ಕೆಎಲ್‌ಇ ಸೊಸೈಟಿ ಕಾಲೇಜಿಗೆ ಪ್ರಶಸ್ತಿ

ಶುಕ್ರವಾರ, ಏಪ್ರಿಲ್ 19, 2019
22 °C
ಕಾನೂನು ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಕ್ರಿಕೆಟ್‌ ಟೂರ್ನಿ

ಕೆಎಲ್‌ಇ ಸೊಸೈಟಿ ಕಾಲೇಜಿಗೆ ಪ್ರಶಸ್ತಿ

Published:
Updated:
Prajavani

ಹುಬ್ಬಳ್ಳಿ: ಮಹತ್ವದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಬೆಂಗಳೂರಿನ ಕೆಎಲ್‌ಇ ಸೊಸೈಟಿಯ ಕಾನೂನು ಕಾಲೇಜು ತಂಡ, ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಕ್ರಿಕೆಟ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಯಿತು.

ಎಸ್‌ಡಿಎಂ ವೈದ್ಯಕೀಯ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಎಲ್‌ಇ ತಂಡ 15 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 133 ರನ್‌ ಗಳಿಸಿತ್ತು. ಎದುರಾಳಿ ಬೆಂಗಳೂರಿನ ಸಿಎಂಆರ್‌ ಕಾಲೇಜು ತಂಡದವರು ನಿಗದಿತ ಓವರ್‌ಗಳು ಪೂರ್ಣಗೊಂಡಾಗ ಎಂಟು ವಿಕೆಟ್‌ ನಷ್ಟಕ್ಕೆ 110 ರನ್‌ ಗಳಿಸಲಷ್ಟೇ ಶಕ್ತವಾದರು. ಇದರಿಂದ ಕೆಎಲ್‌ಇ ತಂಡ 23 ರನ್‌ ಗೆಲುವು ತನ್ನದಾಗಿಸಿಕೊಂಡಿತು. 43 ರನ್‌ ಗಳಿಸಿ ಮತ್ತು ಎರಡು ಸ್ಟಂಪ್‌ ಔಟ್‌ ಮಾಡಿದ ಅಬ್ಬಯ್ಯ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಫೈನಲ್‌ ಪಂದ್ಯ ಮೊದಲು ನಗರದ ಬಿವಿಬಿ ಕಾಲೇಜು ಮೈದಾನದಲ್ಲಿ ನಿಗದಿಯಾಗಿತ್ತು. ಆದರೆ, ಶನಿವಾರ ಜೋರು ಮಳೆ ಸುರಿದ ಕಾರಣ ಮೈದಾನ ಪೂರ್ತಿ ಒದ್ದೆಯಾಗಿತ್ತು. ಆದ್ದರಿಂದ ಪಂದ್ಯವನ್ನು ಎಸ್‌ಡಿಎಂ ಅಂಗಳಕ್ಕೆ ಸ್ಥಳಾಂತರ ಮಾಡಲಾಯಿತು. ಓವರ್‌ಗಳನ್ನು 20ರಿಂದ 15ಕ್ಕೆ ಕಡಿತ ಮಾಡಲಾಗಿತ್ತು.

ಮೂರನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಕೋಲಾರದ ಸರ್ಕಾರಿ ಕಾನೂನು ಕಾಲೇಜು ತಂಡ ಗೆಲುವು ಪಡೆಯಿತು. ಮೈಸೂರಿನ ಜೆಎಸ್‌ಎಸ್‌ ಕಾನೂನು ಕಾಲೇಜು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ನಾಲ್ಕು ದಿನ ನಡೆದ ಟೂರ್ನಿಯಲ್ಲಿ ಒಟ್ಟು 24 ತಂಡಗಳು ಪಾಲ್ಗೊಂಡಿದ್ದವು. ಚಾಂಪಿಯನ್‌ ತಂಡದ ಆಟಗಾರ ಸೂರಜ್‌ ಪ್ರತಾಪಸಿಂಗ್ ಟೂರ್ನಿ ಶ್ರೇಷ್ಠ ಗೌರವ ಪಡೆದರು. ಕೆಎಲ್‌ಇ ಸಂಸ್ಥೆಯ ಗುರುಸಿದ್ದಪ್ಪ ಕೋತಂಬ್ರಿ ಕಾನೂನು ಕಾಲೇಜು ಆತಿಥ್ಯ ವಹಿಸಿತ್ತು.

ಎಸ್‌.ಕೆ. ಕಲಾ ಮತ್ತು ಎಸ್ಎಸ್‌ಕೆ ಕೋತಂಬ್ರಿ ಕಾಲೇಜಿನ ಪ್ರಾಚಾರ್ಯ ಎಲ್‌.ಡಿ. ಹೊರಕೇರಿ, ಜಿ.ಕೆ. ಕಾನೂನು ಕಾಲೇಜಿನ ಪ್ರಾಚಾರ್ಯೆ ಡಾ. ಶಾರದಾ ಜಿ. ಪಾಟೀಲ, ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ನಿರ್ದೇಶಕ ಡಾ. ಖಾಲೀದ್‌ ಖಾನ್‌, ದೈಹಿಕ ಶಿಕ್ಷಣ ನಿರ್ದೇಶಕ ಬಾಹುಬಲಿ ಕುರಕುರಿ ಪಾಲ್ಗೊಂಡಿದ್ದರು.

ಚೈತ್ರಾ ಸ್ವಾಗತ ಗೀತೆ ಹಾಡಿದರು. ಡಾ.ಎಸ್‌.ಎಂ. ಹಳ್ಳೂರ, ಅಕ್ಷಿತಾ ಜೈನ್‌ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !