ಕೆಲಸ ಸ್ಥಗಿತಗೊಳಿಸಿ ಕಿಮ್ಸ್‌ ಎದುರು ಪ್ರತಿಭಟನೆ

7
ಭದ್ರತಾ ಸಿಬ್ಬಂದಿಯಿಂದ ಗುತ್ತಿಗೆ ಕಾರ್ಮಿಕರ ಮೇಲೆ ಹಲ್ಲೆ

ಕೆಲಸ ಸ್ಥಗಿತಗೊಳಿಸಿ ಕಿಮ್ಸ್‌ ಎದುರು ಪ್ರತಿಭಟನೆ

Published:
Updated:
ಭದ್ರತಾ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಹುಬ್ಬಳ್ಳಿಯ ಕಿಮ್ಸ್‌ ಎದುರು ‍ಪ್ರತಿಭಟನೆ ನಡೆಸುತ್ತಿದ್ದ ಗುತ್ತಿಗೆ ಕಾರ್ಮಿಕರ ಮನವೊಲಿಸಲು ಮುಂದಾದ ವಿದ್ಯಾನಗರ ಪಿಎಸ್‌ಐ ಎಸ್‌.ಪಿ. ನಾಯ್ಕ

ಹುಬ್ಬಳ್ಳಿ: ಬೆಳಿಗ್ಗೆ ಬಯೊಮೆಟ್ರಿಕ್‌ ಯಂತ್ರಕ್ಕೆ ಬೆರಳಚ್ಚು ನೀಡುವ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯು ಗುತ್ತಿಗೆ ಪೌರಕಾರ್ಮಿಕ ಶೇಖರಪ್ಪ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ಗುತ್ತಿಗೆ ಕಾರ್ಮಿಕರು, ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಇಲ್ಲಿನ ಕಿಮ್ಸ್‌ ಸಂಸ್ಥೆಯ ಮುಂಭಾಗದಲ್ಲಿ ಗುರುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೂ ಪ್ರತಿಭಟನೆ ನಡೆಸಿದ ಪೌರಕಾರ್ಮಿಕರು ಕೂಡಲೇ ಪ್ರಕರಣದಲ್ಲಿ ಕಿಮ್ಸ್‌ ನಿರ್ದೇಶಕರು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಗುತ್ತಿಗೆ ಕಾರ್ಮಿಕ ಮಹಿಳೆ ಮಂಜುಳಾ ಚವ್ಹಾಣ, ‘ಬಯೊಮೆಟ್ರಿಕ್‌ ಗುರುತು ನೀಡುವ ಸಂದರ್ಭದಲ್ಲಿ ಆದ ಸಣ್ಣ ವಾಗ್ವಾದವು ಕ್ರಮೇಣ ಗಂಭೀರ ಸ್ವರೂಪಕ್ಕೆ ತಿರುಗಿತು. ಭದ್ರತಾ ಸಿಬ್ಬಂದಿ ಶೇಖರಪ್ಪ ಅವರ ಕೊರಳು ಹಿಡಿದು ಗೋಡೆಗೆ ಒತ್ತಿ ಹಲ್ಲೆ ನಡೆಸಿದರು. ಅದನ್ನು ಬಿಡಿಸಲು ಮುಂದಾದ ರತ್ನಾ ಕಮ್ಮಾರ ಎಂಬುವವರ ಮೇಲೆಯೂ ಹಲ್ಲೆ ನಡೆಸಿದರು’ ಎಂದು ದೂರಿದರು.

ವೇತನ ಹೆಚ್ಚಳ ಮಾಡಿ: ಸರ್ಕಾರಿ ಸಂಸ್ಥೆಯಾಗಿರುವ ಕಿಮ್ಸ್‌ನಲ್ಲಿ ಕಳೆದ 15–20 ವರ್ಷಗಳಿಂದ ಕೆಲಸ ಮಾಡುತ್ತಿದ್ದರೂ ನಮ್ಮ ವೇತನ ಹೆಚ್ಚಳ ಮಾಡಿಲ್ಲ. ನಾಲ್ಕು ತಿಂಗಳಿಂದ ₹ 5 ಸಾವಿರ ವೇತನ ಕೊಡುತ್ತಿದ್ದರು. ಅದನ್ನೂ ಕೊಟ್ಟಿಲ್ಲ. ಕೂಡಲೇ ಬಾಕಿ ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಶೇಖಪ್ಪ ಕುಂದಗೋಳ, ಸರೋಜಾ, ಮಹಾದೇವಿ ದೊಡ್ಡಮನಿ ಇದ್ದರು. ವಿದ್ಯಾನಗರ ಪೊಲೀಸ್‌ ಇನ್‌ಸ್ಪೆಕ್ಟರ್‌ ರತನಕುಮಾರ್‌ ಜೀರಗಾಳ ನೇತೃತ್ವದಲ್ಲಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !