’ ಎಂಬುದು ಕೃಷಿಇಲಾಖೆ ಅಧಿಕಾರಿಗಳ ವಾದ.

ನುಸಿ ಹುಳದ ಕಾಟ

ಅಲ್ಪ ಸ್ವಲ್ಪ ಬಿಳಿ ಜೋಳವನ್ನು ದಾಸ್ತಾನು ಇರಿಸಿದರೆ ನುಸಿ ಹುಳು ಬಾಧೆ ಕಾಣಿಸುತ್ತದೆ. ಗೋದಾಮಿನಲ್ಲಿ ಇಡಬೇಕಾದರೆ ಅಷ್ಟು ದೊಡ್ಡ ಪ್ರಮಾಣದ ದಾಸ್ತಾನು ಎಲ್ಲೂ ಇಲ್ಲ. ಗೋದಾಮು ಶುಲ್ಕ ಅಧಿಕವಾಗಿರುವುದರಿಂದ ಜತೆಗೆ ಹೆಚ್ಚಿನ ಆವಕ ಇಲ್ಲದ ಕಾರಣ ದಾಸ್ತಾನು ಕಡಿಮೆ ಇದೆ. ಈಗ ಸರ್ಕಾರ ನೀಡುತ್ತಿರುವ ಪಡಿತರ ಅಕ್ಕಿಯನ್ನೇ ನೆಚ್ಚಿಕೊಂಡಿರುವ ಜನರು ಒಪ್ಪತ್ತು ಮಾತ್ರ ರೊಟ್ಟಿ ಸೇವಿಸುತ್ತಾರೆ ಎಂದು ರೈತರು ವಾಸ್ತವಸ್ಥಿತಿ ಬಿಚ್ಚಿಟ್ಟರು.

ಅಕ್ಕಿಹಿಟ್ಟು ಮಿಶ್ರಣ

ಧಾರವಾಡ, ವಿಜಯಪುರ, ಬೆಳಗಾವಿ ಸೇರಿದಂತೆ ಬಹುತೇಕ ಉತ್ತರ ಕರ್ನಾಟದ ಜಿಲ್ಲೆಗಳಲ್ಲಿ ಗಲ್ಲಿಗೆ ಒಂದರಂತೆ ಖಾನಾವಳಿಗಳಿವೆ. ಜತೆಗೆ ಖಡಕ್‌ ರೊಟ್ಟಿ ಮಾರಾಟ ಮಳಿಗೆಗಳೂ ಇವೆ. ಜೋಳದಆವಕ ಕಡಿಮೆ ಇರುವುದರಿಂದ ರೊಟ್ಟಿ ತಯಾರಿಕೆಗೂ ಹಿನ್ನಡೆಯಾಗಿದೆ. ಹಲವು ಅಂಗಡಿಯವರು ಈಗ ಚಪಾತಿ ಮಾರಾಟವನ್ನೂ ಆರಂಭಿಸಿದ್ದಾರೆ. ಮತ್ತೆ ಕೆಲವು ಕಡೆ ಜೋಳದ ರೊಟ್ಟಿಗೆ ಅಕ್ಕಿ ಹಿಟ್ಟನ್ನು ಮಿಶ್ರಣ ಮಾಡಿ ಖಡಕ್‌ ರೊಟ್ಟಿ ತಯಾರಿಸುತ್ತಿರುವುದು ಸರ್ವವಿಧಿತ.

ಪರ್ಯಾಯ ಆಹಾರವಾಗಿ ಗೋಧಿ

ಪಂಜಾಬ್‌, ಹರಿಯಾಣ ರಾಜ್ಯದಿಂದ ಯಥೇಚ್ಛ ಪ್ರಮಾಣದಲ್ಲಿ ಗೋಧಿ ಪೂರೈಕೆಯಾಗುತ್ತಿದೆ. ಇದು ರಾಗಿ ಹಾಗೂ ಜೋಳದ ಪರ್ಯಾಯ ಆಹಾರ ಪದಾರ್ಥವಾಗಿ ಬಳಕೆಯಾಗುತ್ತಿದೆ. ಸರ್ಕಾರವು ಕಡಿಮೆ ದರದಲ್ಲಿ ಗೋಧಿ ಖರೀದಿಸಿ, ಪಡಿತರದಲ್ಲಿ ವಿತರಿಸುತ್ತಿದೆ. ಈಗಾಗಲೇ ಮೂಲೆಗುಂಪಾಗಿರುವ ಸಿರಿಧಾನ್ಯಗಳ ಸಾಲಿಗೆ ಮುಂದೊಂದು ದಿನ ಬಿಳಿ ಜೋಳ, ರಾಗಿಯೂ ಸೇರಲಿದೆ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ.

ದಲಾಲರ ಬಳಿ ಜೋಳ ದಾಸ್ತಾನು

ಧಾರವಾಡ ಇತರೆ ಜಿಲ್ಲೆಗಳಲ್ಲಿ ಜೋಳದ ದಾಸ್ತಾನು ಇದೆ. ಆದರೆ, ಅದು ದಲಾಲರ ಕೈಯಲ್ಲಿದೆ. ಕೆಲವರು ಹೆಚ್ಚಿನ ಲಾಭಕ್ಕಾಗಿ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಕೆಲ ತಿಂಗಳ ಹಿಂದೆ ಕ್ವಿಂಟಲ್‌ಗೆ ₹ 2 ಸಾವಿರ ಇತ್ತು. ಈಗ ₹3 ಸಾವಿರದ ಗಡಿ ದಾಟಿರುವುದೇ ಅದಕ್ಕೆ ಸಾಕ್ಷಿ. ಕೆಲ ದಲಾಲರೂ ಖಾಸಗಿ ಗೋದಾಮುಗಳಲ್ಲಿ ಜೋಳ ಸಂಗ್ರಹಿಸಿದ್ದಾರೆ ಎನ್ನಲಾಗುತ್ತಿದೆ.

ಬಿಳಿ ಜೋಳದ ಬೆಲೆ ದುಬಾರಿಯಾಗಿದ್ದು, ರೈತರು ಹಾಗೂ ದಲಾಲರಿಂದ ಖರೀದಿಸುತ್ತಿದ್ದೇವೆ. ಕೆ.ಜಿ. ಜೋಳ ₹20ಕ್ಕೆ ಸಿಗುತ್ತಿತ್ತು. ಆದರೆ, ಈಗ ₹30 ದಾಟಿದೆ. ಶೇ 60ರಷ್ಟು ಆವಕ ದಲಾಲರು ಬಳಿ ಸಿಗುತ್ತದೆ. ವಿಜಯಪುರದಲ್ಲಿ ಆವಕ ತರಿಸಿಕೊಳ್ಳಲು ಸಾಗಣೆ ವೆಚ್ಚ ಅಧಿಕವಾಗಲಿದೆ. ಮಾರುಕಟ್ಟೆಯಲ್ಲಿ ಶೇ 50ರಷ್ಟು ಮಾತ್ರ ಆವಕ ಇರುವುದರಿಂದ ಬೆಲೆ ಏರಿಕೆಯಾಗಿದೆ ಎಂದು ಪೂರ್ವ ಫುಡ್ಸ್‌ ಮಾಲೀಕ ವಿಶ್ವಾಸ್‌ ಪಾಟೀಲ್‌ ಹೇಳುತ್ತಾರೆ.

ಬೆಲೆ ಏರಿಕೆ ಬಿಸಿ

ಉತ್ತರ ಕರ್ನಾಟಕದ ಬೇಡಿಕೆ ಪೂರೈಸುವಷ್ಟು ಜೋಳ ಲಭ್ಯವಿಲ್ಲದ ಕಾರಣ ಬೆಲೆಯೂ ಏರಿಕೆಯಾಗಿದೆ.ಎಪಿಎಂಸಿ ಮಾರುಕಟ್ಟೆಯಲ್ಲಿ ಬಿಳಿ ಜೋಳ ಕ್ವಿಂಟಲ್‌ ₹3,200, ಮೆಕ್ಕೆಜೋಳ ₹2,500 ರಂತೆ ಮಾರಾಟವಾಗುತ್ತಿದೆ. ಚಿಲ್ಲರೆ ವ್ಯಾಪಾರದಲ್ಲಿ ಬಿಳಿ ಜೋಳ ₹4 ಸಾವಿರದ ಗಡಿ ದಾಟಿದೆ. ಮುಂಬರುವ ದಿನಗಳಲ್ಲಿ 5 ಸಾವಿರ ಗಡಿ ದಾಟಿದರೂ ಆಶ್ಚರ್ಯವಿಲ್ಲ ಎನ್ನುತ್ತಾರೆ ಎಪಿಎಂಸಿ ವ್ಯಾಪಾರಿಗಳು.

ಪುನಶ್ಚೇತನಕ್ಕೆ ಉಪಕ್ರಮವೇನು?

ರಾಜ್ಯದಲ್ಲಿ ಬಿಳಿ ಜೋಳ ಬೆಳೆಯುವ ಪ್ರದೇಶ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಯನದ ಪ್ರಕಾರ ಪ್ರತಿ ವರ್ಷ ರಾಗಿ ಹಾಗೂ ಬಿಳಿ ಜೋಳ ಬೆಳೆಯುವ ಪ್ರದೇಶ 20 ಸಾವಿರ ಹೆಕ್ಟೇರ್‌ ಕಡಿಮೆಯಾಗುತ್ತಿದೆ. ರೈತರನ್ನು ಉತ್ತೇಜಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಗತಿಪರ ರೈತರು, ಆಯೋಗದ ಒತ್ತಾಯವಾಗಿದೆ.

ರೈತರಿಗೆ ಕಡಿಮೆ ಬಡ್ಡಿದರದ ಸಾಂಸ್ಥಿಕ ಸಾಲ ನೀಡಿ ಪ್ರೋತ್ಸಾಹಿಸಬೇಕು.

ಬೆಳೆ ವಿಮೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು

ಗ್ರಾಹಕರಿಗೂ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಒದಗಿಸಬೇಕು

ಪಡಿತರದಲ್ಲಿ ಅಕ್ಕಿ, ಗೋಧಿಯ ಜತೆಗೆ ರಾಗಿ, ಬಿಳಿ ಜೋಳ, ದ್ವಿದಳ ಧಾನ್ಯಗಳನ್ನು ಕೊಡಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT