ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಧಕರ ಹೆಸರು ಅನುಷ್ಠಾನಕ್ಕೆ ಬದ್ಧ

ನಾಮಫಲಕಗಳಲ್ಲಿ ಕನ್ನಡ ಅಳವಡಿಕೆ ಕಡ್ಡಾಯಕ್ಕೆ ಕ್ರಮ: ಆಯುಕ್ತ ಸುರೇಶ ಇಟ್ನಾಳ
Last Updated 26 ಜುಲೈ 2019, 10:13 IST
ಅಕ್ಷರ ಗಾತ್ರ

ಧಾರವಾಡ: ‘ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಬಡಾವಣೆ ಹಾಗೂ ರಸ್ತೆಗಳಿಗೆ ಈಗಾಗಲೇ ಇರುವ ಸ್ವಾತಂತ್ರ್ಯ ಯೋಧರು, ಕನ್ನಡ ನಾಡಿನ ಸಾಧಕರ ಹೆಸರುಗಳನ್ನು ಪೂರ್ಣ ಪ್ರಮಾಣದಲ್ಲಿ ಮರುಬಳಕೆಗೆ ತರಲಾಗುವುದು’ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಭರವಸೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಹಾನಗರ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು ಅವರು, ‘ವರಕವಿ ಡಾ.ದ.ರಾ. ಬೇಂದ್ರೆಯವರ ಕೃತಿಗಳನ್ನಾಧರಿಸಿ ಚಿತ್ರಕಲೆಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ. ಅವಳಿ ನಗರದ ಎಲ್ಲ ಶಾಲಾ ಕಾಲೇಜುಗಳು, ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡದ ಕಡ್ಡಾಯ ಅಳವಡಿಕೆಗೆ ಕ್ರಮ ವಹಿಸಲಾಗುವುದು’ ಎಂದರು.

‘ಅವಳಿ ನಗರದಲ್ಲಿರುವ ಎಲ್ಲ ಖಾಸಗಿ ಕೈಗಾರಿಕೆಗಳ ’ಸಿ’ ಮತ್ತು ’ಡಿ’ ಗುಂಪಿನ ಹುದ್ದೆಗಳಿಗೆ ಸ್ಥಳೀಯರನ್ನೇ ನೇಮಕ ಮಾಡಿಕೊಳ್ಳಲು ಸೂಚಿಸಲಾಗುವುದು. ಇಂಗ್ಲಿಷ್ ಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಕಲಿಯಲು ಉತ್ತೇಜಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

‘ಪಾಲಿಕೆಯ ಜಾಹೀರಾತು ಫಲಕಗಳು ಮತ್ತು ಟೆಂಡರ್ ನೋಟಿಸ್‌ಗಳ ಜಾಹೀರಾತುಗಳನ್ನು ಕನ್ನಡದಲ್ಲಿಯೇ ಬಿಡುಗಡೆ ಮಾಡಲಾಗುತ್ತಿದೆ. ಮಹಾನಗರ ಕನ್ನಡ ಜಾಗೃತಿ ಸಮಿತಿಯ ವಾರ್ಷಿಕ ಕಾರ್ಯಸೂಚಿಯನ್ನು ಸಿದ್ಧಪಡಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳುಹಿಸಲಾಗುವುದು’ ಎಂದರು.

ಸಮಿತಿ ಸದಸ್ಯ ಶಂಕರ ಹಲಗತ್ತಿ ಮಾತನಾಡಿ, ‘ಅವಳಿ ನಗರದಲ್ಲಿ ಸಂಚರಿಸುವ ಬಿಆರ್‌ಟಿಎಸ್ ಬಸ್‌ಗಳಲ್ಲಿ ಸ್ಪಷ್ಟ ಕನ್ನಡದ ಫಲಕಗಳು ಇರಬೇಕು. ಬ್ಯಾಂಕ್‌ಗಳಲ್ಲಿ ಸ್ಥಳೀಯ ಭಾಷಾ ಬಳಕೆಗೆ ಒತ್ತು ನೀಡಲು ಜಾಗೃತಿ ಅಭಿಯಾನ ನಡೆಸಬೇಕು’ ಎಂದು ಸೂಚಿಸಿದರು.

ಸಮಿತಿ ಸದಸ್ಯರಾದ ಸುನಂದಾ ಕಡಮೆ, ಡಾ. ಧನವಂತ ಹಾಜವಗೋಳ, ಡಾ. ರಾಮು ಮೂಲಗಿ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಸಮಿತಿಯ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT