ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಬದಲಾವಣೆ ಬಗ್ಗೆ ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ: ಪ್ರಲ್ಹಾದ ಜೋಶಿ

Last Updated 25 ಡಿಸೆಂಬರ್ 2021, 6:27 IST
ಅಕ್ಷರ ಗಾತ್ರ

ಹುಬ್ಬಳ್ಳಿ:‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ವರಿಷ್ಠರ ಮಟ್ಟದಲ್ಲಿ ಯಾವುದೇ ಚರ್ಚೆಯಾಗಿಲ್ಲ. ಊಹಾಪೋಹಗಳಿಗೆ ಕಿವಿಗೊಡಬೇಡಿ. ಯಾರೋ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅದನ್ನು ಕೈ ಬಿಡಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ದಿ. ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಶನಿವಾರ ನಗರದ ಹೆಗ್ಗೇರಿಯ ರುದ್ರಭೂಮಿಯಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು, ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಏನೇ ಮಾಡಿದರೂ ಅದನ್ನು ಕಾಂಗ್ರೆಸ್‌ನವರು ವಿರೋಧಿಸುತ್ತಾರೆ. ಅವರಲ್ಲಿ ಮೋದಿ ಫೋಬಿಯಾ ಆರಂಭವಾಗಿದೆ’ ಎಂದು ಜೋಶಿ ಹೇಳಿದರು.

‘ಚುನಾವಣಾ ಕಾನೂನುಗಳ(ತಿದ್ದುಪಡಿ) ಮಸೂದೆಗೆ ಕಾಂಗ್ರೆಸ್‌ ತೀವ್ರವಾಗಿ ವಿರೋಧಿಸುತ್ತಿದೆ. ಸಂಸತ್‌ನ ಸ್ಥಾಯಿ ಸಮಿತಿಯಲ್ಲಿ ಮಸೂದೆ ಚರ್ಚೆಯಾಗುವಾಗ ಯಾರೊಬ್ಬರೂ ಭಿನ್ನಾಭಿಪ್ರಾಯದ ಟಿಪ್ಪಣೆ ಸಲ್ಲಿಸಿಲ್ಲ. ನಂತರ ಚುನಾವಣಾ ಆಯೋಗ ಅದನ್ನು ಎಲ್ಲ ಪಕ್ಷದವರ ಚರ್ಚಿಸಿದೆ. ಆಗಲೂ ವಿರೋಧ ವ್ಯಕ್ತಪಡಿಸಿಲ್ಲ. ಸಂಸತ್‌ನಲ್ಲಿ ಪ್ರಧಾನಿ ಅದನ್ನು ಪ್ರಸ್ತಾವ ಮಾಡಿದಾಗ ವಿರೋಧ ಯಾಕೆ’ ಎಂದು ಪ್ರಶ್ನಿಸಿದರು.

‘ಬಿಜೆಪಿಗೆ ಆಡಳಿತ ನಡೆಸಲು ಜನರೇ ನೀಡಿದ ಜನಾದೇಶವನ್ನು ಕಾಂಗ್ರೆಸ್‌ ಒಪ್ಪುತ್ತಿಲ್ಲ. ಜನರ ಪರವಾಗಿಯೇ ನಾವು ಆಡಳಿತ ನಡೆಸುತ್ತ, ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ ಎನ್ನುವ ಮಾನಸಿಕ ಸಿನಿಕತೆ ಅವರಲ್ಲಿ ಮನೆ ಮಾಡಿದೆ’ ಎಂದು ಆರೋಪಿಸಿದರು.

‘ಕಳೆದ ಬಾರಿಯ ಸಂಸತ್ ಅಧಿವೇಶನ ಸಂದರ್ಭದಲ್ಲಿ ಪ್ರತಿಪಕ್ಷದವರು ಟೇಬಲ್‌ ಮೇಲೆ ಹತ್ತಿದರು, ಟಿ.ವಿ. ಎತ್ತಿ ಎಸೆಯಲು ಮುಂದಾದರು, ಮಾರ್ಷಲ್‌ ಮೇಲೆ ಹಲ್ಲೆಗೆ ಯತ್ನಿಸಿದರು. ಅದಕ್ಕಾಗಿಯೇ ಈ ಬಾರಿಯ ಅಧಿವೇಶನಕ್ಕೆ ಅವರನ್ನು ನಿರ್ಬಂಧಿಸಲಾಗಿತ್ತು. ತಮ್ಮ ವರ್ತನೆಗೆ ಸದನದಲ್ಲಿ ವಿಷಾದ ವ್ಯಕ್ತಪಡಿಸಿ ಎಂದು ವಿನಂತಿಸಿಕೊಂಡರೂ ಅದನ್ನು ಮಾಡಲಿಲ್ಲ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ದಿನಾಚರಣೆಯನ್ನು ಸಹ ಬಹಿಷ್ಕರಿಸಿದರು. ಈ ಹಿಂದೆ ಸ್ವತಃ ನೆಹರೂ ಅವರೇ ಅಂಬೇಡ್ಕರ್ ವಿರುದ್ಧ ‌ಚುನಾವಣಾ ಪ್ರಚಾರಕ್ಕೆ ಹೋಗಿದ್ದರು. ಹಿಂದಿನಿಂದಲೂ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್‌ ಅಗೌರವ ತೋರುತ್ತಿದೆ. ಈಗಲೂ ಅದೇ ಮುಂದುವರಿಸಿದೆ’ ಎಂದು ಟೀಕಿಸಿದರು.

‘ರಾಜ್ಯದಲ್ಲಿ ಮತಾಂತರ ನಿಷೇಧ ಮಸೂದೆಗೆ ವಿಧಾನ ಪರಿಷತ್‌ನಲ್ಲಿಬಹುಮತ ಇಲ್ಲದ ಕಾರಣ ಮಂಡನೆ ಆಗಿಲ್ಲ. ಮುಂಬರುವ ದಿನಗಳಲ್ಲಿ ಅದು ಮಂಡನೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT