ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಕಮಲದ ‘ಕೊಳ‘ದಲ್ಲಿ ಕಂಪನ

‘ಅವಮಾನ’ದ ಅಸ್ತ್ರ ಬಳಸಿ ಬಿಜೆಪಿಗೆ ಸಡ್ಡು ಹೊಡೆದ ಶೆಟ್ಟರ್‌ ಭವಿಷ್ಯ ಪಣಕ್ಕೆ! * ಬೆವರು ಹರಿಸುತ್ತಿದೆ ಕೇಸರಿ ಪಡೆ
Published 7 ಮೇ 2023, 2:51 IST
Last Updated 7 ಮೇ 2023, 2:51 IST
ಅಕ್ಷರ ಗಾತ್ರ

ಶ್ರೀಕಾಂತ ಕಲ್ಲಮ್ಮನವರ

ಹುಬ್ಬಳ್ಳಿ: ಅದು 1990ರ ಅಕ್ಟೋಬರ್‌ ಸಮಯ. ಅಂದಿನ ಮುಖ್ಯಮಂತ್ರಿ, ಕಾಂಗ್ರೆಸ್‌ನ ವೀರೇಂದ್ರ ಪಾಟೀಲ ಅವರನ್ನು ಪ್ರಧಾನಿ ರಾಜೀವ್‌ ಗಾಂಧಿ ಏಕಾಏಕಿ ಪದಚ್ಯುತಗೊಳಿಸಿದ್ದರು. ಇದು ‘ಸಮುದಾಯಕ್ಕೆ ಮಾಡಿದ ಅವಮಾನ’ವೆಂದು ಲಿಂಗಾಯತರು ಸಿಡಿದೆದ್ದು, ಬೇರೆ ಪಕ್ಷಗಳೆಡೆ ವಾಲಿದರು...

ಇಂತಹದ್ದೇ ವಾತಾವರಣವನ್ನು ಪುನರ್‌ಸೃಷ್ಟಿಸಲು ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಲಿಂಗಾಯತ ಸಮುದಾಯದ ಜಗದೀಶ ಶೆಟ್ಟರ್‌ ಯತ್ನಿಸುತ್ತಿದ್ದಾರೆ. ‘ಅವಮಾನ’ದ ಅಸ್ತ್ರ ಬಳಸಿ ಲಿಂಗಾಯತ ಸಮುದಾಯವನ್ನು ಬಿಜೆಪಿಯಿಂದ ಪುನಃ ಕಾಂಗ್ರೆಸ್‌ ಕಡೆ ಕರೆತರಲು ಹೊರಟಿದ್ದಾರೆ. ಇದರಿಂದಾಗಿ ಕ್ಷೇತ್ರವು ರಾಜ್ಯ, ರಾಷ್ಟ್ರದ ಗಮನ ಸೆಳೆದಿದೆ. 

ಇದಕ್ಕೂ ಮುಂಚೆ ಅವರು ಆರು ಸಲ ಸತತವಾಗಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಏಳನೇ ಬಾರಿಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿಕೊಂಡರು. ಆದರೆ, ಬಿಜೆಪಿ ವರಿಷ್ಠರು ಟಿಕೆಟ್‌ ನಿರಾಕರಿಸಿದರು. ‘ಇದು ತಮಗಲ್ಲ, ಸಮುದಾಯಕ್ಕೆ ಮಾಡಿದ ಅನ್ಯಾಯ. ಬಿ.ಎಸ್‌.ಯಡಿಯೂರಪ್ಪ ಅವರನ್ನು ಸಿ.ಎಂ. ಸ್ಥಾನದಿಂದ ಕೆಳಗಿಳಿಸಲಾಗಿದೆ. ಪಕ್ಷದಲ್ಲಿ ಲಿಂಗಾಯತ ಸಮುದಾಯವನ್ನು ಮೂಲೆಗುಂಪು ಮಾಡಲಾಗುತ್ತಿದೆ’ ಎಂದು ಜನಾಭಿಪ್ರಾಯ ರೂಪಿಸಲು ಅವರು ಯತ್ನಿಸುತ್ತಿದ್ದಾರೆ.

ಇದಕ್ಕೆ ತಡೆಯೊಡ್ಡಲು ಪ್ರತಿಸ್ಪರ್ಧಿ ಬಿಜೆಪಿ ಹಲವು ತಂತ್ರ ಹೂಡಿದೆ. ಶೆಟ್ಟರ್‌ ಅವರ ಸಮುದಾಯಕ್ಕೆ ಸೇರಿದ ಮಹೇಶ ಟೆಂಗಿನಕಾಯಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಎಲ್ಲ ಅಧಿಕಾರ ಅನುಭವಿಸಿ, ಪಕ್ಷದಿಂದ ಹೊರಹೋಗುವ ಮೂಲಕ ಶೆಟ್ಟರ್‌ ದ್ರೋಹ ಬಗೆದಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ಶೆಟ್ಟರ್‌ ಗೆಲ್ಲಬಾರದು ಎಂದು ಅಮಿತ್‌ ಶಾ, ಜೆ.ಪಿ. ನಡ್ಡಾ ಫರ್ಮಾನು ಹೊರಡಿಸಿದ್ದಾರೆ. ಇದು ಶೆಟ್ಟರ್‌ ವರ್ಸಸ್‌ ಬಿಜೆಪಿ ಕಣವಾಗಿ ಮಾರ್ಪಟ್ಟಿದೆ.

ಲಿಂಗಾಯತ ಸಮುದಾಯದ ಅಗ್ರಗಣ್ಯ ನಾಯಕರೆನಿಸಿದ ಬಿ.ಎಸ್‌. ಯಡಿಯೂರಪ್ಪ ಅವರನ್ನೂ ಶೆಟ್ಟರ್‌ ವಿರುದ್ಧ ಪ್ರಚಾರ ನಡೆಸಲು ಬಳಸಿಕೊಂಡಿದೆ. ಯಡಿಯೂರಪ್ಪ ಅವರ ಟೀಕೆಯನ್ನು ಆಶೀರ್ವಾದವೆಂದು ಸ್ವೀಕರಿಸುವೆ ಎಂದು ಹೇಳಿ ಶೆಟ್ಟರ್‌ ಜಾಣ ನಡೆ ಪ್ರದರ್ಶಿಸಿದ್ದಾರೆ. ಸಮಾಜದಲ್ಲಿರುವ ಲಿಂಗಾಯತ ಮತಗಳು ವಿಭಜನೆಯಾಗದಂತೆ ತಡೆಯುವ ತಂತ್ರ ಇದಾಗಿದೆ. ಮೋದಿ ವಿರುದ್ಧ ಕೂಡ ಒಂದೂ ಮಾತನಾಡದಿರುವುದು ಗಮನಾರ್ಹ.

ಕಾಂಗ್ರೆಸ್‌ಗೆ ಆನೆಬಲ:

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಾದ ರಜತ್‌ ಉಳ್ಳಾಗಡ್ಡಿಮಠ, ಅನಿಲಕುಮಾರ ಪಾಟೀಲ ಸೇರಿದಂತೆ ಹಲವರು ಶೆಟ್ಟರ್‌ ಸೇರ್ಪಡೆಯನ್ನು ಸ್ವಾಗತಿಸಿದ್ದು, ಅವರ ಪರ ಪ್ರಚಾರ ಕೂಡ ಮಾಡುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿಯ ಮಾಜಿ ನಿರ್ದೇಶಕ ಮಲ್ಲಿಕಾರ್ಜುನ ಸಾವಕಾರ, ವಿಶ್ವ ಹಿಂದೂ ಪರಿಷತ್‌ನ ಉತ್ತರ ಕರ್ನಾಟಕ ಪ್ರಾಂತದ ಉಪಾಧ್ಯಕ್ಷ ಶಾಂತಣ್ಣ ಕಡಿವಾಳ ಅವರನ್ನು ಶೆಟ್ಟರ್‌ ಕಾಂಗ್ರೆಸ್‌ಗೆ ಕರೆತಂದಿದ್ದಾರೆ. ಇದು ಕಾಂಗ್ರೆಸ್‌ಗೆ ಆನೆ ಬಲ ತಂದುಕೊಟ್ಟಂತಾಗಿದೆ.

ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಾದ ದಲಿತರು, ಮುಸ್ಲಿಮರು, ಕ್ರೈಸ್ತರು, ಕುರುಬರ ಜೊತೆ ಲಿಂಗಾಯತ ಸಮುದಾಯದ ಮತಗಳು ಸೇರಿಕೊಂಡರೆ ಶೆಟ್ಟರ್‌ ಸುಲಭವಾಗಿ ದಡ ಸೇರಬಹುದು. ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ (ಎಸ್‌.ಎಸ್‌.ಕೆ) ಸಮಾಜದ ಮತದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಇವರಲ್ಲಿ ಬಹುತೇಕರು ಬಿಜೆಪಿ ಬೆಂಬಲಿಗರಾಗಿದ್ದಾರೆ. ಇವರನ್ನು ತಮ್ಮ ಕಡೆ ಸೆಳೆಯಲು ಶೆಟ್ಟರ್‌ ಬೆವರು ಹರಿಸುತ್ತಿದ್ದಾರೆ.

ಕಳೆದ ಮೂರು ಚುನಾವಣೆಯಲ್ಲಿ ಕಾಂಗ್ರೆಸ್ ಮತ ಗಳಿಕೆ ಪ್ರಮಾಣ ಏರಿಕೆಯಾಗಿದೆ. 2008ರಲ್ಲಿ ಶಂಕರಣ್ಣ ಮುನವಳ್ಳಿ 32,738 (ಶೇ 30.51), 2013ರಲ್ಲಿ ಡಾ. ಮಹೇಶ ನಾಲವಾಡ 40,447 (ಶೇ 34.48), 2018ರಲ್ಲಿ ಡಾ.ಮಹೇಶ ನಾಲವಾಡ 54,488 (ಶೇ 36.89) ಮತ ಪಡೆದಿದ್ದರು. ಇದೇ ಟ್ರೆಂಡ್‌ ಮುಂದುವರಿದರೆ ಶೆಟ್ಟರ್‌ಗೆ ‘ಪ್ಲಸ್‌ ಪಾಯಿಂಟ್‌’ ಆಗಲಿದೆ.

ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿರುವ ಬಿಜೆಪಿಯ ಮಹೇಶ ಟೆಂಗಿನಕಾಯಿ ಅವರು ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ಬಿ.ಎಸ್‌. ಯಡಿಯೂರಪ್ಪ, ಪ್ರಲ್ಹಾದ ಜೋಶಿ, ಬಸವರಾಜ ಬೊಮ್ಮಾಯಿ ಅವರನ್ನು ನೆಚ್ಚಿಕೊಂಡಿದ್ದಾರೆ. ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರ ಪಡೆಯನ್ನು ಅವಲಂಬಿಸಿದ್ದಾರೆ. ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿಗೆ ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕಾರಣವೆಂದು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ವ್ಯಕ್ತಿಗಿಂತ ಪಕ್ಷ ಮುಖ್ಯ ಎನ್ನುವ ಕಟ್ಟಾ ಬಿಜೆಪಿ ಬೆಂಬಲಿಗರು ಲಿಂಗಾಯತ ಸಮುದಾಯದಲ್ಲಿದ್ದಾರೆ. ಇವರು ಎಷ್ಟರ ಮಟ್ಟಿಗೆ ಕೈಹಿಡಿಯುತ್ತಾರೆ ಎನ್ನುವುದರ ಮೇಲೆ ಟೆಂಗಿನಕಾಯಿ ಭವಿಷ್ಯ ನಿರ್ಧಾರವಾಗಲಿದೆ.

ಶೆಟ್ಟರ್‌, ಮೆಣಸಿನಕಾಯಿ ಜೊತೆ ಕಣದಲ್ಲಿ 16 ಅಭ್ಯರ್ಥಿಗಳಿದ್ದಾರೆ. ಬಿಜೆಪಿ– ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇದೆ.

ಮಹೇಶ ಟೆಂಗಿನಕಾಯಿ
ಮಹೇಶ ಟೆಂಗಿನಕಾಯಿ
ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ಕ್ಷೇತ್ರ
ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT