ಸೋಮವಾರ, ಜನವರಿ 20, 2020
18 °C
2007ರ ಕಿಮ್ಸ್‌ ಶೂಟೌಟ್ ಪ್ರಕರಣ

ಪ್ರಕರಣ ಅನೂರ್ಜಿತಗೊಳಿಸಿದ ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಕಿಮ್ಸ್‌ ವೈದ್ಯರ ಕ್ವಾರ್ಟರ್ಸ್‌ನಲ್ಲಿ 2007ರಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಇಲ್ಲಿನ ಹೈಕೋರ್ಟ್ ಅನೂರ್ಜಿತಗೊಳಿಸಿದೆ.

ಇದರಿಂದಾಗಿ ಅರ್ಜಿದಾರರಾದ ಕಿಮ್ಸ್‌ನ ಅಂದಿನ ಡೀನ್ ಡಾ. ಮಲ್ಲಿಕಾರ್ಜುನ ಹಿರೇಮಠ ಮತ್ತು ವಿಜಯ ಕುಲಕರ್ಣಿ (ಕಾಂಗ್ರೆಸ್ ಮುಖಂಡ ವಿನಯ ಕುಲಕರ್ಣಿ ಸೋದರ) ಅವರ ವಿರುದ್ಧ ಕೆಳ ಹಂತದ ನ್ಯಾಯಲಯದಲ್ಲಿ ಬಾಕಿ ಇದ್ದ ವಿಚಾರಣಾ ಪ್ರಕ್ರಿಯೆ ರದ್ದುಗೊಂಡಂತಾಗಿದೆ. 

2007ರ ಡಿ. 10ರಂದು ರಾತ್ರಿ 10.45ರ ಸುಮಾರಿಗೆ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿರು ವೈದ್ಯರ ಕ್ವಾರ್ಟರ್ಸ್‌ನಲ್ಲಿ ಡಾ. ಶಿವಾನಂದ ದೊಡ್ಡಮನಿ ಎಂಬುವವರ ಮೇಲೆ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದರು. ಪ್ರಕರಣದಲ್ಲಿ ಗಾಯಗೊಂಡ ಅವರು ಬದುಕುಳಿದರು. ಈ ಪ್ರಕರಣ ವಿದ್ಯಾನಗರ ಠಾಣೆಯಲ್ಲಿ ದಾಖಲಾಗಿತ್ತು.

ಪ್ರಕರಣದ ಪ್ರಾಥಮಿಕ ತನಿಖೆಯನ್ನು ಸ್ಥಳೀಯ ಪೊಲೀಸರೇ ಕೈಗೊಂಡರು. ನಂತರ ಪ್ರಕರಣವನ್ನು ಸಿಒಡಿಗೆ ಹಸ್ತಾಂತರಿಸಲಾಗಿತ್ತು. ಆದರೆ ಮೊದಲ ಇಬ್ಬರು ಆರೋಪಿಗಳು ಸಿಗಲೇ ಇಲ್ಲ. ಮೂರನೇ ಆರೋಪಿಯಾಗಿ ಅಂದಿನ ಕಿಮ್ಸ್ ಡೀನ್‌ ಡಾ. ಮಲ್ಲಿಕಾರ್ಜುನ ಹಿರೇಮಠ, ನಂತರದಲ್ಲಿ ಕ್ರಮವಾಗಿ ಬಂಗಾರೇಶ ಹಿರೇಮಠ, ವಿಶ್ವಪ್ರಕಾಶ ಉಳ್ಳಾಗಡ್ಡಿಮಠ. ವಿಜಯಕುಮಾರ ಕುಲಕರ್ಣಿ, ಶ್ಯಾಮ ಜಾಧವ ಅವರ ಮೇಲೆ ಪ್ರಕರಣ ದಾಖಲಾಗಿತ್ತು. 

ಪ್ರಕರಣ ತನಿಖೆ ನಡೆಸಿದ ಸಿಒಡಿ ಅಧಿಕಾರಿಗಳು ಪ್ರಕರಣದ ನಿಜವಾದ ಆರೋಪಿಗಳು ಸಿಗಲಿಲ್ಲ ಎಂದು ನ್ಯಾಯಾಲಯಕ್ಕೆ ಸಿ–ವರದಿ ಸಲ್ಲಿಸಿದರು. ಇದನ್ನು ಪ್ರಶ್ನಿಸಿ ಹುಬ್ಬಳ್ಳಿಯ 2ನೇ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿತ್ತು. ಡಾ. ಮಲ್ಲಿಕಾರ್ಜುನ ಹಿರೇಮಠ ಮತ್ತು ವಿಜಯ ಕುಲಕರ್ಣಿ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಇವರು ಹೈಕೋರ್ಟ್‌ ಮೊರೆ ಹೋಗಿದ್ದರು. 

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಪಿ.ಜಿ.ಎಂ.ಪಾಟೀಲ ಅವರಿದ್ದ ನ್ಯಾಯಪೀಠ, ಇವರ ವಾದವನ್ನು ಎತ್ತಿಹಿಡಿದು, ಪ್ರಕರಣವನ್ನು ಅನೂರ್ಜಿತಗೊಳಿಸಿದೆ.

ಅರ್ಜಿದಾರರಲ್ಲಿ ವಿಜಯ ಕುಲಕರ್ಣಿ ಪರ ರಾಜಾ ವೆಂಕಟಪ್ಪ ನಾಯಕ್ ಮತ್ತು ಕೆ.ಎಸ್.ಪಾಟೀಲ ಅವರು ವಾದ ಮಂಡಿಸಿದರು. ಡಾ. ಮಲ್ಲಿಕಾರ್ಜುನ ಹಿರೇಮಠ ಪರ ಎಂ.ಬಿ.ಹಿರೇಮಠ ವಾದ ಮಂಡಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು