ಶನಿವಾರ, ಡಿಸೆಂಬರ್ 14, 2019
21 °C

ಕಸ ವಿಲೇವಾರಿ ಮಾಡಿಸ್ರೀ, ರಸ್ತೆ ಗುಂಡಿ ಮುಚ್ಚಿಸ್ರೀ...

- Updated:

ಅಕ್ಷರ ಗಾತ್ರ : | |

Deccan Herald

ಉದ್ಯಾನಗಳ ಅಭಿವೃದ್ಧಿ ಮಾಡಿ ನಿರ್ವಹಣೆ ಮಾಡದಿದ್ದರೆ, ಹೆಚ್ಚಿನ ಪ್ರಯೋಜನವಾಗುವುದಿಲ್ಲ. ಉದ್ಯಾನಗಳಲ್ಲಿ ನಡೆಯುವ ಚಟುವಟಿಕೆಗಳಿಂದ ಆದಾಯ ಬರುವಂತಾದರೆ ಅವುಗಳ ನಿರ್ವಹಣೆ ಸುಲಭವಾಗಲಿದೆ. ಆ ನಿಟ್ಟಿನಲ್ಲಿ ಸಮಗ್ರ ಯೋಜನೆಯೊಂದನ್ನು ರೂಪಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಶಕೀಲ್‌ ಅಹ್ಮದ್ ಹೇಳಿದರು.

‘ಪ್ರಜಾವಾಣಿ’ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಫೋನ್‌ ಇನ್‌’ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಮಾತನಾಡಿದ ಅವರು, ‘ಸ್ಮಾರ್ಟ್‌ ಸಿಟಿ’ ಯೋಜನೆಯ ವ್ಯವಸ್ಥಾಪಕ ನಿರ್ದೇಶಕನಾಗಿದ್ದಾಗ ಬೆಂಗೇರಿ ಸಂತೆ ಮೈದಾನದಲ್ಲಿ ‘ಮಲ್ಟಿ ಯುಟಿಲಿಟಿ ಸೆಂಟರ್‌’ ನಿರ್ಮಿಸಲು ಯೋಜನೆ ರೂಪಿಸಿದ್ದೆ. ಅಲ್ಲಿ ಸಂತೆ ನಡೆಸಬಹುದು. ವಸ್ತು ಪ್ರದರ್ಶನ, ಕಾರ್ಯಕ್ರಮಗಳನ್ನು ಮಾಡಬಹುದು. ಇದರಿಂದ ಉದ್ಯಾನ ನಿರ್ವಹಣೆ ಸಮಿತಿಗೆ ಆದಾಯ ಬರುತ್ತದೆ. ನಿರ್ವಹಣೆ ಸುಲಭವಾಗುತ್ತದೆ’ ಎಂದರು.

ಅದೇ ಮಾದರಿಯಲ್ಲಿ ಉಣಕಲ್‌ ಕೆರೆಯನ್ನೂ ಅಭಿವೃದ್ಧಿ ಪಡಿಸಲಾಗುವುದು. ಉದ್ಯಾನ ಬಹು ಬಳಕೆಯಾಗುವಂತಹ ಯೋಜನೆಯಾಗಿದೆ ಎಂದು ತಿಳಿಸಿದರು.

ದೂರವಾಣಿ ಕರೆ ಮಾಡಿದ್ದ ಸಾರ್ವಜನಿಕರಲ್ಲಿ ಹಲವರು ಉದ್ಯಾನಗಳ ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದರು. ಅವಳಿ ನಗರದಲ್ಲಿ 275 ಉದ್ಯಾನಗಳಿವೆ. ಅಭಿವೃದ್ಧಿಗೆ ₹3,000 ಕೋಟಿ ಬೇಕಾಗುತ್ತದೆ. ಸರ್ಕಾರದ ನೆರವಿನ ಜತೆಗೆ ವಿವಿಧ ಕಂಪನಿಗಳ, ಸಂಘ–ಸಂಸ್ಥೆಗಳ ನೆರವು ಪಡೆಯಲಾಗುವುದು. ಮಾದರಿಯಾಗಿ ಉದ್ಯಾನ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಉದ್ಯಾನಗಳ ಲ್ಯಾಂಡ್‌ ಸ್ಕೇಪಿಂಗ್‌ ಮಾಡಲಾಗುವುದು. ಓಪನ್‌ ಜಿಮ್‌ಗಳಿರಲಿವೆ. ಅದರ ಜತೆಗೆ ಅಲ್ಲಿಯೇ ಶುಲ್ಕ ಪಾವತಿಸುವ ವ್ಯಾಯಾಮ ಮಾಡಬಹುದಾದ ಜಿಮ್‌ ಒಂದನ್ನು ತೆರೆಯಲಾಗುವುದು. ಜತೆಗೆ ಕಾರ್ಯಕ್ರಮಗಳ ಆಯೋಜನೆಗೆ ಅನುಕೂಲ ಮಾಡಿಕೊಡಲಾಗುವುದು. ಸಮಿತಿ ರಚಿಸಿ, ನಿರ್ವಹಣೆಯ ಜವಾಬ್ದಾರಿಯನ್ನು ಅದಕ್ಕೇ ವಹಿಸಲಾಗುವುದು ಎಂದು ಹೇಳಿದರು.

ಬಡಾವಣೆಗಳಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ, ಕಾಣದ ರಸ್ತೆ ದುರಸ್ತಿ, ಹೊಂಡ ಗುಂಡಿಗಳು, ಒಳಚರಂಡಿ ಸಮಸ್ಯೆಗಳ ಬಗ್ಗೆ ಬಹಳಷ್ಟು ಸಾರ್ವಜನಿಕರು ಗಮನಸೆಳೆದರು.

‘ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಿಂದ ಅವಳಿ ನಗರದ ಜನತೆಯ ಸಮಸ್ಯೆಗಳೇನು ಎಂಬುದರ ಚಿತ್ರಣ ದೊರೆತಿದೆ. ಇಲ್ಲಿಯವರೆಗೆ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ಯಾಗುವ ಸಮಸ್ಯೆಗಳ ಪರಿಹಾರಕ್ಕೆ ನಮ್ಮ ಕಾರ್ಯ ಸೀಮಿತವಾಗಿತ್ತು. ಜನರ ಸಮಸ್ಯೆ ಆಲಿಸಲು ವೇದಿಕೆ ಕಲ್ಪಿಸಿದ ‘ಪ್ರಜಾವಾಣಿ’ಗೆ ಥ್ಯಾಂಕ್ಸ್‌ ಎಂದರು.

ಬೆಳಿಗ್ಗೆ 10 ಗಂಟೆಯಿಂದ ‘ಫೋನ್‌ ಇನ್‌’ ಇದ್ದರೂ 9.45ಕ್ಕೆ ಕಚೇರಿಗೆ ಬಂದರು. ಅಷ್ಟೊತ್ತಿಗಾಗಲೇ ಬರಲಾರಂಭಿಸಿದ್ದ ಕರೆಗಳನ್ನು ಸ್ವೀಕರಿಸಿ ಮಾತನಾಡಲಾರಂಭಿಸಿದರು. ತಾಳ್ಮೆಯಿಂದಲೇ ಪ್ರಶ್ನೆಗಳನ್ನು ಆಲಿಸಿ, ಉತ್ತರಿಸಿದರು. ಕೂಡಲೇ ಕ್ರಮಕ್ಕೆ ಅಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಸತತ ಒಂದೂವರೆ ಗಂಟೆ ಕಾಲ ಉತ್ತರಿಸಿದರು. ಪ್ರಶ್ನೆಗಳ ಸುರಿಮಳೆ ನಿಂತಿರಲಿಲ್ಲ. ಮತ್ತೊಂದು ಸಭೆಯಲ್ಲಿ ಭಾಗವಹಿಸಬೇಕಾಗಿದ್ದರಿಂದ ಇನ್ನೊಮ್ಮೆ ಸಮಸ್ಯೆಗಳನ್ನು ಆಲಿಸುವ ಎನ್ನುತ್ತಾ ಹೊರಟರು.

*ಬಾಲಕೃಷ್ಣ ವೇರ್ಣೇಕರ್, ಮಹಾಲಕ್ಷ್ಮಿ ಬಡಾವಣೆ, ಗೋಕುಲ ರಸ್ತೆ (ವಾ.ನಂ.36): 22 ವರ್ಷಗಳಿಂದ ಈ ಬಡಾವಣೆಯಲ್ಲಿ ವಾಸವಾಗಿದ್ದೇನೆ. ಆದರೆ ಈವರೆಗೂ ಇಲ್ಲಿನ (ಮೊದಲನೇ ಅಡ್ಡರಸ್ತೆ) ರಸ್ತೆ ಡಾಂಬರು ಕಂಡಿಲ್ಲ, ಸರಿಯಾಗಿ ಕಸ ತೆಗೆಯುವುದಿಲ್ಲ. ಬೋರ್ ಇಲ್ಲ, ನೀರು ಕೂಡ ಸರಿಯಾಗಿ ಬರುವುದಿಲ್ಲ. ಕಾರ್ಪೊರೇಟರ್‌ ಭೇಟಿ ನೀಡಿದಾಗ, ಅನುದಾನ ಇಲ್ಲ ಅಂತಾರೆ...ಇಲ್ಲಿನ ಸಮಸ್ಯೆ ಕೂಡಲೇ ಬಗೆಹರಿಸಿ.
ಆಯುಕ್ತ: ಶೀಘ್ರವೇ ನಮ್ಮ ಎಂಜಿನಿಯರ್‌ ಸ್ಥಳ ಪರಿಶೀಲನೆ ಮಾಡಲಿದ್ದಾರೆ. ಕಸದ ಸಮಸ್ಯೆ ಕೂಡ ಪರಿಹರಿಸ್ತೀವಿ.

* ಗುರುರಾಜ ಕುಲಕರ್ಣಿ, ನವನಗರ: ನವನಗರದಿಂದ ಪ್ರಜಾನಗರಕ್ಕೆ ಸಂಪರ್ಕ ಕಲ್ಪಿಸುವ ಒಂದು ಕಿಮೀ ಉದ್ದದ ಕಚ್ಚಾರಸ್ತೆಯನ್ನು ದುರಸ್ತಿ ಮಾಡಿಕೊಡಿ ಎಂದು ಕಳೆದ 10 ವರ್ಷಗಳಿಂದ ವಿನಂತಿ ಮಾಡಿಕೊಳ್ಳುತ್ತಿದ್ದೇವೆ. ಸಂಸದರಿಗೆ, ಶಾಸಕರಿಗೆ ಸೇರಿದಂತೆ ಎಲ್ಲರಿಗೂ ಮನವಿ ಕೊಟ್ಟಿದ್ದೇವೆ ಪ್ರಯೋಜನ ಆಗಿಲ್ಲ.
ಆಯುಕ್ತ: ಪರಿಶೀಲನೆ ಮಾಡಿ ಶೀಘ್ರವೇ ಕ್ರಮ ಕೈಗೊಳ್ತೇನೆ.

*ಎಂ.ಎಚ್‌.ವಾಲಿ,ಮಾಕಡವಾಲಾ ಪ್ಲಾಟ್‌:ಇಲ್ಲಿ 2–3 ಖಾಲಿ ಸೈಟ್‌ ಗಳಿವೆ. ಆದರೆ ಸ್ವಚ್ಛವಾಗಿಲ್ಲ. ಕೊಚ್ಚೆ ನೀರನ್ನು ಹರಿಯಬಿಡಲಾಗುತ್ತಿದೆ. ಮಾಲೀಕರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ...
ಆಯುಕ್ತ: ಶೀಘ್ರವೇ ಇದನ್ನು ಪರಿಹರಿಸಲು ಕ್ರಮ ಕೈಗೊಳ್ತೇನೆ.

* ಜಮೀರ ಸಣ್ಣಕ್ಕಿ, ಉದಯಗಿರಿ: ಬೀದಿ ದೀಪ ಹಾಳಾಗಿ ಎರಡು ತಿಂಗಳಾಯಿತು. ದೂರು ಕೊಟ್ಟರೂ ಯಾರೂ ಕೂಡ ಗಮನ ಹರಿಸುತ್ತಿಲ್ಲ. ದಾರಿಯುದ್ದಕ್ಕೂ ಗಿಡಗಂಟಿಗಳು ಹೆಚ್ಚಾಗಿವೆ. ಶಾಲಾ ಮಕ್ಕಳಿಗೆ ಓಡಾಡಲೂ ತೊಂದರೆ ಆಗಿದೆ.
ಆಯುಕ್ತ: ಆದ್ಯತೆ ಮೇಲೆ ಬೀದಿ ದೀಪ ಹಾಕಿಸಿಕೊಡ್ತೀನಿ.

*ಅಲ್ತಾಫ್‌ ಕ್ಯಾಲಕೊಂಡ, ಆನಂದ ನಗರ(ವಾರ್ಡ್ ನಂ–39): ಚರಂಡಿ ಕಾಂಕ್ರೀಟೀಕರಣ ಆಗಿಲ್ಲ. ಸ್ವಚ್ಛತೆ ಇಲ್ಲ, ಚರಂಡಿ ನೀರು ಎಲ್ಲೆಡೆ ಉಕ್ಕಿ ಹರಿಯುತ್ತವೆ. ಇರುವ ಚರಂಡಿಯಲ್ಲಿಯೇ ಎಲ್ಲರೂ ಕಸ ತಂದು ಸುರಿಯುತ್ತಾರೆ...
ಆಯುಕ್ತ: ಕಸದ ಗಾಡಿ ಬರುವ ಹಾಗೆ ಮಾಡಿ ಅಲ್ಲಿನ ಗಟಾರು, ರಸ್ತೆ ಸರಿಪಡಿಸಲು ನಾಳೆಯೇ ಕ್ರಮ ಕೈಗೊಳ್ಳುತ್ತೇನೆ.

*ಸಂಗಪ್ಪ ಚೌಡಪ್ಪನವರ, ಮಾಜಿ ಸೈನಿಕ, ಮಯೂರ ಪಾರ್ಕ್, ಹುಬ್ಬಳ್ಳಿ.: ರಸ್ತೆಯ ಅಕ್ಕಪಕ್ಕದಲ್ಲಿ ಕಟ್ಟಡ ನಿರ್ಮಿಸುತ್ತಿರುವವರು, ನಮ್ಮ ಮನೆ ಎದುರಿನ ರಸ್ತೆಯನ್ನು ಅತಿಕ್ರಮಿಸಿ ಕೊಳವೆ ಬಾವಿ ತೆಗೆದಿದ್ದಾರೆ. ಅಲ್ಲದೆ, ಈಗ ಮತ್ತೊಂದು ಬಾವಿ ತೆಗೆಯಲು ರಸ್ತೆಯನ್ನು ಗುರುತಿಸಿದ್ದಾರೆ. ಇದರಿಂದಾಗಿ, ಓಡಾಡಲು ರಸ್ತೆಯೇ ಇಲ್ಲದಂತಾಗಿದೆ. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಕಟ್ಟಡ ನಿರ್ಮಿಸುತ್ತಿರುವವರನ್ನು ಕೇಳಲು ಹೋದರೆ, ಜಗಳಕ್ಕೆ ಬರುತ್ತಾರೆ. ಇದು ಬಡಾವಣೆಯ ಅನೇಕರ ಸಮಸ್ಯೆಯಾಗಿದ್ದು, ಕೂಡಲೇ ಬಗೆಹರಿಸಿ.
ಆಯುಕ್ತ: ಸ್ಥಳಕ್ಕೆ ಇಂದೇ ಸ್ಥಳೀಯ ವಲಯ ಕಚೇರಿಯ ಸಹಾಯಕ ಆಯುಕ್ತರನ್ನು ಕಳುಹಿಸುವೆ. ಕೂಡಲೇ ನಾನೂ ಭೇಟಿ ನೀಡಿ ಪರಿಶೀಲಿಸುವೆ. ಮಾಜಿ ಸೈನಿಕರಾದ ನಿಮ್ಮ ಸಮಸ್ಯೆಗೆ ಖಂಡಿತ ಸ್ಪಂದಿಸಿ ಪರಿಹರಿಸುವೆ.

* ವಿ.ಆರ್. ದೇಶಪಾಂಡೆ, ರಾಧಾಕೃಷ್ಣನಗರ, ಧಾರವಾಡ.: ಇಲ್ಲಿನ ಶ್ರೀನಗರ ವೃತ್ತದಲ್ಲಿ ಹುಬ್ಬಳ್ಳಿ–ಧಾರವಾಡ ಒನ್ ಕೇಂದ್ರ ತೆರೆಯಲು ಕೋರಿ 2015ರಲ್ಲಿ ಸ್ಥಳೀಯ ಶಾಸಕರಿಗೆ ಮನವಿ ಕೊಟ್ಟಿದ್ದೆ. ತಕ್ಷಣ ಸ್ಪಂದಿಸಿದ್ದ ಅವರು, ಪಾಲಿಕೆಯ ಹಿಂದಿನ ಆಯುಕ್ತರಿಗೆ ಸೂಚಿಸಿದ್ದರು. ಆದರೆ, ಇದುವರೆಗೆ ತೆರೆದಿಲ್ಲ. ಶ್ರೀನಗರ ವೃತ್ತದಲ್ಲಿ ಸರ್ಕಾರಿ ಸ್ವಾಮ್ಯದ ಮಲೆನಾಡು ಅಭಿವೃದ್ಧಿ ಬಿಲ್ಡಿಂಗ್ ಸೇರಿದಂತೆ, ಪಾಲಿಕೆಗೆ ಸೇರಿದ ಜಾಗವೂ ಇದೆ. ಕೂಡಲೇ ಅಲ್ಲಿ ಹುಬ್ಬಳ್ಳಿ ಒನ್ ಕೇಂದ್ರ ತೆರೆಯಿರಿ.
ಆಯುಕ್ತ: ಹುಬ್ಬಳ್ಳಿ–ಧಾರವಾಡ ಒನ್ ಕೇಂದ್ರಕ್ಕಾಗಿ ನೀವು ಹೇಳಿದ ಕಟ್ಟಡವನ್ನು ಪರಿಶೀಲಿಸುವೆ. ಒಂದು ವೇಳೆ ಆ ಕಟ್ಟಡದಲ್ಲಿ ಕೇಂದ್ರ ತೆರೆಯಲು ಅವಕಾಶ ಸಿಗದಿದ್ದರೆ, ಅಕ್ಕಪಕ್ಕದಲ್ಲಿರುವ ಪಾಲಿಕೆಗೆ ಸೇರಿದ ಕಟ್ಟಡಗಳು ಅಥವಾ ಸ್ಥಳದಲ್ಲಿ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳುವೆ.

* ಎ.ಟಿ. ಚಂದಾವರ್ಕರ್, ಗೋಕುಲರಸ್ತೆ, ನೆಹರೂನಗರ ಹುಬ್ಬಳ್ಳಿ.: ಮನೆ ಎದುರಿಗೆ ಇರುವ ರಸ್ತೆಯಲ್ಲಿ ನೀರಿನ ಪೈಪ್‌ಲೈನ್‌ ಸೋರಿಕೆಯಾಗಿತ್ತು. ದುರಸ್ತಿಗಾಗಿ ಪಾಲಿಕೆಯವರು ಇತ್ತೀಚೆಗೆ ಜೆಸಿಬಿಯಿಂದ ದೊಡ್ಡದಾದ ಗುಂಡಿ ತೆರೆದು, ಮುಚ್ಚದೆ ಹಾಗೆಯೇ ಬಿಟ್ಟಿದ್ದಾರೆ. ಇದರಿಂದಾಗಿ, ಓಡಾಡುವುದು ತ್ರಾಸದಾಯಕವಾಗಿದೆ. ಈ ಬಗ್ಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಕೂಡಲೇ ಗುಂಡಿ ಮುಚ್ಚಲು ಸಂಬಂಧಪಟ್ಟವರಿಗೆ ಸೂಚಿಸಿ. ಅಲ್ಲದೆ, ಸ್ಥಳೀಯ ವಲಯ ಕಚೇರಿಯಲ್ಲಿ ಅಧಿಕಾರಿಗಳು ಲಂಚ ಪಡೆಯದೇ ಯಾವುದೇ ಕೆಲಸವನ್ನು ಸಹ ಮಾಡುತ್ತಿಲ್ಲ. ಇದಕ್ಕೆ ಅಂಕುಶ ಹಾಕಿ.
ಆಯುಕ್ತ: ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಸ್ಥಳಕ್ಕೆ ಭೇಟಿ ನೀಡಿ ಗುಂಡಿ ಮುಚ್ಚಿಸುತ್ತೇನೆ. ಸಾರ್ವಜನಿಕ ಕೆಲಸಕ್ಕಾಗಿ ಲಂಚ ಪಡೆಯುತ್ತಿರುವ ಅಧಿಕಾರಿಗಳ ಬಗ್ಗೆ ಬಂದಿರುವ ದೂರುಗಳನ್ನು ಪರಿಶೀಲಿಸಿ, ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ.

*ವಿರೂಪಾಕ್ಷ ಮಡಿವಾಳರ, ಭವಾನಿನಗರ, ಹುಬ್ಬಳ್ಳಿ.: ಸ್ಮಾರ್ಟ್‌ ಸಿಟಿ ಸಂಸ್ಥೆಯ ಲೋಗೊ (ಚಿಹ್ನೆ) ಬರೆಯಲು 2016ರಲ್ಲಿ ಅರ್ಜಿ ಕರೆಯಲಾಗಿತ್ತು. ಇದಕ್ಕಾಗಿ ₹ 10 ಸಾವಿರ ಪ್ರೋತ್ಸಾಹಧನ ಕೂಡ ಘೋಷಿಸಲಾಗಿತ್ತು. ಆದರೆ, ಇದುವರೆಗೆ ಎಷ್ಟು ಮಂದಿಗೆ ನೀಡಲಾಗಿದೆ ಎಂಬ ಮಾಹಿತಿ ಇಲ್ಲಿವರೆಗೂ ಸಿಕ್ಕಿಲ್ಲ. ಜತೆಗೆ, ಭವಾನಿನಗರದ ರೈಲ್ವೆ ಸೇತುವೆ ಬಳಿ ತಡೆಗೋಡೆ ನಿರ್ಮಿಸದಿರುವುದರಿಂದ ದನಕರುಗಳು ಅನೇಕ ಬಾರಿ ರೈಲಿಗೆ ಸಿಲುಕಿ ಮೃತಪಟ್ಟಿವೆ. ಹಾಗಾಗಿ, ತಡೆಗೋಡೆ ನಿರ್ಮಿಸಿ ಅಪಘಾತ ತಪ್ಪಿಸಿ.
ಆಯುಕ್ತ: ಸ್ಮಾರ್ಟ್‌ ಸಿಟಿ ಲೋಗೊ ಪ್ರೋತ್ಸಾಹಧನ ಯಾರಿಗೆ ಸಿಕ್ಕಿದೆ ಎಂಬುದರ ಬಗ್ಗೆ ಮಾಹಿತಿ ಪಡೆದು, ನಿಮಗೆ ಕರೆ ಮಾಡಿ ತಿಳಿಸುತ್ತೇನೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು