ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಮಾಹಿತಿ ಸಂಗ್ರಹಕ್ಕೆ ಆ್ಯಪ್‌ಗಳ ದುರ್ಬಳಕೆ

Last Updated 10 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ ಅನಲಿಟಿಕಾ ಸಂಸ್ಥೆ ಚುನಾವಣಾ ಪ್ರಚಾರಕ್ಕಾಗಿ ಮತ್ತು ಮತದಾರರ ಮೇಲೆ ಪ್ರಭಾವ ಬೀರಲು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನ ಲಕ್ಷಾಂತರ ಬಳಕೆದಾರರ ಮಾಹಿತಿ ಸೋರಿಕೆ ಮಾಡಿತ್ತು ಎಂಬುದು ಈಚಿನ ದಿನಗಳಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.

ಮಾಹಿತಿ ಸೋರಿಕೆಯಷ್ಟೇ ಗಂಭೀರವಾದ ಇತರ ಹಲವು ಸಂಗತಿಗಳಿವೆ. ವೈಯಕ್ತಿಕ ಮಾಹಿತಿ ರಕ್ಷಣೆ ಮತ್ತು ಭದ್ರತೆ ಕುರಿತು ಚಿಂತಿಸುವ ಅಗತ್ಯವಿದೆ.

ಉಚಿತವಾಗಿ ದೊರಕುವ ಮೊಬೈಲ್‌ ಆ್ಯಪ್‌ಗಳು ಮತ್ತು ಫೇಸ್‌ಬುಕ್‌ ಆ್ಯಪ್‌ಗಳು, ಜತೆಗೆ ಕ್ಯಾಂಡಿ ಕ್ರಷ್‌, ಲ್ಯುಡೊ ಮತ್ತು ಚೆಸ್‌ನಂತಹ ಗೇಮ್‌ ಆ್ಯಪ್‌ಗಳು ಬಳಕೆದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸುವ ಸಾಧನಗಳಾಗಿ ಬಳಕೆಯಾಗಬಲ್ಲವು ಎಂದು ಸೈಬರ್‌ ಭದ್ರತೆ ಪರಿಣತರು  ಅಂತರ್ಜಾಲ ಬಳಕೆದಾರರನ್ನು ಎಚ್ಚರಿಸಿದ್ದಾರೆ.

‘ಹಲವು ಬಳಕೆದಾರರು ಈ ಆಟಗಳನ್ನು ಆಡುತ್ತಾರೆ. ಇನ್ನೂ ಹಲವರು ‘ಈಗಿನಿಂದ ಮೂವತ್ತು ವರ್ಷಗಳ ನಂತರ ಹೇಗೆ ಕಾಣಿಸುವಿರಿ’ ಎಂಬ ಉಚಿತ ಆ್ಯಪ್‌ ಬಳಸುತ್ತಾರೆ. ಒಂದು ಅಂಶ ನೆನಪಿಡಬೇಕು. ಯಾವುದೂ ಉಚಿತವಾಗಿ ದೊರಕುವುದಿಲ್ಲ. ಆ ಉತ್ಪನ್ನ ಉಚಿತ ಎಂದು ನೀವು ಭಾವಿಸುತ್ತೀರಿ. ಆದರೆ, ನೀವೇ ಒಂದು ಉತ್ಪನ್ನವಾಗಿರುತ್ತೀರಿ’ ಎಂದು ಸೈಬರ್‌ ಭದ್ರತೆ ಪರಿಣತ ಜೀತನ್‌ ಜೈನ್‌ ತಿಳಿಸಿದ್ದಾರೆ.

ಭಾರತದ ‘ಹೆಚ್ಚು ಸಕ್ರಿಯವಾಗಿರುವ’ ಸ್ಮಾರ್ಟ್‌ಫೋನ್‌ ಬಳಕೆದಾರರು ಪ್ರತಿದಿನ ನಾಲ್ಕು ಗಂಟೆಗಳನ್ನು ಆ್ಯಪ್‌ಗಳಲ್ಲಿ ಕಳೆಯುತ್ತಿದ್ದಾರೆ ಎಂದು ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ (ಐಟಿಯು) ಅಂತರ್ಜಾಲ ತಾಣದಲ್ಲಿ ಪ್ರಕಟವಾದ ಲೇಖನದಲ್ಲಿ ವಿವರಿಸಲಾಗಿದೆ.

2016ರಲ್ಲಿ ಭಾರತೀಯರು 620 ಕೋಟಿ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. 2015ರಲ್ಲಿ ಇದು 360 ಕೋಟಿ ಇತ್ತು. ಅಲ್ಲದೆ, 145 ಕೋಟಿ ಗಂಟೆಗಳನ್ನು ಆ್ಯಪ್‌ಗಳಲ್ಲಿ ಕಳೆದಿದ್ದಾರೆ. ಮೊಬೈಲ್‌ ಆ್ಯಪ್‌ಗಳು ಮತ್ತು ಗೇಮ್ಸ್‌ಗಳ ವ್ಯಾಪ್ತಿ ಎಷ್ಟಿದೆ ಎಂಬುದು ಇದರ ಮೂಲಕ ತಿಳಿಯುತ್ತದೆ.

ಫೇಸ್‌ಬುಕ್‌ ಮತ್ತು ಹಲವು ಮೊಬೈಲ್‌ ಆ್ಯಪ್‌ಗಳು ಮಾಹಿತಿ ಸಂಗ್ರಹ ತಂತ್ರಗಳನ್ನು ಬಳಸುತ್ತವೆ. ಆ ಮೂಲಕ ಬಳಕೆದಾರನ ಒಪ್ಪಿಗೆ ಪಡೆದು ಅವರ ಹೆಸರು, ವಯಸ್ಸು, ಇಷ್ಟಗಳು, ಸ್ನೇಹಿತರು, ಸಂದೇಶಗಳು ಸೇರಿದಂತೆ ಇತರ ವೈಯಕ್ತಿಕ ಮಾಹಿತಿ ಕಲೆಹಾಕುತ್ತವೆ. ಇದು ಭದ್ರತೆಗೆ ಅತಿ ದೊಡ್ಡ ಅಪಾಯ ಎಂದು ಜೈನ್‌ ಎಚ್ಚರಿಸಿದ್ದಾರೆ.

ಬಳಕೆದಾರರ ಮಾಹಿತಿ ಪಡೆಯುವುದರಲ್ಲಿ ಎರಡು ವಿಧಗಳನ್ನು ಅನುಸರಿಸಲಾಗುತ್ತಿದೆ. ಮೊದಲನೆಯದು ಬಳಕೆದಾರರ ಅನುಮತಿ ಪಡೆದು ಅವರ ಮಾಹಿತಿ ಸಂಗ್ರಹಿಸುವುದು. ಇದು ಅಧಿಕೃತ. ಇನ್ನೊಂದು ಮಾಹಿತಿ ಕಳ್ಳತನ ಮಾಡುವುದು. ವಾಣಿಜ್ಯ ಅಥವಾ ಇತರ ಉದ್ದೇಶಗಳಿಗೆ ಅನಧಿಕೃತವಾಗಿ ಬಳಕೆದಾರರ ಮಾಹಿತಿಗೆ ಕನ್ನ ಹಾಕುವುದು ಇನ್ನೊಂದು ವಿಧ ಎಂದು ಜೈನ್‌ ವಿವರಿಸಿದ್ದಾರೆ.

ಮೊಬೈಲ್‌ ಬಳಕೆಗೆ ವ್ಯತಿರಿಕ್ತವಾಗಿ ಅಂತರ್ಜಾಲ ಬಳಕೆದಾರರು ವೆಬ್‌ಸೈಟ್‌ಗಳಿಗೆ ಭೇಟಿ ನೀಡಿದಾಗ ತಮ್ಮ ವೈಯಕ್ತಿಕ ಮಾಹಿತಿ ಬಗ್ಗೆ ನಿಗಾ ವಹಿಸುತ್ತಾರೆ ಎಂದು ಅರ್ನೆಸ್ಟ್‌ ಆ್ಯಂಡ್‌ ಯಂಗ್‌ ಸೈಬರ್‌ ಸುರಕ್ಷತೆ ಸಂಸ್ಥೆಯ ಪಾಲುದಾರ ಜಸ್‌ಪ್ರೀತ್‌ ಸಿಂಗ್‌ ಹೇಳುತ್ತಾರೆ.

‘ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ ಒದಗಿಸುವಂತೆ ಕೋರಿ ವಿಧಿಸುವ ಷರತ್ತುಗಳನ್ನು ಒಪ್ಪಿಕೊಳ್ಳುವ ಮುನ್ನ ಅವುಗಳನ್ನು ವಿವರವಾಗಿ ಓದಿ’ ಎಂದೂ ಅವರು ಸಲಹೆ ನೀಡಿದ್ದಾರೆ.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ಆಯಾ ಅಂತರ್ಜಾಲ ತಾಣಗಳು ಹೇಗೆ ಬಳಸಿಕೊಳ್ಳುತ್ತವೆ ಎಂಬುದನ್ನು ಅವುಗಳ ಪ್ರೈವಸಿ ಪಾಲಿಸಿ ಓದಿ, ಅರ್ಥ ಮಾಡಿಕೊಳ್ಳಬೇಕು. ಅಲ್ಲದೇ ತಾವಿರುವ ಸ್ಥಳದ ಮಾಹಿತಿ ನೀಡುವ ಮುನ್ನ ಎಚ್ಚರದಿಂದ ಇರಬೇಕು.

ಅಂತರ್ಜಾಲ ಬಳಕೆದಾರರಲ್ಲಿ ಬಹುತೇಕರು ಯುವಕರೇ ಆಗಿದ್ದಾರೆ. ಅವರಲ್ಲಿ ಆನ್‌ಲೈನ್‌ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಭಾರತೀಯ ದತ್ತಾಂಶ ಭದ್ರತಾ ಸಮಿತಿಯ (ಡಿಎಸ್‌ಸಿಐ) ಸಿಇಒ ರಮಾ ವೇದಶ್ರೀ ಹೇಳುತ್ತಾರೆ.

ಸಾಮಾಜಿಕ ಮಾಧ್ಯಮ ಮತ್ತು ವಿಶ್ಲೇಷಣಾ ಸಂಸ್ಥೆಗಳ ತಂತ್ರಜ್ಞಾನದ ಬಲ ಮತ್ತು ವೇದಿಕೆಗಳನ್ನು ಸಮರ್ಥವಾಗಿ ಎದುರಿಸುವ ಅರಿವು, ಜ್ಞಾನ ಮತ್ತು ಕೌಶಲ ಈ ಯುವಕರಲ್ಲಿ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಇದು ಸುರಕ್ಷತೆ ಮತ್ತು ಖಾಸಗಿತನದ ದೃಷ್ಟಿಯಿಂದ ಅತಿ ಮುಖ್ಯ ಎನ್ನುವುದು ಅವರ ನಿಲುವಾಗಿದೆ.

ಬಳಕೆದಾರರು ಯಾವುದೇ ಆ್ಯಪ್‌ಗಳಿಗೆ ತಮ್ಮ ವೈಯಕ್ತಿಕ ಮಾಹಿತಿ ಪಡೆಯಲು ಅನುಮತಿ ನೀಡುವ ಮುನ್ನ ಎಲ್ಲ ಷರತ್ತುಗಳನ್ನು ಓದಿ, ಅವುಗಳ ಸಾಧಕ ಬಾಧಕಗಳ ಕುರಿತು ಯೋಚಿಸಬೇಕಿದೆ ಎಂದು ಸುಪ್ರೀಂ ಕೋರ್ಟ್‌ ವಕೀಲ ಪವನ್ ದುಗ್ಗಲ್‌ ಅಭಿಪ್ರಾಯಪಡುತ್ತಾರೆ. ಇವರು ದತ್ತಾಂಶ ಸುರಕ್ಷತೆಗಾಗಿ ಸಂವಿಧಾನಾತ್ಮಕ ಕಾಯ್ದೆ ರಚಿಸುವ ಕುರಿತು ವಾದ ಮಂಡಿಸುತ್ತಿದ್ದಾರೆ.

‘ಕಾನೂನು ಜಾರಿಯಾಗುವವರೆಗೂ ಕಾಯಬೇಡಿ. ಅದಕ್ಕೆ ಸಾಕಷ್ಟು ಸಮಯ ಬೇಕು. ಆನ್‌ಲೈನ್‌ನಲ್ಲಿ ನೀವು ಏನು ಶೇರ್‌ ಮಾಡುತ್ತೀರಿ ಎಂಬುದರ ಅರಿವಿರಲಿ. ನಿಮ್ಮನ್ನು ಗೌರವಿಸುವ ಬದಲಿಗೆ ‘ದತ್ತಾಂಶ ವಿಷಯ’ ಅಥವಾ ದತ್ತಾಂಶ ವಸ್ತು’ವನ್ನಾಗಿ ಮಾತ್ರ ನೋಡಲಾಗುತ್ತಿದೆ ಎಂಬುದರ ಬಗ್ಗೆ ತಿಳಿದಿರಲಿ’ ಎಂದು ದುಗ್ಗಲ್‌ ಎಚ್ಚರಿಸುತ್ತಾರೆ.

‘ಅಂತರ್ಜಾಲವು ಎಂದಿಗೂ ನಿದ್ರಿಸುವುದಿಲ್ಲ. ನೀವು ಶೇರ್‌ ಮಾಡಿದ್ದು (ಹಂಚಿಕೊಂಡ ಮಾಹಿತಿ) ಅಲ್ಲೇ ಇರುತ್ತದೆ. ಅದನ್ನು ಎಂದಿಗೂ ಮರೆಯುವುದಿಲ್ಲ. ಸುದೀರ್ಘ ಅವಧಿಗೆ ಆ ಮಾಹಿತಿ ಅಲ್ಲೇ ಉಳಿದಿರುತ್ತದೆ.

‘ಮಾಹಿತಿ ತಂತ್ರಜ್ಞಾನ ಕಾಯ್ದೆಯಿಂದ ಪರಿಣಾಮಕಾರಿ ಪರಿಹಾರಗಳು ದೊರೆಯುತ್ತಿಲ್ಲ. ಅಲ್ಲದೆ ಇದರ ಆಧಾರದಲ್ಲಿ ಯಶಸ್ವಿ ತೀರ್ಪುಗಳೂ ಹೊರಬಿದ್ದಿಲ್ಲ. ಕಾಯ್ದೆಯ ಉಲ್ಲಂಘನೆ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ಮಾಹಿತಿ ದುರ್ಬಳಕೆ ಮಾಡಿದ್ದಕ್ಕಾಗಿ ಯಾರಿಗೂ ಶಿಕ್ಷೆ ಆಗಿಲ್ಲ’ ಎಂದು ದುಗ್ಗಲ್‌ ಈಗಿನ ಕಾಯ್ದೆಯ ಕುರಿತು ವಿವರಿಸಿದ್ದಾರೆ.

ಐಟಿಯು ವರದಿಗಳ ಪ್ರಕಾರ, 2017ರ ಜೂನ್‌ವರೆಗೆ 83 ಕೋಟಿ ಯುವಜನರು ಆನ್‌ಲೈನ್‌ನಲ್ಲಿ ಇದ್ದರು. ಈ ಸಂಖ್ಯೆ 104 ದೇಶಗಳ ಶೇಕಡ 80ರಷ್ಟು ಯುವಜನರನ್ನು ಪ್ರತಿಬಿಂಬಿಸುತ್ತದೆ. ಭಾರತ ಮತ್ತು ಚೀನಾ ದೇಶಗಳ 32 ಕೋಟಿ ಯುವಜನರು ಅಂತರ್ಜಾಲ ಬಳಸುತ್ತಿದ್ದಾರೆ.

* 2016ರಲ್ಲಿ ಭಾರತೀಯರು ಡೌನ್‌ಲೋಡ್‌ ಮಾಡಿಕೊಂಡ ಆ್ಯ‍ಪ್‌ಗಳು 620 ಕೋಟಿ

* 2015ರಲ್ಲಿನ ಡೌನ್‌ಲೋಡ್‌ ಸಂಖ್ಯೆ 360 ಕೋಟಿ

* ಆ್ಯಪ್‌ ಬಳಕೆಗೆ ಬಳಸಿರುವ ಅವಧಿ 145 ಕೋಟಿ ಗಂಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT