ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಧಾನಿಗೆ ಕೆಂಪೇಗೌಡರ ಕೊಡುಗೆ ಅನನ್ಯ’

Last Updated 27 ಜೂನ್ 2019, 17:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಬೆಂಗಳೂರು ವೇಗವಾಗಿ ಬೆಳೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿತು’ ಎಂದು ನಿವೃತ್ತ ಪ್ರಾಧ್ಯಾಪಕ ಚಂದ್ರಪ್ಪಗೌಡ ಅಭಿಪ್ರಾಯಪಟ್ಟರು.

ಹುಬ್ಬಳ್ಳಿಯ ಮಿನಿ ವಿಧಾನಸೌಧದಲ್ಲಿ ತಾಲೂಕು ಆಡಳಿತ ಹಾಗೂ ಮಲೆನಾಡು ಒಕ್ಕಲಿಗರ ಸಂಘದ ಸಹಯೋಗದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಉಪನ್ಯಾಸ ನೀಡಿದ ಅವರು, ‘ದೇಶದ ಸಿಲಿಕಾನ್ ಸಿಟಿ, ಉದ್ಯಾನನಗರಿ ಎಂದೆಲ್ಲಾ ಗುರುತಿಸಿಕೊಂಡಿರುವ ಬೆಂಗಳೂರನ್ನು ಕಟ್ಟುವಲ್ಲಿ ಕೆಂಪೇಗೌಡರ ಶ್ರಮ ಹಾಗೂ ತ್ಯಾಗ ಅಪಾರವಾಗಿದೆ’ ಎಂದರು.

‘ಕ್ರಿ.ಶ.1510ರಲ್ಲಿ ನಂಜೇಗೌಡ ಹಾಗೂ ಲಿಂಗಾಂಬಿಕೆ ಅವರ ಮಗನಾಗಿ ಜನಿಸಿದ ಕೆಂಪೇಗೌಡರು, ವಿಜಯನಗರ ಅರಸರ ಸಾಮಂತರಾಗಿದ್ದ ತಂದೆ ನಂಜೇಗೌಡರೊಂದಿಗೆ ಕ್ರಿ.ಶ. 1515ರಲ್ಲಿ ವಿಜಯನಗರದ ವಿಜಯದಶಮಿಯಲ್ಲಿ ಮೊದಲ ಸಲ ಪಾಲ್ಗೊಂಡಿದ್ದರು. ಅಲ್ಲಿನ ವೈಭವ ಹಾಗೂ ಸುಭಿಕ್ಷತೆಗೆ ಬೆರಗಾದ ಅವರು, ಅಂತಹದ್ದೇ ಮಹಾನಗರ ಕಟ್ಟುವ ಕನಸು ಕಂಡರು. ತಾವು ಪಟ್ಟಕ್ಕೆ ಬಂದ ನಂತರ ಕ್ರಿ.ಶ.1535ರಲ್ಲಿ ಯಲಹಂಕದಿಂದ 8 ಕಿ.ಮೀ. ದೂರದಲ್ಲಿ ಬೆಂಗಳೂರು ನಗರ ಸ್ಥಾಪಿಸಿದರು’ ಎಂದು ಚರಿತ್ರೆಯನ್ನು ಮೆಲುಕು ಹಾಕಿದರು.

‘ನಗರ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿದ್ದ ಕೆಂಪೇಗೌಡರು ಕೃಷಿಕರು, ಕುಶಲಕರ್ಮಿಗಳು, ವ್ಯಾಪಾರಸ್ಥರು, ಜನಸಾಮಾನ್ಯರ ಅಗತ್ಯಗಳನ್ನು ಅರಿತು ಎಲ್ಲರಿಗೂ ವಿಷೇಶವಾದ ಪ್ರಾತಿನಿಧ್ಯ ನೀಡಿದರು. ಇಂದಿಗೂ ಬೆಂಗಳೂರಿನಲ್ಲಿ 64 ವಿವಿಧ ಕುಶಲಕರ್ಮಿಗಳ ಹೆಸರಿನ ಪ್ರದೇಶಗಳಿವೆ.‌ ಕೃಷಿ ಹಾಗೂ ಕುಡಿಯುವ ನೀರಿಗೆ ಮಾದರಿಯಾದ ಜಲ ವ್ಯವಸ್ಥೆ ರೂಪಿಸಲಾಗಿತ್ತು. ನಗರದಲ್ಲೇ 360 ಕೆರೆ ನಿರ್ಮಿಸಿದರು. ಅವರ ಕಾಲದಲ್ಲಿ ನಾಡಿನಾದ್ಯಂತ 1,500 ಕೆರೆಗಳನ್ನು ನಿರ್ಮಿಸಲಾಗಿತ್ತು’ ಎಂದು ಬಣ್ಣಿಸಿದರು.

‘ವಿಜಯನಗರ ಸಾಮ್ರಾಜ್ಯದ ಪ್ರಬಲ ದೊರೆ ಕೃಷ್ಣದೇವರಾಯ ನಿಧನದ ನಂತರ, ಹಲವು ಸಾಮಂತ ರಾಜರು ದಂಗೆ ಎದ್ದರು. ಆದರೆ, ಕೆಂಪೇಗೌಡರು ರಾಜನಿಷ್ಠೆ ಅಚಲವಾಗಿತ್ತು. ಅವರ ರಾಜಭಕ್ತಿ ಮೆಚ್ಚಿ ವಿಜಯನಗರದ ಅರಸ ಅಚ್ಯುತರಾಯ ಬೆಂಗಳೂರು ನಗರ ನಿರ್ಮಾಣಕ್ಕೆ ಧನಸಹಾಯ ನೀಡಿದ. ಬೆಂಗಳೂರು ಕೋಟೆ ನಿರ್ಮಾಣಕ್ಕೆ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಮ್ಮ ತಮ್ಮನ್ನು ತಾವು ಆತ್ಮಾಹುತಿ ಮಾಡಿಕೊಂಡಿದ್ದರು ಎಂದು ಇತಿಹಾಸದ ದಾಖಲೆಗಳು ಹೇಳುತ್ತವೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಸಂಗಪ್ಪ ಬಾಡಗಿ, ‘ಕೆಂಪೇಗೌಡರ ಸಾಮಾಜಿಕ ಕಳಕಳಿ ಮಾದರಿಯಾಗಿದೆ. ಕೆಂಪೇಗೌಡರಲ್ಲಿ ಉತ್ತಮವಾದ ನೈತಿಕ ಮೌಲ್ಯಗಳನ್ನು ರೂಪಿಸುವಲ್ಲಿ ಅವರ ತಾಯಿಯ ಪಾತ್ರ ಮಹತ್ವದ್ದಾಗಿತ್ತು’ ಎಂದು ಹೇಳಿದರು.

ಹೆಚ್ಚುವರಿ ತಹಶಿಲ್ದಾರ ಪ್ರಕಾಶ್ ನಾಸಿ, ಮಲೆನಾಡು ಒಕ್ಕಲಿಗ ಸಂಘದ ಅಧ್ಯಕ್ಷ ರತ್ನಾಕರ ಗೌಡ ಹಾಗೂ ಕಾರ್ಯದರ್ಶಿ ಮಹೇಶ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT