ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಆಯುಕ್ತರ ಕಾರ್ಯವೈಕರಿಗೆ ಶೆಟ್ಟರ್‌ ಬೇಸರ

ಹುಬ್ಬಳ್ಳಿ ಗೋಕುಲ ರಸ್ತೆ ಜಯಪ್ರಕಾಶ ನಗರದಲ್ಲಿ ಜನಸ್ಪಂದನ ಸಭೆ
Last Updated 9 ಜೂನ್ 2019, 16:18 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಹಾನಗರ ಪಾಲಿಕೆ ಆಡಳಿತವು ಮೂರು ತಿಂಗಳಿಂದ ಸಂಪೂರ್ಣ ಸ್ಥಗಿತವಾಗಿದೆ. ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಆಯುಕ್ತರು ಸೇರಿದಂತೆ ಸಿಬ್ಬಂದಿ ಯಾವೊಂದು ಕೆಲಸ, ಕಾರ್ಯ ಮಾಡುತ್ತಿಲ್ಲ, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಶಾಸಕ ಜಗದೀಶ ಶೆಟ್ಟರ್‌ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಗೋಕುಲರಸ್ತೆಯ ಜಯಪ್ರಕಾಶ ನಗರದ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಆಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ನಗರದಲ್ಲಿ ಆಗಬೇಕಿರುವ ತುರ್ತು ಕೆಲಸ, ಕಾರ್ಯಗಳ ಬಗ್ಗೆ ಜನಪ್ರತಿನಿಧಿಗಳು, ಮುಖಂಡರು, ಸಾರ್ವಜನಿಕರು ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಶಾಸಕರು, ಸಂಸದರ ಅನುದಾನದಲ್ಲಿ ಕೈಗೊಂಡಿರುವ 54 ಕಾಮಗಾರಿಗಳಿಗೆ ಒಪ್ಪಿಗೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಆದಷ್ಟು ಶೀಘ್ರ ಪಾಲಿಕೆ ಆಯುಕ್ತರನ್ನು ಬದಲಾಯಿಸಬೇಕು, ಈ ಮೊದಲು ಇದ್ದ ಶಕೀಲ್‌ ಅಹ್ಮದ್‌ ಅವರನ್ನೇ ಮರಳಿ ನಿಯೋಜಿಸಬೇಕು ಎಂದು ಒತ್ತಾಯಿಸಿದರು.

ನೀರಿನ ಸಮಸ್ಯೆ ಶೀಘ್ರ ಪರಿಹಾರ:ನಗರಕ್ಕೆ ಕುಡಿಯುವ ನೀರಿನ ಮೂಲವಾಗಿದ್ದ ‘ನೀರಸಾಗರ’ ಜಲಾಶಯ ಮೂರ್ನಾಲ್ಕು ವರ್ಷಗಳಿಂದ ಮಳೆಯಿಲ್ಲದೇ ಬರಿದಾಗಿದೆ. ಹೀಗಾಗಿ ಅವಳಿ ನಗರಕ್ಕೆ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಈ ಸಮಸ್ಯೆ ಬಗೆಹರಿಸುವ ಸಂಬಂಧ ₹ 26 ಕೋಟಿ ವೆಚ್ಚದಲ್ಲಿ 40 ಎಂಎಲ್‌ಡಿ ಹೆಚ್ಚುವರಿ ನೀರನ್ನು ಮಲಪ್ರಭಾದಿಂದ ತರುವ ಕಾರ್ಯ ಭರದಿಂದ ನಡೆದಿದ್ದು, ಮೂರ್ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಬಳಿಕ ಮೂರ್ನಾಲ್ಕು ದಿನಗಳಿಗೊಮ್ಮೆ ನಗರಕ್ಕೆ ನೀರು ಪೂರೈಕೆಯಾಗಲಿದೆ ಎಂದು ಹೇಳಿದರು.

‘ಸ್ಮಾರ್ಟ್‌ಸಿಟಿ’ ಯೋಜನೆಯಡಿ ಕೇಶವಕುಂಜದಿಂದ ಆರಂಭಗೊಂಡು ಡೆನಿಸನ್ಸ್‌ ಹೋಟೆಲ್‌ ಮುಂಭಾಗವಾಗಿ ಜಯಪ್ರಕಾಶ ನಗರದ ಮೂಲಕ ಹಾದುಹೋಗುವ ರಸ್ತೆಯನ್ನು ₹ 1.20 ಕೋಟಿ ವೆಚ್ಚದಲ್ಲಿ ಶೀಘ್ರದಲ್ಲೇ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಕೇಂದ್ರ ಸರ್ಕಾರದ ನೆರವಿನಿಂದ ನಗರದ ಪ್ರಮುಖ ರಸ್ತೆಗಳು ಕಾಂಕ್ರಿಟ್‌ ರಸ್ತೆಗಳಾಗುತ್ತಿವೆ. ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಮತ್ತಷ್ಟು ಸಿಆರ್‌ಎಫ್‌ ಅನುದಾನ ತಂದು ನಗರದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಮೂಲಸೌಲಭ್ಯ ಕಲ್ಪಿಸಿ: ಜನಸ್ಪಂದನದಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು, ಜಯಪ್ರಕಾಶ ನಗರದ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಬೇಕು. ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಬೇಕು. ಒಳ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು. ಚರಂಡಿಗಳನ್ನು ನಿರ್ಮಿಸಬೇಕು. ಬೀದಿ ದೀಪ ಅಳವಡಿಸಬೇಕು ಹಾಗೂ ಬೀದಿ ನಾಯಿಗಳ ಹಾವಳಿ ತಡೆಗಟ್ಟಬೇಕು. ಕಸದ ವಾಹನ ಮೂರ್ನಾಲ್ಕು ದಿನಕ್ಕೊಮ್ಮೆ ಬರುತ್ತಿರುವುದರಿಂದ ಸಮಸ್ಯೆಯಾಗಿದ್ದು, ಪ್ರತಿನಿತ್ಯ ಬರುವಂತೆ ವ್ಯವಸ್ಥೆ ಮಾಡಬೇಕು ಎಂದು ಶಾಸಕರಿಗೆ ಮನವಿ ಮಾಡಿದರು.

ಗೋಕುಲ ರಸ್ತೆಯ ಅಕ್ಷಯಪಾರ್ಕ್‌ ಸರ್ಕಲ್‌ನಲ್ಲಿ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಈ ವೃತ್ತದಲ್ಲಿ ಟ್ರಾಫಿಕ್‌ ಸಿಗ್ನಲ್‌ ಅಳವಡಿಸಬೇಕು ಹಾಗೂ ಪೊಲೀಸ್‌ ಚೌಕಿ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ರಾಘವೇಂದ್ರ ರಾಮದುರ್ಗ, ರವಿ ನಾಯಕ್‌, ವೀರೇಶ ಸಂಗಳದ ಮತ್ತಿತರರು ಸಭೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT