ಪುಸ್ತಕ ಮಾರಾಟ ಅವ್ಯವಸ್ಥೆ

7

ಪುಸ್ತಕ ಮಾರಾಟ ಅವ್ಯವಸ್ಥೆ

Published:
Updated:
Prajavani

ಧಾರವಾಡ: ಸಾಹಿತ್ಯ ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿದ್ದ ಪುಸ್ತಕ ಮಾರಾಟಕ್ಕೆ ಮೂರು ದಿನಗಳಲ್ಲಿ ಸಾಹಿತ್ಯಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ, ಮಳಿಗೆಗಳ ವ್ಯವಸ್ಥೆ ಬಗ್ಗೆ ಪ್ರಕಾಶಕರಿಂದ ತೀವ್ರ ಟೀಕೆ ವ್ಯಕ್ತವಾಯಿತು.

ಮಕ್ಕಳು, ಯುವಜನರು, ಹಿರಿಯರು ಪುಸ್ತಕ ಮಳಿಗೆಗಳತ್ತ ಆಸಕ್ತಿಯಿಂದ ಧಾವಿಸಿದರು. ತಮಗೆ ಬೇಕಾದ ಪುಸ್ತಕಗಳು ಸಿಕ್ಕಾಗ ಸಂಭ್ರಮಿಸಿದರು. ಪುಸ್ತಕ ಮಾರಾಟವೂ ಚೆನ್ನಾಗಿಯೇ ಆಯಿತು. ‘ಫೇಸ್‌ಬುಕ್ ಪುಸ್ತಕದಂಗಡಿ’ ಓದುಗರ ವಿಶೇಷ ಗಮನ ಸೆಳೆಯಿತು. ಪುಸ್ತಕ ಮಳಿಗೆ ಹಾಕಿದ್ದ ಪ್ರಕಾಶಕರು ಮಾತ್ರ ಸಮ್ಮೇಳನದ ಆಯೋಜಕರಿಗೆ ಹಿಡಿಶಾಪ
ಹಾಕಿದರು!

ಕೃಷಿ ವಿ.ವಿ. ಆವರಣದಲ್ಲಿ ದಾರಿ ಮಧ್ಯದಲ್ಲಿ ಅಕ್ಕಪಕ್ಕದ ಸಾಲುಗಳಲ್ಲಿ ಮಳಿಗೆಗಳನ್ನು ಹಾಕಲಾಗಿತ್ತು. ಅದರ ಪಕ್ಕ ಜನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಫುಟ್‌ಪಾತ್ ಸೇರಿದಂತೆ ಇಕ್ಕೆಲದಲ್ಲೂ ದಾರಿ ಕಿರಿದಾಗಿದ್ದರಿಂದ ಕೆಲ ಪ್ರಕಾಶಕರಿಗೆ ನಿರೀಕ್ಷಿಸಿದಷ್ಟು ಲಾಭ ಬರಲಿಲ್ಲ. ಇದೇ ಮಾರ್ಗದಲ್ಲಿ ಜನರು ಊಟಕ್ಕೆ ತೆರಳಬೇಕಾದ್ದರಿಂದ ಪುಸ್ತಕಪ್ರಿಯರಿಗೆ ಜನಸಂದಣಿಯಲ್ಲಿ ಇಷ್ಟದ ಮಳಿಗೆಗಳಿಗೆ ಭೇಟಿ ಕೊಡಲು ಸಾಧ್ಯವಾಗಲಿಲ್ಲ.

ಪುಸ್ತಕ ಮಳಿಗೆಗಳಲ್ಲಿ ಕಿರಿದಾದ ಜಾಗ, ಅಗತ್ಯಕ್ಕೆ ತಕ್ಕಷ್ಟು ದೊರೆಯದ ಟೇಬಲ್, ಲೈಟಿಂಗ್, ಪಿನ್ ಪಾಯಿಂಟ್, ನೀರು, ಶೌಚಾಲಯ ಸಮಸ್ಯೆ, ಜನಸಂದಣಿ ಹೀಗೆ ಅನೇಕ ಅವ್ಯವಸ್ಥೆಗಳಿಂದ ಪ್ರಕಾಶಕರು ನರಳಬೇಕಾಯಿತು. ಬಹುತೇಕ ಪ್ರಕಾಶಕರು ರಾಯಚೂರು ಮತ್ತು ಮೈಸೂರು ಸಮ್ಮೇಳನಗಳ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಕೊಂಡಾಡಿದರು. ಪುಸ್ತಕ ಮಳಿಗೆಗಾಗಿ ₹ 2,500 ಪಾವತಿಸಿದ್ದರೂ ಪ್ರಕಾಶಕರಿಗೆ ಆಯೋಜಕರು ಊಟದ ಕೂಪನ್ ನೀಡಿರಲಿಲ್ಲ. ₹ 250 ಪ್ರತಿನಿಧಿ ಶುಲ್ಕ ನೀಡಿದವರಿಗೆ ಮಾತ್ರ ಊಟದ ವ್ಯವಸ್ಥೆ ಇತ್ತು. ಇದು ಪ್ರಕಾಶರ ಸಿಟ್ಟಿಗೆ ಕಾರಣವಾಯಿತು.

ಕಂಬಾರರ ’ಮಹಮ್ಮದ್ ಗವಾನ್‌’ಗೆ  ಬೇಡಿಕೆ

ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರರ ಪುಸ್ತಕಗಳ ಮಾರಾಟಕ್ಕಾಗಿ ಸಪ್ನ ಬುಕ್ ಹೌಸ್ ವಿಶೇಷ ವಿಭಾಗ ತೆರೆದಿತ್ತು. ಕಂಬಾರರ ಈಚಿನ ನಾಟಕ ‘ಮಹಮ್ಮದ್ ಗವಾನ್’ ಕೃತಿ ಹೆಚ್ಚು ಮಾರಾಟವಾಗಿದೆ. ಇದರ ಜತೆಗೆ ಮಕ್ಕಳಿಗಾಗಿ ಬರೆದ ‘ಅಲಿಬಾಬಾ ಮತ್ತು 40 ಕಳ್ಳರು’, ಕಾವ್ಯದಲ್ಲಿ ‘ಈವರೆಗೆ ಹೇಳತೇನ ಕೇಳ’ ಕೃತಿಗಳು ಹೆಚ್ಚು ಮಾರಾಟವಾಗಿವೆ.

‘ ಈ ಬಾರಿಯ ಸಮ್ಮೇಳನದಲ್ಲಿ ಉತ್ತಮ ಪ್ರತಿಕ್ರಿಯೆ ನಮಗೆ ದೊರೆತಿದೆ. ‘ಸಪ್ನ’ ಇಂಕ್ ಅಡಿಯಲ್ಲಿ ಹೊಸ ಬರಹಗಾರರಿಗೆ ಅವಕಾಶ ಮಾಡಿಕೊಡಲಾಗಿತ್ತು. ಸಾಹಿತ್ಯ, ಅಧ್ಯಾತ್ಮ, ವ್ಯಕ್ತಿತ್ವ ವಿಕಸನ, ಮಕ್ಕಳ ಪುಸ್ತಕಗಳು ಮಾರಾಟವಾದವು.ಒಟ್ಟು ₹ 10ಲಕ್ಷದ ತನಕ ವಹಿವಾಟು ನಡೆದಿದೆ’ ಎಂದು ಸಪ್ನ ಬುಕ್‌ಹೌಸ್‌ನ ಮುಖ್ಯಸ್ಥ ಅರ್. ದೊಡ್ಡೇಗೌಡ ಮಾಹಿತಿ ನೀಡಿದರು.

***

‘ಇಂಥ ಅವ್ಯವಸ್ಥೆ ಎಲ್ಲೂ ನೋಡಿಲ್ಲ. ಶೌಚಾಲಯಕ್ಕೆ 1 ಕಿ.ಮೀ. ದೂರ ಹೋಗಬೇಕು. ಮಳಿಗೆ ಹಾಕಿರುವ ಕ್ರಮವೇ ಅವೈಜ್ಞಾನಿಕ
-ವಸುಧೇಂದ್ರ, ಛಂದ ಪುಸ್ತಕ ಪ್ರಕಾಶನ

 

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !