ಭಾನುವಾರ, ಡಿಸೆಂಬರ್ 8, 2019
21 °C
ಮೂರು ದಿನಗಳ ಹರಿದಾಸ ಹಬ್ಬ ಆರಂಭ: ತೀರ್ಥಾಚಾರ್‌ ಅನಿಸಿಕೆ

ಜ್ಞಾನವೇ ಎಲ್ಲಕ್ಕಿಂತ ಶ್ರೇಷ್ಠ ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹುಬ್ಬಳ್ಳಿ: ಮನದ ಅಂಧಕಾರ ಅಳಿಸಿ ಬೆಳಕು ಹರಡಿಸುವ ಶಕ್ತಿ ಜ್ಞಾನ ಹಾಗೂ ತತ್ವಜ್ಞಾನಗಳಿಗಿದೆ. ಆದ್ದರಿಂದ ಎಲ್ಲರೂ ಜ್ಞಾನ ಸಂಪಾದಿಸಲು ಒತ್ತು ನೀಡಬೇಕು ಎಂದು ಬ್ರಹ್ಮಣ್ಯ ತೀರ್ಥಾಚಾರ್‌ ಹೇಳಿದರು.

ಹರಿದಾಸ ಸೇವಾ ಪ್ರತಿಷ್ಠಾನ ನಗರದ ಗುಜರಾತ್‌ ಭವನದಲ್ಲಿ ಮೂರು ದಿನ ಹಮ್ಮಿಕೊಂಡಿರುವ ಹರಿದಾಸ ಹಬ್ಬ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು ‘ನಮ್ಮೊಳಗಿನ ಅರಿವಿನ ಬೆಳಕು ಯಾವಾಗಲೂ ಪ್ರಜ್ವಲಿಸುತ್ತಿರಬೇಕು. ವಿಶ್ವಕ್ಕೆ ಜ್ಞಾನದ ಬೆಳಕು ಕೊಟ್ಟಿದ್ದು ಭಾರತ. ಅದರಂತೆ, ಮಧ್ವಾಚಾರ್ಯರು ಜಗತ್ತಿಗೆ ಕೊಟ್ಟಿದ್ದು ಎಲ್ಲರೂ ಒಪ್ಪುವಂತ ದಾಸತತ್ವ’ ಎಂದರು.

‘ಮನುಷ್ಯ ಯಾವಾಗಲೂ ಬೀಗಬಾರದು. ಗುರು, ಹಿರಿಯರನ್ನು ಗೌರವದಿಂದ ಕಂಡು ಬಾಗುತ್ತಲೇ ಬದುಕಬೇಕು. ಎಲ್ಲರೂ ಹರಿಯ ದಾಸರಾಗಬೇಕು. ದಾಸರ ಹಾಡುಗಳಲ್ಲಿರುವ ಪ್ರತಿ ಪದದ ಅರ್ಥವನ್ನು ಗಮನವಿಟ್ಟು ಕೇಳಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಹರಿದಾಸರಿಗೆ ಯಾವುದೇ ಜಾತಿ, ಮತ, ಪಂಥ ಭೇದವಿಲ್ಲ. ಜೀವನದಲ್ಲಿ ಏನಾದರೂ ಆಗು, ಮೊದಲು ಮನುಷ್ಯನಾಗು ಎಂದು ಹರಿದಾಸರು ಹೇಳಿದ್ದಾರೆ’ ಎಂದರು.

‘ಹರಿದಾಸನನ್ನು ಒಲಿಸಿಕೊಳ್ಳಬೇಕು ಎಂದು ಸಾಕಷ್ಟು ಜನ ಉಪವಾಸ ಮಾಡುತ್ತಾರೆ. ಆದರೆ, ಉಪವಾಸ ಮಾಡುವಾಗ ಅವರಲ್ಲಿ ದೇವರ ಬಗ್ಗೆ ನಿಜವಾದ ಭಕ್ತಿ ಇರುವುದಿಲ್ಲ. ಆದ್ದರಿಂದ ಉಪವಾಸ ಮಾಡುವುದನ್ನು ಬಿಟ್ಟು ಏಕಾದಶಿ ದಿನದಂದು ಮಾತ್ರ ಭಕ್ತಿಯಿಂದ ಉಪವಾಸ ಮಾಡಿದರೆ ಸಾಕು’ ಎಂದು ತೀರ್ಥಾಚಾರ್‌ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಯಚೂರು ಶೇಷಗಿರಿದಾಸ್‌ ‘ಪ್ರತಿ ವರ್ಷ ನಡೆಸುವ ಹರಿದಾಸ ಹಬ್ಬದಲ್ಲಿ ನೂರಾರು ದಾಸ, ದಾಸಿಯರು ಪಾಲ್ಗೊಳ್ಳುತ್ತಾರೆ. ಇದರಿಂದ ಕಾರ್ಯಕ್ರಮದ ಮೆರುಗು ಹೆಚ್ಚುತ್ತದೆ’ ಎಂದರು.

ಹೆಸರಾಂತ ಗಾಯಕರಾದ ಅನಂತ ಕುಲಕರ್ಣಿ ಮತ್ತು ಪ್ರಸನ್ನ ಕೊರ್ತಿ ಅವರು ದಾಸ ಯುಗಳಗಾನ ವೈಭವ ಕಾರ್ಯಕ್ರಮ ನಡೆಸಿಕೊಟ್ಟರು.

ಶನಿವಾರ ಸಂಜೆ ನಾಲ್ಕು ಗಂಟೆಗೆ ರವಿ ಶೆಟ್ಟಿ ಧಾರವಾಡ ಅವರಿಂದ ವ್ಯಾಸ ದಾಸ ಗಾನ ಜ್ಞಾನಾಮೃತ ವೈಭವ ಜರುಗಲಿದೆ. ವಿಜಯೇಂದ್ರಾಚಾರ್‌ ಮತ್ತು ಸಂಗೀತಾ ಬಾಲಚಂದ್ರ ಪಾಲ್ಗೊಳ್ಳಲಿದ್ದಾರೆ.

ಡಾ. ವಿ.ಜಿ. ನಾಡಗೌಡ, ಡಾ. ಎಸ್‌.ಜಿ. ನಾಡಗೌಡ, ರಮೇಶ ಚವಟಿ, ಕೆ.ವಿ. ವ್ಯಾಸಸಮುದ್ರ, ವಿ.ಎಲ್‌. ಅಂಬೇಕರ್‌, ಮನೋಹರ ಪರ್ವತಿ ಇದ್ದರು. ಮುರಳಿ ರಾಯಚೂರು ನಿರೂಪಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು