ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈವಿಧ್ಯ ಕೃಷಿಯಿಂದ ರೈತರ ಸಂಕಷ್ಟಕ್ಕೆ ಪರಿಹಾರ’

ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಎಸ್‌.ಎ. ಪಾಟೀಲ
Last Updated 6 ಜನವರಿ 2019, 19:18 IST
ಅಕ್ಷರ ಗಾತ್ರ

ಡಾ. ಶಂ. ಬಾ. ಜೋಶಿ ವೇದಿಕೆ (ಧಾರವಾಡ): ‘ಕೃಷಿಯಲ್ಲಿ ವೈವಿಧ್ಯ ಅಳವಡಿಸಿಕೊಂಡರೆ ಮಾತ್ರ ರೈತರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ’ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ. ಎಸ್‌.ಎ. ಪಾಟೀಲ ಪ್ರತಿಪಾದಿಸಿದರು.

‘ಕೃಷಿ ಕ್ಷೇತ್ರ: ಸವಾಲುಗಳು’ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೃಷಿಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆ
ಗಳು, ಯುವಕರನ್ನು ಕೃಷಿಯನ್ನು ಸೆಳೆಯುವುದು ಮತ್ತು ಸರ್ಕಾರದ ಪಾತ್ರ ಕುರಿತು ಉದಾಹರಣೆಗಳ ಸಮೇತ ವಿಶ್ಲೇಷಿಸಿದರು.

‘ಒಂದೇ ಬೆಳೆಗೆ ರೈತರು ಜೋತು ಬೀಳಬಾರದು. ನುಗ್ಗೆಕಾಯಿ, ತೇಗು ಬೆಳೆಯಬೇಕು. ನುಗ್ಗೆಕಾಯಿಯಲ್ಲಿ ಎಲ್ಲ ರೀತಿಯ ಪೋಷಕಾಂಶಗಳಿರುತ್ತವೆ. ತಾಯಿಯ ಎದೆಹಾಲಿಗಿಂತಲೂ ಉತ್ಕೃಷ್ಟವಾಗಿರುತ್ತದೆ. ರೈತರು ಕೃಷಿ ಅರಣ್ಯದ ಬಗ್ಗೆ ಗಮನಹರಿಸಬೇಕು. ಇದರಿಂದ, ಲಕ್ಷಾಂತರ ರೂಪಾಯಿ ಆದಾಯ ದೊರೆಯುತ್ತದೆ. ಕನ್ನಡ ಸಾಹಿತ್ಯ ಪರಿಷತ್‌ ಸಹ ಮೂರು ಲಕ್ಷ ರೈತರ ಯಶೋಗಾಥೆಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಮೂಲಕ ರೈತರಿಗೆ ಪ್ರೇರಣೆ ನೀಡುವಂತಾಗಬೇಕು’ ಎಂದು ಸಲಹೆ ನೀಡಿದರು.

‘ರೈತರು ಸಹ ಇಂದು ಮೈಮುರಿದು ದುಡಿಯುತ್ತಿಲ್ಲ. ಶ್ರಮವಹಿಸದೆ ಯಶಸ್ಸು ಸಾಧ್ಯವಿಲ್ಲ. ಉದಾಹರಣೆಗೆ ತೊಗರಿ ಬೆಳೆದವರು ಒಟ್ಟು 96 ಗಂಟೆಗಳಷ್ಟು ಮಾತ್ರ ಕೆಲಸ ಮಾಡುತ್ತಾರೆ. ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ಶೇಕಡ 85ರಷ್ಟು ಮನೆಗಳು ಹೊಲದಲ್ಲಿವೆ. ಉಳಿದೆಡೆ ರೈತರು ಜಮೀನುಗಳಿಂದ ದೂರ ಉಳಿಯುತ್ತಿದ್ದಾರೆ. ತಮ್ಮ ಜಮೀನುಗಳ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ಗುತ್ತಿಗೆ ನೀಡುವವರೇ ಹೆಚ್ಚು’ ಎಂದರು.

‘ಐಎಎಸ್‌ ಅಧಿಕಾರಿಗಳು ಕೃಷಿ ನೀತಿ ರೂಪಿಸುತ್ತಾರೆ. ಕೃಷಿ ಕ್ಷೇತ್ರವನ್ನು ಅಧಿಕಾರಿಗಳಿಂದ ಸುಧಾರಿಸಲು ಸಾಧ್ಯವಿಲ್ಲ. ₹80 ಸಾವಿರ ಕೋಟಿ ಮೊತ್ತದ ಕೃಷಿ ಭಾಗ್ಯ ಯೋಜನೆ ಜಾರಿ ಮಾಡಲು ಸಲಹೆ ನೀಡಿದೆ. ಆದರೆ, ಅಧಿಕಾರಿಗಳು ₹8 ಸಾವಿರ ಕೋಟಿ ಯೋಜನೆ ಜಾರಿಗೊಳಿಸಿ ಉದ್ದೇಶವನ್ನೇ ಹಾಳು ಮಾಡಿದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಶ್ವಬ್ಯಾಂಕ್‌ ಪ್ರೇರಿತ ಕೃಷಿ ನೀತಿ: ‘ವಿಶ್ವಬ್ಯಾಂಕ್‌ ಪ್ರೇರಿತವಾದ ನೀತಿಗಳನ್ನು ಸರ್ಕಾರ ಹೇರುತ್ತಿರುವುದರಿಂದ ಕೃಷಿ ಕ್ಷೇತ್ರ ಸಂಕಷ್ಟದಲ್ಲಿದೆ. ಕೃಷಿಕರ ಆದಾಯ ಹೆಚ್ಚಿಸಲು ಸ್ವಾಮಿನಾಥನ್‌ ಆದಾಯ ಜಾರಿಗೊಳಿಸಬೇಕು’ ಎಂದು ಕಾರ್ಮಿಕರ ಮತ್ತು ರೈತ ಮುಖಂಡ ಮಾರುತಿ ಮಾನ್ಪಡೆ ಒತ್ತಾಯಿಸಿದರು.

*****

ನದಿಗಳ ಜೋಡಣೆಯಾಗಿ ಜಮೀನುಗಳಿಗೆ ನೀರು ಹರಿಯಬೇಕು. ಆಗ ಮಾತ್ರ ರೈತರು ಎದುರಿಸುತ್ತಿರುವ ಅನಿಶ್ಚತತೆ ಮತ್ತು ಸಮಸ್ಯೆಗೆ ಪರಿಹಾರ ದೊರೆಯಬಹುದು

ಡಾ.ಎಸ್‌.ಎ. ಪಾಟೀಲ

- ನಿವೃತ್ತ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT