ಮುಗಿಯಿತು ಸಾಹಿತಿಗಳ ಯಾತ್ರೆ

7

ಮುಗಿಯಿತು ಸಾಹಿತಿಗಳ ಯಾತ್ರೆ

Published:
Updated:
Prajavani

ಧಾರವಾಡ: ಆರು ದಶಕಗಳ ಬಳಿಕ ಸಾಂಸ್ಕೃತಿಕ ನಗರಿಗೆ ಒಲಿದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭೂತಪೂರ್ವ ಯಶಸ್ಸಿನೊಂದಿಗೆ ಭಾನುವಾರ ಸಂಪನ್ನವಾಯಿತು.

ಮೂರು ದಿನಗಳ ಸಾಹಿತ್ಯ ಯಾತ್ರೆ ಮತ್ತು ಜಾತ್ರೆಯಲ್ಲಿ ನೂರಾರು ಸಾಹಿತಿಗಳು ಮತ್ತು ಸಾವಿರಾರು ನಾಗರಿಕರು ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಿದರು. ನಾಡಿನ ಸಾಹಿತ್ಯ ದಿಗ್ಗಜರ ಹೆಸರಿನಲ್ಲಿ ಸ್ಥಾಪಿಸಿದ ಮಹಾದ್ವಾರ, ಮಂಟಪ ಹಾಗೂ ವೇದಿಕೆಯಲ್ಲಿ ಮೂರು ದಿನಗಳ ಕಾಲ ಹತ್ತಾರು ಕಾರ್ಯಕ್ರಮಗಳು ನಡೆದವು.

ಇದೇ ಮೊದಲ ಬಾರಿಗೆ ಸಮ್ಮೇಳನದ ಅಧ್ಯಕ್ಷರು ವಿಮಾನದಲ್ಲಿ ಬಂದಿಳಿದಿದ್ದು ಮೊದಲ ವಿಶೇಷವಾದರೆ, ಪ್ರಗತಿಪರರ ಸಾಕಷ್ಟು ವಿರೋಧದ ನಡುವೆಯೂ 1001 ಮಹಿಳೆಯರಿಂದ ಪೂರ್ಣಕುಂಭ ಸ್ವಾಗತವನ್ನು ಆಯೋಜಿಸಿದ್ದು ಮತ್ತು ಆ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಲೀ ಮತ್ತು ಸಮ್ಮೇಳನ ಅಧ್ಯಕ್ಷರಾಗಲೀ ಏನೂ ಹೇಳದೆ ಮೌನಬೆಂಬಲ ವ್ಯಕ್ತಪಡಿಸಿದ್ದರ ಕುರಿತು ಹಲವಾರು ಗೋಷ್ಠಿಗಳಲ್ಲಿ ಪ್ರಸ್ತಾಪವಾಯಿತು. ಕೆಲವರು ಪ್ರತಿಭಟಿಸಿ ಮಾತನಾಡಿದರು, ಇನ್ನೂ ಕೆಲವರು ಸಮ್ಮೇಳನಕ್ಕೆ ಬಾರದೆ ತಮ್ಮ ಪ್ರತಿಭಟನೆ ದಾಖಲಿಸಿದರು.

ಇವುಗಳ ನಡುವೆಯೇ ಶತಮಾನ ಕಂಡ ಕರ್ನಾಟಕ ಕಾಲೇಜು ಮೈದಾನದಿಂದ ಸಮ್ಮೇಳನ ಆಯೋಜನೆಗೊಂಡಿದ್ದ ಕೃಷಿ ವಿಶ್ವವಿದ್ಯಾಲಯವರೆಗಿನ ಐದು ಕಿಲೋ ಮೀಟರ್ ಉದ್ದದ ಮೆರವಣಿಗೆಯಲ್ಲಿ ನಾಲ್ಕು ಕಿಲೋ ಮೀಟರ್‌ನಷ್ಟು ಉದ್ದ ಇಡೀ ಧಾರವಾಡವೇ ಸಾಲುಗಟ್ಟಿ ನಿಂತು ಸಮ್ಮೇಳನ ಅಧ್ಯಕ್ಷರನ್ನು ಸ್ವಾಗತಿಸಿ ಅಭಿಮಾನ ಮೆರೆದರು. 25 ಸಾವಿರಕ್ಕೂ ಹೆಚ್ಚು ಮಕ್ಕಳು, 60ಕ್ಕೂ ಹೆಚ್ಚು ಕಲಾ ತಂಡಗಳು, ಸಾವಿರಾರು ಕನ್ನಡಾಸಕ್ತರ ಜಯಘೋಷಗಳ ನಡುವೆ ಕನ್ನಡಾಂಬೆಯ ತೇರನ್ನು ಎಳೆದು ಸಂಪ್ರೀತರಾದರು.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ 2017ರಲ್ಲಿ ನಡೆದ ಸಮ್ಮೇಳನದಲ್ಲಿ 22 ಗೋಷ್ಠಿಗಳು ಆಯೋಜನೆಗೊಂಡಿದ್ದವು. ಅದೇ ರೀತಿ 84ನೇ ಸಮ್ಮೇಳನದಲ್ಲಿ ಮೂರು ವೇದಿಕೆಗಳಲ್ಲಿ 24 ಗೋಷ್ಠಿಗಳು ನಡೆದವು. ಕನ್ನಡ ಶಾಲೆಗಳ ಅಳಿವು–ಉಳಿವು, ಉತ್ತರ ಕರ್ನಾಟಕ, ಗಡಿ ಪ್ರದೇಶ, ರೈತರ ಸಮಸ್ಯೆ, ನೀರಾವರಿಯಂತಹ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಂತೆ ಮಾಡಿತು.

ಬರುವ ಶೈಕ್ಷಣಿಕ ವರ್ಷದಿಂದ ಒಂದು ಸಾವಿರ ಸರ್ಕಾರಿ ಇಂಗ್ಲಿಷ್ ಪ್ರಾಥಮಿಕ ಶಾಲೆ ಪ್ರಾರಂಭಿಸುವುದಾಗಿ ಘೋಷಿಸಿದ್ದ ಸರ್ಕಾರದ ನಿರ್ಧಾರಗಳ ಸುತ್ತಲೇ ಬಹಳಷ್ಟು ಗೋಷ್ಠಿಗಳು ಚರ್ಚಿಸಿದವು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ, ಹಾಲಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರಿಂದ ಇಂದಿನ ಸಾಹಿತಿಗಳವರೆಗೂ ಪ್ರತಿಯೊಬ್ಬರೂ ಸರ್ಕಾರದ ನಿರ್ಣಯವನ್ನು ಕನ್ನಡಕ್ಕೆ ಮಾರಕ ಎಂದೇ ಆತಂಕ ವ್ಯಕ್ತಪಡಿಸಿದರು.

1957ರಲ್ಲಿ ಧಾರವಾಡದಲ್ಲಿ ಜರುಗಿದ 39ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕುವೆಂಪು ಅವರು ಕನ್ನಡ ಕುರಿತು ವ್ಯಕ್ತಪಡಿಸಿದ ಕಳವಳ ಇಲ್ಲಿಯೂ ಪ್ರತಿಧ್ವನಿಸಿತು. ಆಗಾಗ ಕೇಳಿಬರುವ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸುವವರಿಗೂ ಈ ಸಮ್ಮೇಳನದ ವೇದಿಕೆಯಲ್ಲಿ ನಡೆದ ಚರ್ಚೆಯಲ್ಲಿ ಉತ್ತರವನ್ನೇ ರವಾನಿಸಿತು. ಕರ್ನಾಟಕ ಇಬ್ಭಾಗವಾದರೆ ಅದು ಬರಿಗೈ ಮತ್ತು ಬರಗಾಲದ ರಾಜ್ಯವಾಗುವ ಅಪಾಯದ ಮುನ್ಸೂಚನೆ ನೀಡಿತು. 

ಇದೇ ವೇದಿಕೆಯಲ್ಲೇ ನಡೆದ ಮತ್ತೊಂದು ಗೋಷ್ಠಿಯಲ್ಲಿ ನೀರಾವರಿ ಕುರಿತು ಚರ್ಚೆ ನಡೆದು, ಕೃಷ್ಣಾ ಮತ್ತು ಕಾವೇರಿಕೊಳ್ಳದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಎತ್ತಿಕೊಂಡರೆ ಮತ್ತು ಅದಕ್ಕೆ ಈ ಭಾಗದ ರಾಜಕಾರಣಿಗಳು ಪ್ರಯತ್ನ ಪಟ್ಟರೆ ಉತ್ತರ ಕರ್ನಾಟಕದ 34ಲಕ್ಷ ಹೆಕ್ಟೇರ್ ಜಮೀನು ನೀರಾವರಿಯಾಗಿ ರಾಷ್ಟ್ರದಲ್ಲಿಯೇ ಶ್ರೀಮಂತ ಪ್ರದೇಶವಾಗಲಿದೆ ಎಂಬ ತಜ್ಞರ ಮಾತು ಭರವಸೆಯನ್ನೂ ಮೂಡಿಸಿತು.

ಇದರ ಜತೆಯಲ್ಲೇ ಕನ್ನಡ ಕಟ್ಟುವಿಕೆಯಲ್ಲಿನ ಸವಾಲುಗಳು, ಕನ್ನಡತ್ವದೊಳಗಿನ ದಲಿತತ್ವದ ಚರ್ಚೆ, ಕನ್ನಡ ಶಾಲೆಗಳ ಅಳಿವು–ಉಳಿವಿನ ಚಿಂತೆ, ಮಹಿಳಾ ಸಂವೇದನೆ, ಕನ್ನಡ ಚಲನಚಿತ್ರ ಮತ್ತು ರಂಗಭೂಮಿ ಇತ್ಯಾದಿ ಕುರಿತು ನಡೆದ ಚರ್ಚೆಗಳು ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಆಗಬೇಕಾದ್ದರ ಕಡೆ ಚಿಂತಿಸುವ ದಿಕ್ಸೂಚಿಯಾಯಿತು.

ಕೃಷಿ ಕ್ಷೇತ್ರದ ಆಪತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಸೃಷ್ಟಿಸಬಹುದಾದ ಅನಾಹುತದ ನಡುವೆಯೂ ನಾವು ನಮ್ಮ ಭಾಷೆ ಉಳಿಸಿಕೊಂಡು, ತಂತ್ರಜ್ಞಾನವನ್ನೂ ಬಳಸಿಕೊಂಡು, ಆರೊಗ್ಯವಂತ ಸಮಾಜ ಮತ್ತು ಜಗತ್ತನ್ನು ಸೃಷ್ಟಿಸುವ ಮೂಲಕ ವಿಶ್ವಮಾನವರಾಗಬೇಕೆಂಬ ಸಂದೇಶವನ್ನು ಸಮ್ಮೇಳನದ ಗೋಷ್ಠಿಗಳು ಸಾರಿದವು.

ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿನ ಮೂರು ವೇದಿಕೆ ಮತ್ತು ನಗರದೊಳಗಿನ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ರಂಗಾ
ಯಣ ಸೇರಿದಂತೆ ಐದು ವೇದಿಕೆಗಳಲ್ಲಿ 250 ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕೆಲವೆಡೆ ಪ್ರೇಕ್ಷಕರೇ ಇಲ್ಲದೆ, ಇನ್ನೂ ಕೆಲವೆಡೆ ಅದ್ಭುತ ಜನಸ್ತೋಮದ ನಡುವೆ ಹಲವರು ಕಾರ್ಯಕ್ರಮ ನೀಡಿದರು. ಸಮಯಾವಕಾಶ ಕಡಿಮೆ ನಿಡಿದ್ದಕ್ಕೆ ಹಿರಿಯ ಕಲಾವಿದರು ಅಸಮಾಧಾನ ವ್ಯಕ್ತಪಡಿಸಿದರೆ, ಕೆಲವೆಡೆ ಆಯೋಜಕರು ಮೈಕ್‌ ಕಸಿದುಕೊಂಡು ಕಿರಿಯರನ್ನು ಅವಮಾನಿಸಿದ ಕರಾಳ ಘಟನೆಗಳೂ ಸಮ್ಮೇಳನಕ್ಕೆ ಸಾಕ್ಷಿಯಾದವು.

ಗಂಭೀರ ಚರ್ಚೆಯ ಗೋಷ್ಠಿಗಳಿಗೆ ಪ್ರೇಕ್ಷಕರ ಕೊರತೆ ಎದುರಾಯಿತು. ಆದರೆ ಪುಸ್ತಕ ಮತ್ತು ವಾಣಿಜ್ಯ ಮಳಿಗೆ, ಭೋಜನಾಲಯದಲ್ಲಿ ಜನಸಾಗರವೇ ತುಂಬಿತ್ತು. ಅಸಹಿಷ್ಣುತೆ ಮತ್ತು ವೈಚಾರಿಕತೆ ಕುರಿತ ಗೋಷ್ಠಿಗೆ ಪ್ರೇಕ್ಷಕರ ಬರ ಎದುರಾಗಲಿಲ್ಲ. ಆದರೆ, ವೈಚಾರಿಕತೆಯ ಪ್ರಶ್ನೆಗಳು ಭಾಷಣಕಾರರು ಮತ್ತು ಪ್ರೇಕ್ಷಕರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.

ಮೊದಲ ದಿನ ಊಟೋಪಚಾರದಲ್ಲಿ ಮತ್ತು ನೋಂದಣಿಯಲ್ಲಿ ಸಣ್ಣ ಪ್ರಮಾಣದ ಅವ್ಯವಸ್ಥೆ ಕಂಡುಬಂದಿತಾದರೂ, ಇಡೀ ಸಮ್ಮೇಳನವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ಜಿಲ್ಲಾಡಳಿತ ಮತ್ತು ಅಧಿಕಾರಿಗಳ ಹಲವು ದಿನಗಳ ಶ್ರಮವನ್ನು ಸಾರ್ವಜನಿಕರು ಮುಕ್ತವಾಗಿ ಪ್ರಶಂಸಿದರು.

ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಆಯೊಜಿಸುವ ಅವಕಾಶ ಮತ್ತೆ ಸಿಗಲಿ. ಆದರೆ ಇಷ್ಟು ತಡವಾಗದಿರಲಿ ಎಂಬ ಆಶಯದೊಂದಿಗೆ ಹೊರಗಿನಂದ ಬಂದ ಅತಿಥಿಗಳನ್ನು ಮತ್ತು ಸಮ್ಮೇಳನ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರನ್ನು ಧಾರವಾಡದ ಜನತೆ ಬೀಳ್ಕೊಟ್ಟಿತು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !