ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಕೆಪಿಎಲ್‌ ಅನುಮಾನ

ಹೊಸ ಸ್ಥಳದಲ್ಲಿ ಆಡಿಸಲು ಕೆಎಸ್‌ಸಿಎ ಚಿಂತನೆ, ವಾಣಿಜ್ಯ ನಗರಿ ಬದಲು ಶಿವಮೊಗ್ಗದಲ್ಲಿ ಪಂದ್ಯ?
Last Updated 26 ಜೂನ್ 2019, 18:35 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ನಾಟಕ ಪ್ರೀಮಿಯರ್ ಲೀಗ್‌ (ಕೆಪಿಎಲ್‌) ಕ್ರಿಕೆಟ್ ಟೂರ್ನಿಯ ಎಂಟನೇ ಆವೃತ್ತಿಯ ಪಂದ್ಯಗಳು ಈ ಬಾರಿ ವಾಣಿಜ್ಯ ನಗರಿಯಲ್ಲಿ ನಡೆಯುವುದು ಅನುಮಾನವಿದೆ. ಇದರ ಬದಲು ಹೊಸ ಸ್ಥಳ ಶಿವಮೊಗ್ಗದಲ್ಲಿ ಆಯೋಜಿಸಲು ಕೆಪಿಎಲ್‌ ಆಡಳಿತ ಮಂಡಳಿ ಚಿಂತನೆ ನಡೆಸಿದೆ.

ಕೆಪಿಎಲ್‌ ಆರಂಭವಾಗಿ ಹತ್ತು ವರ್ಷಗಳ ಅವಧಿಯಲ್ಲಿ ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ಹೊರತುಪಡಿಸಿ ಬೇರೆ ಯಾವ ಊರಿನಲ್ಲಿಯೂ ಪಂದ್ಯಗಳು ನಡೆದಿಲ್ಲ. ಮೊದಲ ಬಾರಿಗೆ ಸ್ಥಳ ಬದಲಾವಣೆಗೆ ಒಲವು ತೋರಿದೆ. ಈ ಬಾರಿಯ ಕೆಪಿಎಲ್‌ ಆಗಸ್ಟ್‌ನಲ್ಲಿ ನಡೆಯಲಿದೆ.

ಹುಬ್ಬಳ್ಳಿಯಲ್ಲಿ ಮಳೆ ಸಾಧ್ಯತೆ ಹಾಗೂ ಹೊಸ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ನೇರಪ್ರಸಾರದ ಹಕ್ಕು ಪಡೆದಿರುವ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿ ಹುಬ್ಬಳ್ಳಿ ಬದಲು ಬೇರೆ ಊರಿನಲ್ಲಿ ಪಂದ್ಯ ಆಯೋಜಿಸುವಂತೆ ಆಡಳಿತ ಮಂಡಳಿಗೆ ಮನವಿ ಮಾಡಿದೆ ಎಂದು ಕೆಎಸ್‌ಸಿಎ ಮೂಲಗಳು ತಿಳಿಸಿವೆ.

ಹಿಂದಿನ ಕೆಪಿಎಲ್‌ ಟೂರ್ನಿಯ ಹುಬ್ಬಳ್ಳಿ ಆವೃತ್ತಿಯ ಪಂದ್ಯಗಳಿಗೆ ಮಳೆಯ ಕಾಟ ಎದುರಾಗಿತ್ತು. ಆಯೋಜನೆಯಾಗಿದ್ದ ಒಟ್ಟು 11 ಪಂದ್ಯಗಳ ಪೈಕಿ ಎರಡು ಪಂದ್ಯಗಳು ಮಾತ್ರ ನಡೆದಿದ್ದವು. ಉಳಿದ ಪಂದ್ಯಗಳನ್ನು ಮೈಸೂರಿಗೆ ಸ್ಥಳಾಂತರಿಸಲಾಗಿತ್ತು. ಮಳೆಯ ಕಾರಣ ಮೂರು ಪಂದ್ಯಗಳ ಟಾಸ್‌ ಕೂಡ ಆಗಿರಲಿಲ್ಲ.

‘ಹೊಸ ಕ್ರೀಡಾಂಗಣ ಹಾಗೂ ಹೊಸ ಊರುಗಳಲ್ಲಿ ಪಂದ್ಯಗಳನ್ನು ನಡೆಸಬೇಕು ಎಂದು ಬಹುವರ್ಷಗಳಿಂದ ಬೇಡಿಕೆಯಿದೆ. ಸಣ್ಣ ಊರುಗಳಲ್ಲಿ ಪಂದ್ಯಗಳನ್ನು ಆಯೋಜಿಸಿದರೆ ಹೆಚ್ಚು ಜನ ಕ್ರೀಡಾಂಗಣಕ್ಕೆ ಬರುತ್ತಾರೆ. ಶಿವಮೊಗ್ಗದಲ್ಲಿ ಪಂದ್ಯಗಳನ್ನು ನಡೆಸಿದರೆ ಈ ವರ್ಷ ಹುಬ್ಬಳ್ಳಿಯಲ್ಲಿ ಕೆಪಿಎಲ್ ಪಂದ್ಯಗಳು ಇರುವುದಿಲ್ಲ’ ಎಂದು ಕೆಎಸ್‌ಸಿಎ ಹಿರಿಯ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕೆಪಿಎಲ್‌ ಟೂರ್ನಿಯ ವೇಳೆ ಶಿವಮೊಗ್ಗದಲ್ಲಿಯೂ ಮಳೆ ಇದ್ದರೆ ಮಾತ್ರ ಹುಬ್ಬಳ್ಳಿಗೆ ಪಂದ್ಯಗಳನ್ನು ಸ್ಥಳಾಂತರಿಸುವ ವಿಚಾರ ಮಾಡಲಾಗುವುದು. ಶಿವಮೊಗ್ಗಕ್ಕೆ ಮೊದಲ ಆದ್ಯತೆ’ ಎಂದರು.

ಇದರ ಬಗ್ಗೆ ಕೆಎಸ್‌ಸಿಎ ವಕ್ತಾರ ವಿನಯ ಮೃತ್ಯುಂಜಯ ಅವರನ್ನು ಪ್ರಶ್ನಿಸಿದಾಗ ‘ಬೆಂಗಳೂರು, ಮೈಸೂರು, ಶಿವಮೊಗ್ಗ ಮತ್ತು ಹುಬ್ಬಳ್ಳಿಯಲ್ಲಿ ಪಂದ್ಯಗಳನ್ನು ನಡೆಸುವ ವಿಚಾರವಿದೆ. ಹೊಸ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸುವುದಕ್ಕೆ ಆದ್ಯತೆ ನೀಡಲಾಗುವುದು’ ಎಂದರು.

ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ ಬಾಬಾ ಭೂಸದ ಪ್ರತಿಕ್ರಿಯಿಸಿ ‘ಆಗಿನ ವಾತಾವರಣ ನೋಡಿಕೊಂಡು ನಿರ್ಧರಿಸಲಾಗುತ್ತದೆ. ಕೆಪಿಎಲ್‌ ಬಗ್ಗೆ ನಮಗೇನೂ ಮಾಹಿತಿ ಬಂದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT