ಭಾನುವಾರ, ಜುಲೈ 3, 2022
22 °C

ಜನಪ್ರತಿನಿಧಿಗಳ ಗೌರವ ಧನ, ಭತ್ಯೆ ಹೆಚ್ಚಳಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೋವಿಡ್‌ನಿಂದಾಗಿ ಜನರು ಸಂಕಷ್ಟ ಎದುರಿಸುತ್ತಿರುವಾಗ ಶಾಸಕರ, ಸಚಿವರ ಗೌರವ ಧನ ಹಾಗೂ ಭತ್ಯೆ ಹೆಚ್ಚಳ ಮಾಡಿರುವುದು ಸರಿಯಲ್ಲ. ಅದನ್ನು ಕೂಡಲೇ ರದ್ದುಪಡಿಸಬೇಕು ಎಂದು ಆಮ್‌ ಆದ್ಮಿ ಪಾರ್ಟಿ ಆಗ್ರಹಿಸಿದೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಂತಕುಮಾರ ಬುಗಡಿ, ಯಾವುದೇ ಚರ್ಚೆ ಮಾಡದೆ ಗೌರವ ಧನ, ಭತ್ಯೆ ಹೆಚ್ಚಳ ಮಾಡಿರುವುದು ಸರಿಯಲ್ಲ. ಕೋವಿಡ್‌ನಿಂದ ಜನರು ಕೆಲಸ ಕಳೆದುಕೊಂಡಿರುವಾಗ ಏರಿಕೆ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದರು.

ಬಿಜೆಪಿ, ಕಾಂಗ್ರೆಸ್‌ ಕೃಷಿ ಕಾಯ್ದೆ ರದ್ದು ಪಡಿಸುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿಲ್ಲ. 7 ಸಾವಿರ ಅತಿಥಿ ಉಪನ್ಯಾಸಕರು ನೌಕರಿ ಕಳೆದುಕೊಂಡಿದ್ದಾರೆ. ಈ ಬಗ್ಗೆಯೂ ಚರ್ಚೆ ಮಾಡಿಲ್ಲ. ಜನರ ಸಾಮಾನ್ಯರ ಸಮಸ್ಯೆಗಳನ್ನು ಬದಿಗಿಟ್ಟು ತಮ್ಮ ಹಿತಾಸಕ್ತಿ ಕಾಯ್ದುಕೊಂಡಿದ್ದಾರೆ ಎಂದು ಟೀಕಿಸಿದರು.

ಡೀಸೆಲ್‌, ಪೆಟ್ರೋಲ್‌, ದಿನ ಬಳಕೆ ವಸ್ತುಗಳ ಬೆಲೆ ಹೆಚ್ಚಳದಿಂದ ಜನರು ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಉಕ್ರೇನ್‌–ರಷ್ಯಾ ನಡುವೆ ಯುದ್ಧ ಆರಂಭವಾಗಿದ್ದು, ಅಡುಗೆ ಅನಿಲ ಬೆಲೆಯೂ ಏರಿಕೆಯಾಗಲಿದೆ. ಇದಕ್ಕೆ ಸರ್ಕಾರದ ಬಳಿ ಪರಿಹಾರವಿದೆಯೇ ಎಂದು ಪ್ರಶ್ನಿಸಿದರು.

ಜನಪರ ಸಮಸ್ಯೆಗಳ ಪರಿಹಾರಕ್ಕೆ ಹಣಕಾಸಿನ ತೊಂದರೆ ಇದೆ ಎನ್ನುವವರು ತಮ್ಮ ಗೌರವ ಧನ ಏರಿಕೆಗೆ ಮುಂದಾಗಿದ್ದು ಸರಿಯಲ್ಲ ಎಂದರು.

ಉಪಾಧ್ಯಕ್ಷ ವಿಕಾಸ ಸೊಪ್ಪಿನ ಮಾತನಾಡಿ, ಗೌರವ ಧನ ಹೆಚ್ಚಳ ನಾಚಿಕಗೇಡಿನ ಸಂಗತಿಯಾಗಿದೆ. ಶಾಸಕರಿಗೆ ನೇರ, ಪರೋಕ್ಷವಾಗಿ ಆರ್ಥಿಕ ಸಂಪನ್ಮೂಲ ಸಂಗ್ರಹ ಮಾಡುವುದು ಎಲ್ಲರಿಗೂ ಗೊತ್ತಿದೆ. ಏರಿಕೆ ಮಾಡಿರುವುದನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಆರ್ಥಿಕ ಸಂಕಷ್ಟಕ್ಕೆ ಒಳಗಾದವರಿಗೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವ ಮೂಲಕ ಅವರ ನೆರವಿಗೆ ಸರ್ಕಾರ ಬರಬೇಕು ಎಂದು ಆಗ್ರಹಿಸಿದರು.

ಉಪಾಧ್ಯಕ್ಷ ಪ್ರವೀಣ ನಡಕಟ್ಟಿನ, ಜಿಲ್ಲಾ ವಕ್ತಾರ ರೇವಣಸಿದ್ದಪ್ಪ ಹುಬ್ಬಳ್ಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು