ಮೊರಂ ಮಣ್ಣು ಹಾಕಿಸಲು ಕೋನರಡ್ಡಿ ಒತ್ತಾಯ

ಅಣ್ಣಿಗೇರಿ: ‘ತಾಲ್ಲೂಕಿನ ರೈತರ ಜಮೀನುಗಳಲ್ಲಿ ಚಿಗರೆ ಹಾವಳಿಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು. ಗ್ರಾಮದ ಸುತ್ತಮುತ್ತಲಿರುವ ಚಕ್ಕಡಿ ರಸ್ತೆಗಳಿಗೆ ಮೊರಂ ಮಣ್ಣು ಹಾಕಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಆಗ್ರಹಿಸಿದರು.
ಅವರು ಶುಕ್ರವಾರ ಪಟ್ಟಣದ ರೈತರೊಂದಿಗೆ ತಹಶೀಲ್ದಾರ್ ಕಚೇರಿಗೆ ತೆರಳಿ, ‘ಅಣ್ಣಿಗೇರಿ ಹಾಗೂ ನವಲಗುಂದ ತಾಲ್ಲೂಕುಗಳ ಕೆಲವು ಗ್ರಾಮಗಳ ರೈತರ ಜಮೀನುಗಳಿಗೆ ನುಗ್ಗುವ ಚಿಗರೆಗಳನ್ನು ಸ್ಥಳಾಂತರಿಸಬೇಕು’ ಎಂದರು.
‘ಮುಂಗಾರು ಹಂಗಾಮಿನಿ ಹೆಸರು, ಶೇಂಗಾ, ಈರುಳ್ಳಿ, ಮೆಣಸಿನಕಾಯಿ ಮುಂತಾದ ಬೆಳೆಗಳು ಬಿತ್ತಿ ಮೊಳಕೆಯೊಡೆದಿವೆ. ಚಿಗರೆಗಳು ಹಿಂಡುಹಿಂಡಾಗಿ ಬಂದು ಜಮೀನಿನಲ್ಲಿರುವ ಬೆಳೆಗಳನ್ನು ತಿಂದು ಹಾನಿಮಾಡುತ್ತಿವೆ. ಅಣ್ಣಿಗೇರಿ ತಾಲ್ಲೂಕಿನ ತುಪ್ಪದಕುರಹಟ್ಟಿ, ಬಸಾಪೂರ, ನಾವಳ್ಳಿ, ಶಲವಡಿ, ಇಬ್ರಾಹಿಂಪೂರ, ಕಿತ್ತೂರ, ಅಡ್ನೂರ, ಹಳ್ಳಿಕೇರಿ, ಸಾಸ್ವಿಹಳ್ಳಿ, ಕೊಂಡಿಕೊಪ್ಪ, ಸೈದಾಪುರ, ಮಜ್ಜಿಗುಡ್ಡ, ಭದ್ರಾಪೂರ, ಖನ್ನೂರು, ಬಾಗೂರ ಸೇರಿದಂತೆ ಹಲವೆಡೆ ಚಿಗರೆ ಹಾವಳಿ ಹೆಚ್ಚಾಗಿದೆ’ ಎಂದರು.
‘ರಾಡಿಹಳ್ಳ ಮತ್ತು ಯರನಹಳ್ಳಗಳ ಪ್ರವಾಹದಿಂದ ಹಾನಿಯಾದ ರೈತರ ಜಮೀನುಗಳಿಗೆ ಪರಿಹಾರ ನೀಡಬೇಕು. ಎರಡೂ ಹಳ್ಳಗಳಿಂದ ಹೂಳೆತ್ತಲು ಶೀಘ್ರವೇ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ರೈತರಾದ ಭಗವಂತಪ್ಪ ಪುಟ್ಟಣ್ಣವರ, ಶಿವಣ್ಣ ಹುಬ್ಬಳ್ಳಿ, ಬಸವರಾಜ ಕೋಳಿವಾಡ, ದಾವಲಸಾಬ ದರವಾನಿ, ವೆಂಕಣ್ಣ ನಾವಳ್ಳಿ, ಹಸನಸಾಬ ಗಡ್ಡದ, ಪುರದಪ್ಪ ಹವಾಲ್ದಾರ, ಕೃಷ್ಣಪ್ಪ ದ್ಯಾವನೂರ, ಖಾದರಸಾಬ ಮುಳಗುಂದ, ಡಿ.ಬಿ. ನರಗುಂದ, ಸಲೀಂ ಅಗಸೀಬಾಗಿಲ, ದ್ಯಾಮಣ್ಣ ಜಂತ್ಲಿ, ಶ್ರೀಕಾಂತ ಕೋಳಿವಾಡ, ಬುಡನಸಾಬ ಅಸುಂಡಿ, ಅಮೀನಸಾಬ ನಡಕಟ್ಟಿನ, ನಿಂಗಪ್ಪ ಸಮಾಜಿ, ಇಬ್ರಾಹಿಂ ಲೋಕಾಪೂರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.