ತಿರುಚಿದ ‘ಭಾರತೀಯತೆ’ಯ ವ್ಯಾಖ್ಯಾನ: ಪ್ರತಿಭಾ ನಂದಕುಮಾರ್‌

7

ತಿರುಚಿದ ‘ಭಾರತೀಯತೆ’ಯ ವ್ಯಾಖ್ಯಾನ: ಪ್ರತಿಭಾ ನಂದಕುಮಾರ್‌

Published:
Updated:

ಅಂಬಿಕಾತನಯದತ್ತ ಪ್ರಧಾನ ವೇದಿಕೆ (ಧಾರವಾಡ): ‘ಭಾರತೀಯತೆ, ಹಿಂದುತ್ವ, ಎಡಪಂಥೀಯ ಇತ್ಯಾದಿ ವ್ಯಾಖ್ಯಾನಗಳನ್ನು ಹಿಂದೆಂದೂ ಇಲ್ಲದ ರೀತಿಯಲ್ಲಿ ತಿರುಚುವ ಪ್ರಯತ್ನ ನಡೆದಿದೆ’ ಎಂದು ಕವಯತ್ರಿ ಪ್ರತಿಭಾ ನಂದಕುಮಾರ್ ಹೇಳಿದರು.

ಡಾ. ಎಚ್‌.ಎಸ್‌. ಶಿವಪ್ರಕಾಶ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿಯ ಆಶಯಭಾಷಣ ಮಾಡಿದ ಅವರು, ಮೈಸೂರಿನಲ್ಲಿ ನಡೆದ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಕಾರ್ಯಕ್ರಮದಲ್ಲಿ ವ್ಯಕ್ತವಾದ, ‘ಭಾರತೀಯ ಸಾಹಿತ್ಯವನ್ನು ಬರೆಯದೇ ಇರುವುದು ವೈಚಾರಿಕತೆಯಿಂದ ಬಂದ ಕಷ್ಟ’ ಎಂಬ ಅಭಿಪ್ರಾಯಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಭಾರತೀಯರು ರಚಿಸುವುದೆಲ್ಲವೂ ಭಾರತೀಯ ಸಾಹಿತ್ಯ. ಭಾರತೀಯತೆ ಎಂಬುದು ಒಂದು ರಾಜಕೀಯ ಪಕ್ಷದ ಒಂದು ಧರ್ಮದ ಸೊತ್ತಲ್ಲ. ತನ್ನ ವ್ಯಾಖ್ಯಾನವೇ ಅಂತಿಮ; ಉಳಿದವರ ಚಿಂತನೆ ಭೂಸಾ ಎಂಬುದು ಧೋರಣೆ ಇಂದಿನ ಸಾಹಿತ್ಯದಲ್ಲಿ ಕಾಣಿಸಿಕೊಂಡು, ಮುಖ್ಯವಾಹಿನಿಗೂ ವ್ಯಾಪಿಸಿದೆ’ ಎಂದು ವಿಷಾದಿಸಿದರು.

ಶು‌ದ್ಧ ಕಾವ್ಯಕ್ಕೆ ಸ್ಪಂದನೆಯೇ ಇಲ್ಲ ಎಂದ ಮೇಲೆ ಶುದ್ಧ ಕಾವ್ಯ ಎಲ್ಲಿ ಹುಟ್ಟುತ್ತದೆ ಎಂದು ಪ್ರಶ್ನಿಸಿದ ಅವರು, ‘ಇಕ್ರಲಾ ಒದೀರಲಾ’ ಎಂಬುದೀಗ ನೋವಿನ ಅಭಿವ್ಯಕ್ತಿಯಾಗದೇ, ವ್ಯಕ್ತಿಗತ ಧೋರಣೆಯನ್ನು ಹೇರುವ ದನಿಯಾಗಿ ಬಳಕೆಯಾಗುತ್ತಿದೆ. ಈ ಧೋರಣೆ ಬಲಪಂಥೀಯರಲ್ಲಿ ಮಾತ್ರವಲ್ಲ ಎಡಪಂಥೀಯರಲ್ಲಿಯೂ ಇರುವುದು ದೊಡ್ಡ ದುರಂತ’ ಎಂದರು.

ಯುವಕವಿಗಳಿಗೆ ಕಿವಿಮಾತು

‘ಗ್ರಂಥಾಲಯಗಳು ತಮ್ಮ ಕವನ ಸಂಕಲಗಳನ್ನು ಖರೀದಿಸಿಬಿಟ್ಟರೆ ಕಾವ್ಯಕ್ಕೆ ಮರ್ಯಾದೆ ಸಿಕ್ಕಿಬಿಟ್ಟಿತು ಎಂದು ತೃಪ್ತಿ ಪಡುವ ಕವಿಗಳು, ತಮ್ಮ ಇರುವಿಕೆಯ ದಾರಿಯನ್ನು ಗುರುತಿಸಿಕೊಳ್ಳುವುದರ ಬದಲಾಗಿ ಪ್ರಕಾಶಕರ ಇರುವಿಕೆಯ ದಾರಿಯ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಮಾರುಕಟ್ಟೆಯ ಇತಿಮಿತಿಗೆ ಸೀಮಿತವಾಗಿ ಕವಿಯೊಬ್ಬ ವಿಚಾರ ಮಾಡುತ್ತಾನೆ ಎನ್ನುವುದಾದರೆ ಆ ಕಾವ್ಯ ಶುದ್ಧಕಾವ್ಯ ಮಾರ್ಗದಲ್ಲಿ ಇಲ್ಲ ಎಂದು ಅರ್ಥ‘ ಎಂದರು.

ಹೊಂದಾಣಿಕೆಗಾಗಿ ತಿಣುಕುವ ಕವಿಗಳು

‘ಸಾಹಿತ್ಯವು ಎಡ– ಬಲದಲ್ಲಿ ಹಂಚಿಹೋಗುತ್ತಿರುವ ಸಂದರ್ಭದಲ್ಲಿ ಕವಿ ಯಾವುದಾದರೂ ಒಂದು ಬಣಕ್ಕೆ ಸೇರಲೇಬೇಕಾಗಿದೆ. ಯಾರು ಯಾವ ಧೋರಣೆಯ ಕಾವ್ಯ ರಚಿಸುತ್ತಿದ್ದಾರೆ ಎಂಬುದನ್ನು ದುರ್ಬೀನು ಹಾಕಿಕೊಂಡು ನೋಡಿ, ಹೇಗಾದರೂ ಸರಿ ಅದನ್ನು ಯಾವುದಾದರೂ ಗುಂಪಿಗೆ ಸೇರಿಸಬೇಕು ಎನ್ನುವ ತಹ ತಹ ಹೆಚ್ಚುತ್ತಿದೆ. ಅದಕ್ಕೆ ಕುಮ್ಮಕ್ಕು ಕೊಡುವಂತೆ ಪತ್ರಿಕೆಯ ಸಾಪ್ತಾಹಿಕಗಳು ತಮ್ಮ ತಮ್ಮ ಪತ್ರಿಕೆಗಳ ರಾಜಕೀಯ ನಿಲುವಿಗೆ ಆಗಿಬರುವ ಕವನಗಳನ್ನು ಮಾತ್ರ ಪ್ರಕಟಿಸುತ್ತಿವೆ. ಹಾಗಾಗಿ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಒಂದು ರೀತಿಯ ಜರಡಿ ಹಿಡಿಯುವ ಕೆಲಸ ಅನೇಕ ತೆರನಾಗಿ ನಡೆಯುತ್ತಿದೆ ಮತ್ತು ಅದಕ್ಕೆ ತಕ್ಕಂತೆ ಕಾವ್ಯರಚಿಸುವ ಹೊಂದಾಣಿಕೆಯನ್ನು ಮಾಡಿಕೊಳ್ಳಲು ಇಂದಿನ ಕವಿಗಳು ತಿಣುಕುತ್ತಿದ್ದಾರೆ’ ಎಂದರು.

ಶಿವಪ್ರಕಾಶ್‌ರಿಗೆ ಮೊದಲ ಸಮ್ಮೇಳನ

ಅಧ್ಯಕ್ಷತೆ ವಹಿಸಿದ್ದ ಡಾ. ಎಚ್‌.ಎಸ್‌. ಶಿವಪ್ರಕಾಶ್,  65ನೇ ವಯಸ್ಸಿನಲ್ಲಿ ತಾವು ಮೊಟ್ಟಮೊದಲ ಅಖಿಲ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದ ಅವರು, ಇದುವರೆಗೂ ತಾವು ಪರಿಷತ್ತು, ಸಮ್ಮೇಳನದ ಪಾಲಿಗೆ ‘ಅಸೃಶ್ಯ’ರಾಗಿದ್ದಾಗಿ ಬೇಸರ ವ್ಯಕ್ತಪಡಿಸಿದರು.

ಕವಿಗೋಷ್ಠಿ ‘ಕನ್ನಡದ ಕಾವ್ಯ ತೇರಿಗೆ ಅದೆಷ್ಟು ಗಾಲಿಗಳು’ ಎಂಬ ಕವಿವಾಣಿಯನ್ನು ಉದ್ಧರಿಸಿದ ಅವರು, ಕೆಲವು ಗಾಲಿಗಳು ಕೊಂಯ್‌ ಕೊಂಯ್‌ ಎನ್ನುತ್ತಿವೆ ಎಂಬ ಮೂಲಕ ಕವಿಗೋಷ್ಠಿಯ ಅಧ್ಯಕ್ಷೀಯ ಮಾತನ್ನೂ ಸಂಪನ್ನಗೊಳಿಸಿದರು.

 ತೋಂಟದ ಸಿದ್ಧಲಿಂಗ ಶ್ರೀಗಳಿಗೆ ಕೊನೆಯ ವಿದಾಯ ಹೇಳಿ ‘ಕಾಯಕ ಯೋಗಿಗೆ...‘ ಕವನ ವಾಚಿಸಿದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !