ಶನಿವಾರ, ಡಿಸೆಂಬರ್ 14, 2019
22 °C
ಅಂಬೇಡ್ಕರ್‌ ಪರಿನಿಬ್ಬಾಣದ ಚೈತ್ಯಭೂಮಿಗೆ ನಮನ ಸಲ್ಲಿಸಲು ತೆರಳಿದ ಸೈನಿಕದಳದ ಸದಸ್ಯರು

ಜ್ಞಾನವೇ ಬದುಕಿನ ಮಾರ್ಗ: ಭಂತೆ ಮೈತ್ರೇಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಅಖಂಡ ಭಾರತದಲ್ಲಿ ಎಲ್ಲರೂ ಪ್ರಬುದ್ಧರಾಗಬೇಕು ಎಂಬುದು ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಅಂತಿಮ ಆಸೆಯಾಗಿತ್ತು. ಈ ಆಸೆ ಈಡೇರಬೇಕಾದರೆ ಜ್ಞಾನಮಾರ್ಗ ಅನುಸರಿಸಬೇಕು, ದಲಿತರು ಹೆಚ್ಚು ವಿದ್ಯಾವಂತರಾಗಬೇಕು ಎಂದು ಬೌದ್ಧಧರ್ಮದ ಗುರು ಭಂತೆ ಮಾತಾ ಮೈತ್ರೇಯಿ ಹೇಳಿದರು.

ಅಂಬೇಡ್ಕರ್‌ ಅವರ 63ನೇ ಮಹಾ ಪರಿನಿಬ್ಬಾಣದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಂಬೈನ ದಾದರ್‌ನಲ್ಲಿರುವ ಚೈತ್ಯ ಭೂಮಿಗೆ ತೆರಳಿದ ಇಲ್ಲಿನ ಉತ್ತರ ಕರ್ನಾಟಕ ಸಮತಾ ಸೈನಿಕದಳ ಹಾಗೂ ಬಾಬಾಸಾಹೇಬ್‌ ಅಂಬೇಡ್ಕರ್‌ ಜ್ಞಾನಪ್ರಸಾರ ಕೇಂದ್ರ ಸಮಿತಿಯ ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಉಚಿತ ಪ್ರವಾಸ ಎನ್ನುವ ಕಾರಣಕ್ಕಷ್ಟೇ ದಾದರ್‌ಗೆ ತೆರಳದೆ, ಅಂಬೇಡ್ಕರ್ ಅವರ ಋಣ ತೀರಿಸಲು ಹೋಗಬೇಕು. ದಲಿತರಿಗೆ ವರ ಕೊಡುವ ಶಕ್ತಿ ಯಾರಿಗೂ ಇಲ್ಲ. ಆ ಶಕ್ತಿಯನ್ನು ನೀವೇ ಗಳಿಸಿಕೊಳ್ಳಬೇಕು. ಹೋರಾಟದಲ್ಲಿ ಹೆಚ್ಚು ಸಮಯ ಕಳೆದುಬಿಡುವ ಬದಲು ಜ್ಞಾನದ ಬೆನ್ನು ಹತ್ತಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ಮೊದಲಿನಿಂದಲೂ ದಲಿತರಲ್ಲಿಯೇ ಎಡ–ಬಲ ಎನ್ನುವ ಬೇಧವಿದೆ. ಇತ್ತೀಚಿನ ವರ್ಷಗಳಲ್ಲಿ ಇದು ಕಡಿಮೆಯಾಗಿದ್ದು, ನಿಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮಾನಸಿಕವಾಗಿ ಒಂದಾಗಬೇಕು. ಯುವಕರು ಸಣ್ಣ ವಯಸ್ಸಿನಿಂದಲೇ ಹೋರಾಟದಲ್ಲಿ ತೊಡಗಿಕೊಳ್ಳದೆ ಜ್ಞಾನ ಸಂಪಾದಿಸಲು ಒತ್ತು ಕೊಡಬೇಕು. ದೇಶದಲ್ಲಿ ಸಮಾನತೆ ಬರಲು ದಲಿತರು ಹೆಚ್ಚು ಭಾಷೆಗಳನ್ನು ಕಲಿಯಬೇಕು’ ಎಂದರು.

ಮುಸ್ಲಿಂ ಧರ್ಮಗುರು ಸೈಯದ್‌ ತಾಜುದ್ದೀನ್‌ ಖಾದ್ರಿ ಮಾತನಾಡಿ ‘ಭಾರತದ ಸಂವಿಧಾನ ನಮಗೆಲ್ಲರಿಗೂ ಸಮಾನವಾಗಿ ಬದುಕುವ ಹಕ್ಕುಗಳನ್ನು ಕೊಟ್ಟಿದೆ. ನಮ್ಮ ದೇಶದ ಸಂವಿಧಾನದ ಬಗ್ಗೆ ತಿಳಿದುಕೊಳ್ಳಲು ವಿದೇಶಿಗರು ಕೂಡ ಬರುತ್ತಾರೆ’ ಎಂದರು. ಎಲ್ಲ ಧರ್ಮದವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ್ದು ಹೆಮ್ಮೆಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮತಾ ಸೈನಿಕ ದಳದ ಅಧ್ಯಕ್ಷ ಪಿತಾಂಬ್ರಪ್ಪ ಬಿಳಾರ ಅವರ ನೇತೃತ್ವದಲ್ಲಿ ದಳದ ಪದಾಧಿಕಾರಿಗಳು ದಾದರ್‌ಗೆ ತೆರಳಿದರು. ದಳದ ಉತ್ತರ ಕರ್ನಾಟಕ ವಿಭಾಗದ ಕಾರ್ಯದರ್ಶಿ ರಾಹುಲ ಎಸ್‌. ವಾಘ್ಮೋರೆ, ಮುಲ್ಲಾ ಸಾಬ್‌, ಬಸಪ್ಪ ಮಾದರ, ಎಸ್‌.ವಿ. ಪಾಟೀಲ, ಮಾಜಿ ಸೈನಿಕ ಹನುಮಂತಪ್ಪ, ಮೇಘರಾಜ ಹಿರೇಮನಿ, ಶೋಭಾ, ಇಂದುಮತಿ, ಮೀನಾಕ್ಷಿ, ರಾಜಪ್ಪ ಕಾಳೆ, ಬಸವರಾಜ ವಡ್ಡರ, ರೇವಣಸಿದ್ದಪ್ಪ ಹೊಸಮನಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)